ನ್ಯೂಸ್

ಕ್ಷೇತ್ರದ ಮೇಲೆ ಕೈ ನಾಯಕರ ಕ್ರೂರ ದೃಷ್ಟಿ ಹಿನ್ನೆಲೆ ನಗರಸಭೆ ಚುನಾವಣೆ ಜವಾಬ್ದಾರಿ ವಹಿಸುವೆ: ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ

Ramanagara

ರಾಮನಗರ : ಕ್ಷೇತ್ರದ ಮೇಲೆ ಕಾಂಗ್ರೆಸ್ ನಾಯಕರ ಕ್ರೂರ ದೃಷ್ಟಿ ಬಿದ್ದಿರುವ ಕಾರಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನೇರವಾಗಿ ಭಾಗಿಯಾಗುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ನಾಸಿರ್ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾತ್ರಿ ನಡೆದ ಮುಸ್ಲಿಂ ಮುಖಂಡರ ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿ, ಹಿಂದೆ ಸ್ಥಳೀಯ ಸಂಸ್ಥೆ ಚುನಾವಣೆ ಜವಾಬ್ದಾರಿಯನ್ನು ಸ್ಥಳೀಯ ಮುಖಂಡರಿಗೆ ನೀಡುತ್ತಿದ್ದೆ.

ಆದರೆ ಈ ಬಾರಿ ಕಾಂಗ್ರೆಸ್ ಪಕ್ಷದ ವಕ್ರ ದೃಷ್ಟಿ ಕ್ಷೇತ್ರದ ಮೇಲೆ ಬಿದ್ದಿರುವುದರಿಂದ ನಾನೇ ಜವಾಬ್ದಾರಿ ವಹಿಸುತ್ತೇನೆ. ಕಳೆದ 20 ವರ್ಷಗಳಿಂದಲೂ ಕ್ಷೇತ್ರದಲ್ಲಿ ಶಾಂತಿ ನಲೆಸಿದ್ದು, ಇದನ್ನು ಕಾಪಾಡಿಕೊಂಡು ಹೋಗುವ ಸಲುವಾಗಿ ಕ್ಷೇತ್ರದಲ್ಲಿ ಖುದ್ದು ಚುನಾವಣೆ ನಡೆಸುತ್ತೇನೆ ಎಂದರು.

ಸ್ಲಂ ಬೋರ್ಡ್‌ನಿಂದ ಮನೆ ಕಟ್ಟಿಕೊಡುವ ಕೆಲಸಕ್ಕೆ ಚಾಲನೆ ನೀಡುವ ವೇಳೆ ಅರ್ಜಿ ಆಹ್ವಾನಿಸಲಾಗಿತ್ತು. ಈ ವೇಳೆ ಸುಮಾರು 900ರಿಂದ ಒಂದು ಸಾವಿರ ಮಂದಿ 5 ಸಾವಿರ ರೂ. ಕಟ್ಟಿದ್ದು, ಈ ಹಣ ಸ್ಲಂ ಬೋರ್ಡ್‌ನಲ್ಲಿ ಸುರಕ್ಷಿತವಾಗಿದೆ. ಆದರೆ ವಿರೋಧ ಪಕ್ಷಗಳ ನಾಯಕರು ಕುಮಾರಸ್ವಾಮಿ ಮನೆಯನ್ನೇ ನೀಡಲಿಲ್ಲ ಎಂದು ಅಪಪ್ರಚಾರ ಮಾಡಿದರು. ಆದರೆ ವಿರೋಧಿಗಳ ಕುತಂತ್ರದಿಂದಾಗಿ ಮನೆ ನೀಡಲಾಗಲಿಲ್ಲ ಎಂದರು.

ಮಾಜಿ ಶಾಸಕರೊಬ್ಬರು ಪ್ರತಿ ಸಭೆ ಸಮಾರಂಭದಲ್ಲೂ ನಿವೇಶನ ಕೊಡಲಿಲ್ಲ, ಮನೆ ನೀಡಲಿಲ್ಲ ಎಂದು ಭಾಷಣ ಮಾಡುತ್ತಾರೆ. ಆದರೆ ಕ್ಷೇತ್ರದ ಅಭಿವೃದ್ಧಿಗೆ ಇವರ ಕೊಡುಗೆ ಏನು ಎಂದು ಪ್ರಶ್ನಿಸಿದ ಎಚ್‌ಡಿಕೆ, ಈಗಾಗಲೇ ಕೊಳಚೆ ನಿರ್ಮೂಲನಾ ಮಂಡಳಿಯಿಂದ 1,800 ಮನೆಗಳ ನಿರ್ಮಾಣಕ್ಕೆ 58 ಕೋಟಿ ರೂ. ಮಂಜೂರು ಮಾಡಿಸಿಕೊಡಲಾಗಿದೆ ಎಂದರು ತಿಳಿಸಿದರು.