Ketan Agarwal Murder Case Chetan Chaudhary Family Statement 
ನ್ಯೂಸ್

Ketan Agrawal Murder Case; 'ನನ್ನ ಮಗ ಅಮಾಯಕ, ಕೇತನ್​​ನ್ನು ಕಣಿವೆಗೆ ತಳ್ಳಿಲ್ಲ'; ಸಿಯಾ ಗೆಳೆಯ ಚೇತನ್​ ತಂದೆ ಹೇಳಿದ್ದು ಹೀಗೆ

ಪ್ರಮುಖ ಮುಖ್ಯಾಂಶಗಳು

  • ಕೇತನ್​​ನನ್ನು ಕೊಂದಿದ್ದು ಚೇತನ್​ ಚೌಧರಿ ಅಲ್ಲ, ಆ ಹುಡುಗಿಯೇ ಈ ಕೇಸ್​​ನಲ್ಲಿ ಮಗ ಅಮಾಯಕ
  • ಆರೋಪಿ ಸಿಯಾ ಗೋಯಲ್ ಯಾರೆಂದೇ ನಮಗೆ ಗೊತ್ತಿಲ್ಲ, ನಿನ್ನೆಯಷ್ಟೇ ಆಕೆಯ ಹೆಸರು ಕೇಳಿದ್ದೇವೆ
  • ಮಗನ ಪರ ನಿಂತ ಚೇತನ್ ಚೌಧರಿ ತಂದೆ ಬಾಬುಲಾಲ್ ಚೌಧರಿ, ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಆಕ್ರೋಶ
ಪುಣೆ: 'ನಾನು ಎಂದಿಗೂ ಆ ಹುಡುಗಿಯನ್ನು ನೋಡಿಲ್ಲ. ನನ್ನ ಮಗ ಅಮಾಯಕ, ತಪ್ಪು ಮಾಡಿಲ್ಲ. ಆತ ಕೋಟೆಯಿಂದ ದೂರ ಉಳಿದಿದ್ದನಂತೆ. ಶ್ರೀಮಂತರು ಎಂದು ಎನಿಸಿಕೊಂಡ ಅವರ ಮಗನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ' ಹೀಗೆಂದು ಮಾತನಾಡಿದ್ದು ಕೇತನ್​ ಅಗರ್ವಾಲ್​​ ಕೊಲೆ ಆರೋಪಿ ಚೇತನ್​ ಚೌಧರಿ ತಂದೆ ಬಾಬುಲಾಲ್ ಚೌಧರಿ
ಮಹಾರಾಷ್ಟ್ರದ ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಚೇತನ್ ಚೌಧರಿ ತಂದೆ ಬಾಬುಲಾಲ್ ಚೌಧರಿ ಮತ್ತು ಸಂಬಂಧಿಕರು ಮಗನ ಪರ ನಿಂತಿದ್ದಾರೆ. ಆತನಿಂದ ಯಾವುದೇ ಸಮಸ್ಯೆಯಾಗಿಲ್ಲ. ಈ ಪ್ರಕರಣದಲ್ಲಿ ಬಲಿಪಶು ಮಾಡಲಾಗುತ್ತಿದೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.

ಬಾಬುಲಾಲ್ ಚೌಧರಿ ಹೇಳಿದ್ದೇನು?

