ಬೆಂಗಳೂರು: ಕೆಲಸದಿಂದ ವಜಾಗೊಳ್ಳಲು ಕಾರಣನಾದ ಎಂಬ ಕೋಪಕ್ಕೆ ನೇಪಾಳ ಮೂಲದ ವ್ಯಕ್ತಿಯನ್ನು ಸ್ನೇಹಿತನೇ ಕೊಲೆ ಮಾಡಿದ್ದಾನೆ. ಚಿಕ್ಕಬೊಮ್ಮಸಂದ್ರದ ನಿವಾಸಿ ಗಜೇಂದ್ರ ಸೌದ್ (32) ಕೊಲೆಯಾದವ. ಈ ಸಂಬಂಧ ಮೃತನ ಸ್ನೇಹಿತ ಮೈಸೂರಿನ ಸಂತೋಷ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ನೇಪಾಳ ಮೂಲದ ಗಜೇಂದ್ರ, 8 ವರ್ಷಗಳ ಹಿಂದೆ ನೌಕರಿ ಅರಸಿ ಬೆಂಗಳೂರಿಗೆ ತನ್ನ ಪರಿವಾರ ಸಮೇತ ಬಂದಿದ್ದ. ಯಲಹಂಕ ಉಪನಗರದ ಬಳಿ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿ, ಚಿಕ್ಕಬೊಮ್ಮಸಂದ್ರದಲ್ಲಿ ವಾಸವಾಗಿದ್ದ. ಹೋಟೆಲ್‌ನಲ್ಲಿ ಸಂತೋಷ್ ಕೂಡ ಕೆಲಸ ಮಾಡುತ್ತಿದ್ದ. ಕೆಲಸದ ವಿಚಾರಕ್ಕೆ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಪರಸ್ಪರ ಜಗಳ ಸಹ ಆಗಿದ್ದವು.
ಆಶಿಸ್ತು ಹಿನ್ನಲೆಯಲ್ಲಿ ಸಂತೋಷ್‌ನನ್ನು ಕೆಲಸದಿಂದ ಹೋಟೆಲ್ ಮಾಲೀಕ ತೆಗೆದುಹಾಕಿದ್ದ. ಇದೇ ಕೋಪಕ್ಕೆ ಗೆಳೆಯನ ಕೊಲೆಗೆ ಸಂಚು ರೂಪಿಸಿದ್ದ ಆರೋಪಿ, ಡೈರಿ ಸರ್ಕಲ್ ಸಮೀಪದ ಬಾರ್‌ಗೆ ಶುಕ್ರವಾರ ರಾತ್ರಿ ಕರೆದೊಯ್ದು ಕಂಠಮಟ್ಟ ಮದ್ಯ ಕುಡಿಸಿ ಅರೆ ಪ್ರಜ್ಞಾನಾಗಿದ್ದ ಗಜೇಂದ್ರನ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಅರೋಪಿ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡು ಗಜೇಂದ್ರ ಮೃತಪಟ್ಟಿದ್ದಾನೆ. ಆರೋಪಿ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.