Chidambaram: 2008 ರಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ನಂತರ ಯುಪಿಎ ಸರ್ಕಾರ ಬೇರೆ ದೇಶಗಳ ಒತ್ತಡದಿಂದಾಗಿ ಪಾಕಿಸ್ತಾನದ ಮೇಲೆ ದಾಳಿ ಮಾಡಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಪಿ. ಚಿದಂಬರಂ ತಿರುಗೇಟು ನೀಡಿದ್ದಾರೆ.
26/11 ಮುಂಬೈ ಭಯೋತ್ಪಾದಕ ದಾಳಿಯ ನಂತರ ಭಾರತ ಜಾಗತಿಕ ಒತ್ತಡದಿಂದಾಗಿ ಪ್ರತೀಕಾರ ತೀರಿಸಿಕೊಳ್ಳಲಿಲ್ಲ ಎಂದು ಸಂದರ್ಶನವೊಂದರಲ್ಲಿ ಪಿ. ಚಿದಂಬರಂ ಒಪ್ಪಿಕೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಯಕ ಮೌನ ಮುರಿದಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಾಜಿ ಗೃಹ ಸಚಿವರು, ಪ್ರಧಾನಿ ಮೋದಿಯವರ ಹೇಳಿಕೆಗಳು ಕೇವಲ ಕಲ್ಪನೆ ಎಂದು ಕರೆದರು. ಆ ಪದಗಳನ್ನು ತಮ್ಮಿಷ್ಟದಂತೆ ಕಲ್ಪಿಸಿಕೊಂಡಿರುವ ಪ್ರಧಾನಿ, ನನ್ನ ಮೇಲೆ ವಿನಾಕಾರಣ ಆರೋಪ ಮಾಡುತಿದ್ದಾರೆ ಎಂದರು. ಮೋದಿ ನೀಡಿರುವ ಹೇಳಿಕೆಯಲ್ಲಿ ಮೂರು ಭಾಗಗಳಿವೆ, ಮತ್ತು ಅವುಗಳಲ್ಲಿ ಪ್ರತಿಯೊಂದೂ ತಪ್ಪಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ್ದ ಚಿದಂಬರಂ, ಇಡೀ ಜಗತ್ತು 'ಯುದ್ಧ ಪ್ರಾರಂಭಿಸಬೇಡಿ' ಎಂದು ಹೇಳಲು ದೆಹಲಿಗೆ ಬಂದಿತು" ಎಂದು ಹೇಳಿದರು. ನಾನು ಅಧಿಕಾರ ವಹಿಸಿಕೊಂಡ ಎರಡು ಅಥವಾ ಮೂರು ದಿನಗಳ ನಂತರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಕಾಂಡೋಲೀಜಾ ರೈಸ್, ನನ್ನನ್ನು ಮತ್ತು ಪ್ರಧಾನಿಯನ್ನು ಭೇಟಿ ಮಾಡಿ ದಯವಿಟ್ಟು ಪ್ರತಿಕ್ರಿಯಿಸಬೇಡಿ ಎಂದರು. ಇದು ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಎಂದು ನಾನು ಪ್ರತಿಕ್ರಿಯೆ ನೀಡಿದೆ. ಯಾವುದೇ ಅಧಿಕೃತ ರಹಸ್ಯವನ್ನು ಬಹಿರಂಗಪಡಿಸದೆ, ನಾವು ಪ್ರತೀಕಾರದ ಕ್ರಮ ಕೈಗೊಳ್ಳಬೇಕು ಎಂದು ನನ್ನ ಮನಸ್ಸಿನಲ್ಲಿ ಯೋಚನೆ ಬಂದಿತು ಎಂದು ಅವರು ಹೇಳಿದರು.
ಈ ಹೇಳಿಕೆಯ ನಂತರ ಪ್ರಧಾನಿ ಮೋದಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಚಿದಂಬರಂ ಮತ್ತು ಆಗಿನ ಯುಪಿಎ ಸರ್ಕಾರದ ಮೇಲೆ ಟೀಕಾ ಪ್ರಹಾರ ನಡೆಸಿ, ಅಂತರರಾಷ್ಟ್ರೀಯ ಒತ್ತಡಕ್ಕೆ ಸರ್ಕಾರ ಏಕೆ ಮಣಿಯಿತು ಎಂದು ಪ್ರಶ್ನಿಸಿದರು.
ಆಗಿನ ಕಾಂಗ್ರೆಸ್ ಸರ್ಕಾರ ದೌರ್ಬಲ್ಯದ ಸಂದೇಶವನ್ನು ನೀಡಿತು. ಇತ್ತೀಚೆಗೆ, ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಮಾಜಿ ಗೃಹ ಸಚಿವರು (26/11) ಮುಂಬೈ ದಾಳಿಯ ನಂತರ, ನಮ್ಮ ಭದ್ರತಾ ಪಡೆಗಳು ಪಾಕಿಸ್ತಾನದ ಮೇಲೆ ದಾಳಿ ಮಾಡಲು ಸಿದ್ಧವಾಗಿದ್ದವು, ಆದರೆ ಬೇರೆ ದೇಶದ ಒತ್ತಡದಿಂದಾಗಿ, ಆ ಸಮಯದಲ್ಲಿ ಕಾಂಗ್ರೆಸ್ ಸರ್ಕಾರವು ನಮ್ಮ ಭದ್ರತಾ ಪಡೆಗಳನ್ನು ನಿಲ್ಲಿಸಿತು ಎಂದು ಬುಧವಾರ (ಅ 8) ಪ್ರಧಾನಿ ಮೋದಿ ಹೇಳಿದ್ದರು.(ಏಜೆನ್ಸೀಸ್)