ನ್ಯೂಸ್

ಅನವಶ್ಯಕ ವಿಚಾರಗಳಿಗೆ ಕಲಾಪ ಬಲಿ:ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪ, ಯಾವುದೇ ಗಂಭೀರ ಚರ್ಚೆಗಳು ನಡೆದಿಲ್ಲ

Ramanagara

ಚನ್ನಪಟ್ಟಣ: ಬೆಳಗಾವಿ ವಿಧಾನಸಭಾ ಕಲಾಪ ಸಂಪೂರ್ಣ ವ್ಯರ್ಥವಾಗಿದೆ. ಸದನದಲ್ಲಿ ಯಾವುದೇ ಗಂಭೀರ ಚರ್ಚೆಗಳು ನಡೆದಿಲ್ಲ ಎಂದು ಮಾಜಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಬೇವೂರು ಮಠದಲ್ಲಿ ಶನಿವಾರ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ 20ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದ ಮೊದಲ ಐದು ದಿನ ಸಂಪೂರ್ಣ ವ್ಯರ್ಥವಾಗಿದೆ. ಕೊನೇಪಕ್ಷ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆದಿಲ್ಲ. ಅನವಶ್ಯಕವಾದ ವಿಚಾರಗಳಿಗೆ ಕಲಾಪವನ್ನು ಬಲಿಕೊಡಲಾಗಿದೆ. ಸಂಡೂರಿನ ತಹಸೀಲ್ದಾರ್ ಹಾಗೂ ಬೈರತಿ ಬಸವರಾಜ್ ಬಗ್ಗೆ ವೃಥಾ ಚರ್ಚೆ ನಡೆಸಿದ್ದಾರೆ ಎಂದು ಅಸವಾಧಾನ ವ್ಯಕ್ತಪಡಿಸಿದರು.

ಸದನದ ಕೊನೆಯಲ್ಲಿ ಮತಾಂತರ ವಿಚಾರ ತಂದರು. ಕೆಲವರು ಅಧಿವೇಶನದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು ಎಂದರು. ರಾಜ್ಯದಲ್ಲಿ ಎಂಇಎಸ್ ಸಂಟನೆ ನಿಷೇಧವನ್ನು ಕಾನೂನಾತ್ಮಕವಾಗಿ ಮಾಡಬೇಕು. ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುವಂಥ ಅವಕಾಶವನ್ನೇ ಕೊಡಬಾರದು ಎಂದು ಸಲಹೆ ನೀಡಿದರು.

ಬಂದ್‌ನಿಂದ ಪ್ರಯೋಜನವಿಲ್ಲ: ಡಿ.31ರಂದು ರಾಜ್ಯದಲ್ಲಿ ಬಂದ್ ನಡೆದರೆ ಮಹಾರಾಷ್ಟ್ರಕ್ಕೆ ತೊಂದರೆ ಇಲ್ಲ. ಸಣ್ಣ-ಪುಟ್ಟ ವ್ಯಾಪಾರಿಗಳ ಮೇಲಾಗುವ ಪರಿಣಾಮಗಳ ಬಗ್ಗೆ ಬಂದ್ ಕರೆ ನೀಡಿದವರು ಯೋಚಿಸಬೇಕು. ಹೋರಾಟಗಾರರು ಎಂಇಎಸ್ ಹಾಗೂ ನಾಡವಿರೋಧಿಗಳನ್ನು ಮಟ್ಟ ಹಾಕುವಂತೆ ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದು ಸಲಹೆ ನೀಡಿದರು.

ಗೌಡಗೆರೆ ಚಾಮುಂಡೇಶ್ವರಿ ದರ್ಶನ: ಗೌಡಗೆರೆಯ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರು, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರದಲ್ಲಿ ಅತಿ ಎತ್ತರದ ಚಾಮುಂಡೇಶ್ವರಿಯ ವಿಗ್ರಹ ಅನಾವರಣಗೊಂಡ ಬಳಿಕ ಇದೇ ಮೊದಲ ಭೇಟಿಯಾಗಿದ್ದು, ಕ್ಷೇತ್ರದಲ್ಲಿ ತಲೆ ಎತ್ತಿರುವ ತಾಯಿಯ ವಿಗ್ರಹದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಕ್ಷೇತ್ರಕ್ಕೆ ಭೇಟಿ ನೀಡಿದ ಮಾಜಿ ಸಿಎಂಗೆ ಕ್ಷೇತ್ರದ ಡಾ.ಮಲ್ಲೇಶ್‌ಗುರೂಜಿ ತಾಯಿ ಚಾಮುಂಡೇಶ್ವರಿ ಚಿತ್ರಪಟ ನೀಡಿ ಸನ್ಮಾನಿಸಿದರು. ಭಕ್ತರ ಅನುಕೂಲಕ್ಕೆ ರಸ್ತೆ ಅಗಲೀಕರಣಗೊಳಿಸುವಂತೆ ಮನವಿ ಸಲ್ಲಿಸಿದರು.

