ನ್ಯೂಸ್

ಕನ್ನಡಕ್ಕೆ ಹಿಂದಿಯಷ್ಟೇ ಸ್ಥಾನಮಾನ ನಿರಾಕರಣೆ: ಕೇಂದ್ರದ ವಿರುದ್ಧ ಎಚ್​ಡಿಕೆ ಆಕ್ರೋಶ

ಬೆಂಗಳೂರು: ಕನ್ನಡವೂ ಸೇರಿ ಪ್ರಾದೇಶಿಕ ಭಾಷೆಗಳಿಗೆ ಹಿಂದಿಯಷ್ಟೇ ಸ್ಥಾನಮಾನ ನೀಡುವ ಕುರಿತು ಸಂವಿಧಾನ ತಿದ್ದುಪಡಿ ತರಲು ನಿರಾಕರಿಸಿರುವ ಕೇಂದ್ರ ಸರ್ಕಾರದ ನಡೆ ಭಾಷಾ ತಿರಸ್ಕಾರದ ಸಂಕೇತ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಹಿಂದಿಯಂತೆ ಕನ್ನಡವೂ ದೇಶದ ಅಧಿಕೃತ ಭಾಷೆ. ಕನ್ನಡ ರಾಷ್ಟ್ರ ಭಾಷೆಯೇ. ಕೇಂದ್ರ ಸರ್ಕಾರದ ಆಡಳಿತದಲ್ಲಿ ಕನ್ನಡ ಸೇರಿ ಇತರ ಭಾಷೆಗಳನ್ನು ಸೇರಿಸಬೇಕಷ್ಟೆ. ಸಂವಿಧಾನದ ಪರಿಚ್ಛೇದ 343, 344, 345ರಲ್ಲಿ ಹಿಂದಿಗೆ ಉತ್ತೇಜನ ನೀಡುವ ಅಂಶಗಳಿವೆ. ಇದೇ ನೆಪದಲ್ಲಿ ಹಿಂದಿ ಹೇರುವ ಪ್ರಯತ್ನ ಕೇಂದ್ರ ಸರ್ಕಾರಗಳಿಂದ ನಿರಂತರವಾಗಿ ನಡೆದಿದೆ ಎಂದು ದೂರಿದ್ದಾರೆ.

ಸಂವಿಧಾನವನ್ನು ಬದಲಿಸುವ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಕನ್ನಡ ಮತ್ತು ಇತರ ಭಾಷೆಗಳಿಗೆ ಹಿಂದಿಯಷ್ಟೇ ಸ್ಥಾನಮಾನ ನೀಡಲು ಸಾಂವಿಧಾನಿಕ ತಿದ್ದುಪಡಿ ತರಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದ್ದಾರೆ.

ಇತರ ಭಾಷೆಗಳಿಗೆ ಹಿಂದಿಯಷ್ಟು ಸ್ಥಾನಮಾನ ನೀಡಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರ ಮತ್ತು ಅದರ ನೇತೃತ್ವ ವಹಿಸಿರುವ ಬಿಜೆಪಿ, ಹಿಂದಿಯೇತರ ರಾಜ್ಯಗಳ, ಹಿಂದಿಯೇತರ ಭಾಷಿಕರ ಸಂಸದರನ್ನೂ ಒಳಗೊಂಡು ಸರ್ಕಾರ ರಚಿಸಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಎಲ್ಲ ಅಧಿಕೃತ ಭಾಷೆಗಳನ್ನು ಆಡಳಿತದಲ್ಲಿ ಜಾರಿಗೆ ತಂದು ಅವರೆಲ್ಲರ ಋಣ ತೀರಿಸುವುದು ಬಿಜೆಪಿಯ ಕರ್ತವ್ಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಅಧಿಸೂಚನೆ, ಪ್ರಕಟಣೆಗಳು ಇತರೆ ಅಧಿಕೃತ ಭಾಷೆಗಳಲ್ಲಿಯೂ ಇರಬೇಕು ಎಂದು ಸುಪ್ರೀಂ ಕೋರ್ಟ್​ ಇತ್ತೀಚಿಗೆ ಪ್ರಕರಣವೊಂದರ ವಿಚಾರಣೆ ವೇಳೆ ಕೇಂದ್ರಕ್ಕೆ ಸೂಚನೆ ನೀಡಿದೆ. ಅಲ್ಲದೆ, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ, ಎಲ್ಲ ಭಾಷೆಗಳೂ ಸರಿಸಮಾನ ಎಂಬುದನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಎಚ್​ಡಿಕೆ ತಿಳಿಸಿದ್ದಾರೆ.

ಮೋದಿ ಹುಟ್ಟುಹಬ್ಬದ ದಿನ ನಿರುದ್ಯೋಗ ದಿನ ಅಭಿಯಾನ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮೋದಿಯವರ ಹುಟ್ಟುಹಬ್ಬಕ್ಕೆ ಅಭಿನಂದನೆ ತಿಳಿಸುತ್ತೇನೆ. ಆದರೆ, ನಿರುದ್ಯೋಗದ ವಿಚಾರಕ್ಕೆ ಬಂದಾಗ ಒಂದು ಕೋಟಿ ವಲಸಿಗರು ಉದ್ಯೋಗ ಇಲ್ಲದೇ ಬೀದಿಗೆ ಬಂದಿದ್ದಾರೆ. ಮೋದಿ ಆಡಳಿತದಲ್ಲಿ 20 ಕೋಟಿ ಜನ ಉದ್ಯೋಗ ಇಲ್ಲದೇ ಬೀದಿಗೆ ಬರುವಂತಾಗಿದೆ. ಇದರ ಜತೆಗೆ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಮೋದಿ ಮೇಲೆ ವಿಶ್ವಾಸ ಇಟ್ಡಿದ್ದಾರೆ. 70ನೇ ಹುಟ್ಟುಹಬ್ಬದಲ್ಲಾದರೂ ದೇಶಕ್ಕೆ ಒಳ್ಳೇದಾಗಲಿ ಎಂದು ಆಶಿಸುವುದಾಗಿ ಚುಚ್ಚಿದ್ದಾರೆ.