ಬೆಂಗಳೂರು: ನಟರನ್ನು ನೋಡಲು ಅಭಿಮಾನಿಗಳು, ಜನರು ಬರುತ್ತಾರೆ, ಜೈಕಾರ ಹಾಕುತ್ತಾರೆ. ಅವರು ಎಲ್ಲಾ ಪಕ್ಷದ ಪರವಾಗಿಯೂ ಪ್ರಚಾರಕ್ಕೆ ಹೋಗುತ್ತಾರೆ. ಅವರಿಗೆ ಸ್ಥಿರತೆ ಇಲ್ಲ. ವೈಯಕ್ತಿಕ ಬಾಂಧವ್ಯದ ಹಿನ್ನೆಲೆ ಹೋಗಬಹುದು. ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳುವ ಮೂಲಕ ನಟ ಸುದೀಪ್ ಬೊಮ್ಮಾಯಿ ಪರ ಪ್ರಚಾರಕ್ಕೆ ಬರುವುದಾಗಿ ಘೋಷಣೆ ಮಾಡುತ್ತಿದ್ದಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ನಟ ಸುದೀಪ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ಮೇಲಿನ ವಿಶ್ವಾಸದಿಂದ ಪ್ರಚಾರಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಆ ಬಗ್ಗೆ ಹೆಚ್ಚಿನ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ನನ್ನ ಸ್ಟಾರ್ ಪ್ರಚಾರಕರು ನನ್ನ ಕಾರ್ಯಕರ್ತರು. ನಾನು ಪಂಚರತ್ನ ಯಾತ್ರೆ ಮೂಲಕ ಜನರ ಬಳಿ ಹೋಗಿದ್ದೇನೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾನು ಯಾವುದೇ ಚಿತ್ರನಟರನ್ನು ವೈಯಕ್ತಿಕವಾಗಿ ದುರುಪಯೋಗ ಪಡಿಸಿಕೊಳ್ಳಲು ಸಿದ್ದನಿಲ್ಲ. ನಟರು ಸಮಾಜದ ಎಲ್ಲ ವರ್ಗದ ಜನರಿಗೆ ಸೇರಿದವರು. ನನ್ನ ಸ್ವಂತಕ್ಕೆ ದುರುಪಯೋಗ ಪಡಿಸಿಕೊಂಡು ನಟರ ಘನತೆ ಗೌರವವನ್ನು ಸೀಮಿತಗೊಳಿಸಲು ಇಷ್ಟಪಡುವುಲ್ಲ. ಮಮತಾ ಬ್ಯಾನರ್ಜಿ, ಕೆ.ಚಂದ್ರಶೇಖರ್ ರಾವ್ ಕೆಲವೊಂದು ಭಾಗಕ್ಕೆ ಪ್ರಚಾರಕ್ಕೆ ಬರುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
ನಟ ಸುದೀಪ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು, ಈ ಬಾರಿಯ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ವದಂತಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸ್ವತಃ ಸುದೀಪ್ ಸುದ್ದಿ ಗೋಷ್ಠಿ ನಡೆಸಿ ಸ್ಪಷ್ಟನೆ ಕೊಟ್ಟಿದ್ದು, ಚಿತ್ರರಂಗದ ಕಷ್ಟದ ದಿನಗಳಲ್ಲಿ ನಾನು ಪ್ರೀತಿಯಿಂದ ಬೊಮ್ಮಾಯಿ ಮಾಮ ಎಂದು ಕರೆಯುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನ ಜೊತೆ ನಿಂತಿದ್ದರು. ಅವರ ಪರ ನಿಲ್ಲುತ್ತೇನೆಂದು ಹೇಳಿದ್ದಾರೆ.
ಇದನ್ನೂ ಓದಿ: ಟೀಕೆಗೆ ತಲೆ ಕೆಡಿಸಿಕೊಂಡಿಲ್ಲ… ನಾನು ಅಂದಿನಿಂದ ಹೀಗೆಯೇ ಓಡಾಡುತ್ತಿದ್ದೇನೆ; ದೆಹಲಿ ಮೆಟ್ರೋದಲ್ಲಿ ಅರೆ ಬೆತ್ತಲಾದ ಯುವತಿ
ಸುದ್ದಿಗೋಷ್ಠಿಯಲ್ಲಿ ಸುದೀಪ್ ಮಾತನಾಡಿ. ಇಲ್ಲಿ ನನ್ನ ನಿಲುವು ಅಂತಾ ಏನು ಇಲ್ಲ. ರಾಜಕೀಯವೂ ಇಲ್ಲ. ಕಷ್ಟದ ದಿನಗಳಲ್ಲಿ ಬೊಮ್ಮಾಯಿ ಮಾಮ ನನಗೆ ಬೆಂಗಾವಲಾಗಿ ನಿಂತರು. ಹೀಗಾಗಿ ಇಂದು ಅವರ ಪರ ನಾನು ನಿಲ್ಲುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿಯ ತತ್ವ ಸಿದ್ಧಾಂತಗಳಿಗೆ ಒಪ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್, ನನ್ನ ಮನೆಯಲ್ಲಿ ಒಬ್ಬರು ತಂದೆ ಇದ್ರೆ ಅವರು ಹೇಳಿದಂತೆ ಕೇಳ್ತೀವಿ. ಅವರಿಗೆ ಸಹಾಯ ಬೇಕು ಅಂದ್ರೆ ನಾನು ಅವರ ಪರ ನಿಲ್ಲೋದು ನನ್ನ ಕರ್ತವ್ಯ. ಒಬ್ಬ ವ್ಯಕ್ತಿಯ ಪರವಾಗಿ ನಿಲ್ತೀವಿ ಅಂದ್ರೆ ಪಕ್ಷದ ಪರವಾಗಿ ನಿಲ್ಲುತ್ತೇವೆ ಎಂದರ್ಥ ಎಂದರು.