ಸ್ವಕ್ಷೇತ್ರದಲ್ಲಿ ಪ್ರವಾಸ, ಕುಂದು ಕೊರತೆ ಆಲಿಕೆ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶನಿವಾರ ಸ್ವಕ್ಷೇತ್ರದ ಪ್ರವಾಸ ಕೈಗೊಂಡಿದ್ದರು. ಬೇವೂರು ಮಠದ ಹಿರಿಯ ಶ್ರೀಗಳ ಪುಣ್ಯಾರಾಧನೆ, ಗೌಡಗೆರೆ ಚಾಮುಂಡೇಶ್ವರಿ ದರ್ಶನ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಮೊದಲಿಗೆ ಬೇವೂರು ಮಲ್ಲಿಕಾರ್ಜುನಸ್ವಾಮಿ ಮಠದ ಲಿಂಗೈಕ್ಯ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿ ಅವರ 20ನೇ ಪುಣ್ಯಾರಾಧನೆ ಸವಾರಂಭದಲ್ಲಿ ಭಾಗವಹಿಸಿದ ಅವರು, ಶ್ರೀಗಳ ಗದ್ದುಗೆಗೆ ನಮಿಸಿದರು. ಮಠದಲ್ಲಿ ಪ್ರಸಾದ ಸ್ವೀಕರಿಸಿದ ಬಳಿಕ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಜತೆ ಚರ್ಚಿಸಿದರು. ಬೇವೂರು ಮಠ ಈ ಭಾಗದ ಜನರ ಜತೆ ಬೆರೆತಿದೆ. ಜಾತ್ಯಾತೀತವಾಗಿ ಮುನ್ನಡೆಸುತ್ತಿರುವ ಮಠದ ಅಭಿವೃದ್ಧಿಗೆ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು.

ಶುದ್ಧ ನೀರಿನ ಸ್ಥಾವರ ಉದ್ಘಾಟನೆ: ಗುಡ್ಡೆ ಅವ್ವೇರಹಳ್ಳಿಯಲ್ಲಿ ಶುದ್ಧ ನೀರಿನ ಸ್ಥಾವರ ಎಚ್‌ಡಿಕೆ ಚಾಲನೆ ನೀಡಿದರು. ಟಕಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿಕೊಳ್ಳುವ ಜವಾಬ್ದಾರಿ ಗ್ರಾಮದ ಪ್ರತಿಯೊಬ್ಬರದ್ದಾಗಿದೆ. ಗ್ರಾಮಗಳಲ್ಲಿ ರಾಜಕೀಯಕ್ಕೆ ಎಡೆಮಾಡಿಕೊಡದೆ ಸಾಮರಸ್ಯದ ಜೀವನ ಸಾಗಿಸಬೇಕು ಎಂದು ಮನವಿ ಮಾಡಿದರು.

ಮುತ್ತರಾಯನ ಸೇವೆಯಲ್ಲಿ ಭಾಗಿ: ಗೋವಿಂದಹಳ್ಳಿಯಲ್ಲಿ ನಡೆದ ಮುತ್ತುರಾಯನ ಸೇವೆಯಲ್ಲಿ ಕುಮಾರಸ್ವಾಮಿ ಭಾಗವಹಿಸಿದ್ದರು. ಕೆಲದಿನಗಳ ಹಿಂದೆ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆಗೊಂಡ ಹಿನ್ನೆಲೆಯಲ್ಲಿ ಶನಿವಾರ ಬೃಹತ್ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.ಹಲವು ಗ್ರಾಮಗಳ ಜನತೆ ವಿವಿಧ ಸಮಸ್ಯೆಗಳ ಮೂಲಕ ಎಚ್ಡಿಕೆ ಗಮನಸೆಳೆದರು. ಕಾರ್ಯಕ್ರಮದ ಕೊನೆಯ ಭಾಗವಾಗಿ ನಗರದ ಶಿವಾನಂದ ಚಿತ್ರಮಂದಿರಕ್ಕೆ ಆಗಮಿಸಿ ರೈಡರ್ ಚಿತ್ರದ ಬಗ್ಗೆ ಅಭಿಪ್ರಾಯ ಆಲಿಸಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಒಕ್ಕಲಿಗರ ಸಂದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕುರಿದೊಡ್ಡಿ ಜಯರಾಂ, ಯುವ ಜೆಡಿಎಸ್ ಅಧ್ಯಕ್ಷ ವಿನೋದ್‌ಕುವಾರ್, ಮುಖಂಡರಾದ ಗುತ್ತಿಗೆದಾರ ಪ್ರಕಾಶ್, ವಡ್ಡರಹಳ್ಳಿ ರಾಜಣ್ಣ, ಭಾನುಪ್ರಸಾದ್, ಗುರುಕುವಾರ್, ಮಳೂರುಪಟ್ಟಣ ರವಿ, ಮುಕುಂದ ನಂದೀಶ್, ಮಹಿಳಾ ಟಕದ ಜಿಲ್ಲಾಧ್ಯಕ್ಷೆ ರೇಖಾಉವಾಶಂಕರ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.