ನ್ಯೂಸ್

ಚಿಂತಾಮಣಿ ನಗರಸಭಾ ಸದಸ್ಯ ಅಗ್ರಹಾರ ಮುರಳಿ ಮೇಲೆ ಮಾರಣಾಂತಿಕ ಹಲ್ಲೆ; ಎಚ್​ಡಿಕೆ ಹೇಳಿದ್ದಿಷ್ಟು

ಚಿಂತಾಮಣಿ: ಸಿನಿಮಾದ ರೀತಿಯಲ್ಲಿ ಚಿಂತಾಮಣಿ ಜೆಡಿಎಸ್​ ನಗರಸಭಾ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಘಟನೆ ನಗರದ ಗಜಾನನ ವೃತ್ತದಲ್ಲಿ ಶುಕ್ರವಾರ ವರದಿಯಾಗಿದೆ. ನಗರಸಭಾ ಸದಸ್ಯ ಅಗ್ರಹಾರ ಮುರಳಿ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ನಡೆಸಿದ ದಾಳಿ ಬಗ್ಗೆ ಇದೀಗ ಮಾಜಿ ಸಿಎಂ, ಜೆಡಿಎಸ್​ ನಾಯಕ ಎಚ್​.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಚಿಂತಾಮಣಿ ವಿಧಾನಸಭೆ ಕ್ಷೇತ್ರದ ಜೆಡಿಎಸ್​ ಮುಖಂಡರು, ನಗರಸಭೆ ಸದಸ್ಯರಾದ ಅಗ್ರಹಾರ ಮುರಳಿ ಮೇಲೆ ದುಷ್ಕರ್ಮಿಗಳು ಮಚ್ಚು ಲಾಂಗ್​ಗಳಿಂದ ಪೈಶಾಚಿಕ ದಾಳಿ ನಡೆಸಿರುವ ಘಟನೆ ಖಂಡನೀಯ. ಈ ಕೃತ್ಯ ಎಸಗಿದ ದುರುಳರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು ಹಾಗೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ವಿಪಕ್ಷಗಳ ಮುಖಂಡರು, ಕಾರ್ಯಕರ್ತರ ಮೇಲೆ ದೌರ್ಜನ್ಯ ಮೀರಿದೆ. ಗೃಹ ಇಲಾಖೆ, ಪೊಲೀಸ್ ವ್ಯವಸ್ಥೆ ಆಡಳಿತ ಪಕ್ಷದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಅಧಿಕಾರಿಗಳು ಆಡಳಿತ ಪಕ್ಷ ನಾಯಕರ ಕೈಗೊಂಬೆಗಳು ಆಗಿರುವ ಪರಿಣಾಮವೇ ಇಂಥ ಘಟನೆಗಳಿಗೆ ದಾರಿಯಾಗುತ್ತಿದೆ. ರಾಜ್ಯದಲ್ಲಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಪೂರ್ಣವಾಗಿ ಕುಸಿದು ಬಿದ್ದಿದೆ. ಮೊದಲು ಇಂಥ ಪ್ರಕರಣಗಳು ನಡೆಯುತ್ತಿರಲಿಲ್ಲ ಎಂದು ಹೇಳಿದರು.

ಕೆಲ ದಿನಗಳ ಹಿಂದೆ ಹಾಸನದಲ್ಲಿ ಜೆಡಿಎಸ್​ ಮುಖಂಡರಾದ ಕೃಷ್ಣೇಗೌಡರನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಹೊಳೆನರಸೀಪುರದಲ್ಲಿ ನಮ್ಮ ಪಕ್ಷದ ಮುಖಂಡರಾದ ಅಶ್ವತ್ಥ್ ಅವರ ಮೇಲೆ ದಾಳಿ ನಡೆದಿತ್ತು. ಈಗ ಚಿಂತಾಮಣಿಯಲ್ಲಿ ಅಂಥದ್ದೇ ಘಟನೆ ನಡೆದಿರುವುದು ಪ್ರತಿಪಕ್ಷಗಳನ್ನು ಹೆದರಿಸಿ ಬೆದರಿಸುವ ದುಷ್ಟ ಹುನ್ನಾರವಲ್ಲದೆ ಮತ್ತೇನಲ್ಲ ಎಂದು ಹೇಳಿದರು.

ಅದರಲ್ಲೂ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ವ್ಯವಸ್ಥಿತವಾಗಿ ಗುರಿ ಮಾಡಲಾಗುತ್ತಿದೆ. ಇದು ಸರಿಯಲ್ಲ, ಸಹಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಸದಾ ಶಾಂತಿ ನೆಲೆಸಿರಬೇಕು ಎನ್ನುವುದು ನಮ್ಮ ಪಕ್ಷದ ಆಶಯ. ಸರಕಾರ ಮತ್ತು ಗೃಹ ಸಚಿವರು ಕೂಡಲೇ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ಪಕ್ಷದ ವತಿಯಿಂದ ಉಗ್ರವಾದ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.