'ನನ್ನ ಮಗ ಲೋಹಗಢ್ ಕೋಟೆಯಿಂದ ಕೇತನ್‌ನನ್ನು ತಳ್ಳಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾನೆ. ಆತ ಘಟನಾ ಸ್ಥಳದಿಂದ ಸ್ವಲ್ಪ ದೂರ ನಿಂತಿದ್ದನಂತೆ. ಆ ಹುಡುಗ ಕೆಳಗೆ ಬೀಳುವಾಗ ಆ ಹುಡುಗಿ ಮಾತ್ರವೇ ತೀರ ಹತ್ತಿರದಲ್ಲಿ ನಿಂತಿದ್ದಳು. ಆಕೆಯೇ ಆತನನ್ನು ತಳ್ಳಿದ್ದಾಳೆಯೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ನನ್ನ ಮಗ ಮಾತ್ರ ದೂರ ನಿಂತಿದ್ದಾಗಿ ಹೇಳಿದ್ದಾನೆ' ಎಂದು ಬಾಬುಲಾಲ್ ಚೌಧರಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ
'ಅವನು ಅಂದು ಬೆಳಗ್ಗೆ ಮನೆಯಿಂದ ಹೊರಡುವಾಗ ಕೇವಲ ಒಂದು ಮೀಟಿಂಗ್ ಇದೆ ಎಂದು ತಾಯಿಗೂ ನನಗೂ ಹೇಳಿ ಹೋಗಿದ್ದ ಅಷ್ಟೇ. ನಾವ್ಯಾರೂ ಆ ಹುಡುಗಿಯನ್ನು ನೋಡಿಯೇ ಇಲ್ಲ. ನಿನ್ನೆಯಷ್ಟೇ ನನಗೆ ಆಕೆಯ ಹೆಸರು ಸಿಯಾ ಎಂದು ತಿಳಿಯಿತು. ನನ್ನ ಮಗನನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಲಾಗುತ್ತಿದೆ, ಆತನಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಬಧಿಕರು ಹೇಳಿದ್ದೇನು?

ಚೇತನ್ ಚೌಧರಿಯ ಹತ್ತಿರದ ಸಂಬಂಧಿ ಉದರಾಮ್ ಚೌಧರಿ ಮಾತನಾಡಿ, "ಚೇತನ್ ಈ ಪ್ರಕರಣದಲ್ಲಿ ಸಂಪೂರ್ಣ ನಿರ್ದೋಷಿ. ಚೇತನ್ ಒಬ್ಬ ಕ್ರೀಡಾಪಟು ಹಾಗೂ ಅತ್ಯಂತ ನೇರ ನಡೆನುಡಿಯ ವ್ಯಕ್ತಿ. ಇಡೀ ಮಾರ್ಕೆಟ್‌ನಲ್ಲಿ ಈವರೆಗೆ ಆತನ ವಿರುದ್ಧ ಒಂದೇ ಒಂದು ದೂರು ಕೂಡ ಬಂದಿಲ್ಲ ಎಂದಿದ್ದಾರೆ.
'ಆ ಹುಡುಗಿಯೊಂದಿಗೆ ಚೇತನಿಗೆ ಯಾವುದೇ ಸಂಬಂಧವಿರುವ ಬಗ್ಗೆ ನಮ್ಮ ಕುಟುಂಬಕ್ಕೆ ಕಿಂಚಿತ್ತೂ ಕಲ್ಪನೆ ಇರಲಿಲ್ಲ. ನಮಗೆ ಆತನನ್ನು ಕೇವಲ ಒಂದು ನಿಮಿಷ ಭೇಟಿಯಾಗಲು ಅವಕಾಶ ಸಿಕ್ಕಿತ್ತು. ಆ ಸಮಯದಲ್ಲಿ ಆತ ತಾನು ಸಂಪೂರ್ಣ ಅಮಾಯಕನಾಗಿದ್ದು, ತನ್ನನ್ನು ಈ ಪ್ರಕರಣದಲ್ಲಿ ಸುಳ್ಳಾಗಿ ಸಿಲುಕಿಸಲಾಗಿದೆ ಎಂದು ಅಳುತ್ತಾ ಹೇಳಿಕೊಂಡಿದ್ದಾನೆ' ಎಂದು ಉದರಾಮ್ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ

ಜೂನ್ 18 ರಂದು ಲೋಹಗಢ್ ಕೋಟೆಯಲ್ಲಿ 26 ವರ್ಷದ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಎನ್ನಲಾದ ಚೇತನ್ ಚೌಧರಿ ಸೇರಿ ಕಮರಿಗೆ ತಳ್ಳಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಇದನ್ನು ಅಪಘಾತ ಎಂದು ಬಿಂಬಿಸಲು ಯತ್ನಿಸಲಾಗಿತ್ತಾದರೂ, ನಂತರ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಸದ್ಯ ಇಬ್ಬರೂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.