Vector illustration in HD very easy to make edits. 
ನ್ಯೂಸ್

ಆಸ್ತಿ ವಿಚಾರಕ್ಕೆ ಅತ್ತೆಯನ್ನೇ ಕೊಂದ

ಬೆಂಗಳೂರು: ಆಸ್ತಿ ವಿಚಾರವಾಗಿ ಸೋದರ ಅತ್ತೆಯನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜಪೇಟೆ ನಿವಾಸಿ ಸೋಮಿನಿ ಸತ್ಯಭಾಮಾ (46) ಕೊಲೆಯಾದ ದುರ್ದೈವಿ. ಈ ಸಂಬಂಧ ಮೃತ ಮಹಿಳೆಯ ಅಣ್ಣನ ಮಗ ಚಾಮರಾಜಪೇಟೆ ನಿವಾಸಿಗಳಾದ ಸಾಗರ್ (25) ಮತ್ತು ದೂರದ ಸಂಬಂಧಿ ಅಕಾಶ್ (26) ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಟಾಫ್ ನರ್ಸ್ ಸತ್ಯಭಾಮಾ, ಐಟಿಸಿ ವಿಂಡ್ಸರ್ ಮ್ಯಾನರ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ 10.30ರಲ್ಲಿ ಕೆಲಸ ಮುಗಿಸಿ ಮನೆಗೆ ತೆರಳಲು ಹೋಟೆಲ್‌ನ ಪಾರ್ಕಿಂಗ್ ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿಗಳು ಆಕೆಯ ಮೇಲೆ ಮುಗಿಬಿದ್ದು ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿ ಆಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸತ್ಯಭಾಮಾ ಆಸ್ಪತ್ರೆಗೆ ಕರೆದೊಯ್ಯವ ವೇಳೆಗೆ ಮೃತಪಟ್ಟಿದ್ದಾರೆ.

ಸತ್ಯಭಾಮಾ ಮತ್ತು ಆಕಾಶ್ ಮನೆಯವರಿಗೂ ಆಸ್ತಿ ವಿಚಾರಕ್ಕೆ ಹಲವು ವರ್ಷಗಳಿಂದ ಗಲಾಟೆಗಳು ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಆಕಾಶ್ ಮತ್ತು ಸಾಗರ್ ಸಂಚು ರೂಪಿಸಿ ಕಾದು ಸತ್ಯಭಾಮಾ ಅವರನ್ನು ಕೊಲೆ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.