ನ್ಯೂಸ್

VIDEO| ಮಂಗಳೂರು ಗಲಭೆ ಸಂಬಂಧ ವಿಡಿಯೋ ಬಾಂಬ್​ ಸಿಡಿಸಿದ ಮಾಜಿ ಸಿಎಂ ಎಚ್​ಡಿಕೆ: ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಕಾಶ್ಮೀರ ಮಾಡಲು ಸರ್ಕಾರ ಹೊರಟಿದೆ. 30 ಜಿಲ್ಲೆಯಲ್ಲೂ ಪ್ರತಿಭಟನೆ ಮಾಡಿದರು. ಎಲ್ಲೂ ಕೂಡ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಆದರೆ ಮಂಗಳೂರಿನಲ್ಲಿ ಏಕೆ ಗಲಭೆ ಹಾಗೂ ಗೋಲಿಬಾರ್ ಆಯ್ತು ಎಂದು ಪ್ರಶ್ನಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಮಂಗಳೂರು ಗಲಭೆ ವಿಚಾರವಾಗಿ ಶುಕ್ರವಾರ ಜೆಪಿ ನಗರದ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಎಚ್​ಡಿಕೆ, ಗಲಭೆ ಸಂಬಂಧ ವಿಡಿಯೋಗಳನ್ನು ಬಿಡುಗಡೆ ಮಾಡಿದರು. ಮಂಗಳೂರು ಪೊಲೀಸ್​ ಆಯುಕ್ತರನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು.

ಎಲ್ಲ ಸಾಕ್ಷ್ಯಾಧಾರ ಸಂಗ್ರಹಿಸಿದ್ದೇನೆ
ಡಿಸೆಂಬರ್​ 19 ರಂದು ಮಂಗಳೂರಿನಲ್ಲಿ ನಡೆದ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ. ಪೊಲೀಸರು ನಡೆದುಕೊಂಡ‌ ರೀತಿ ಹೇಗಿದೆ? ಪೊಲೀಸರು ಮಾಡಿರುವ ತಪ್ಪು ಏನಿದೆ? ಸರ್ಕಾರ ಹೇಗೆ ನಡೆದುಕೊಂಡಿದೆ? ಇದಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಾಧಾರ ಸಂಗ್ರಹಿಸಿದ್ದೇನೆ. ಗಲಭೆ ಸಂಬಂಧ ಎಲ್ಲವನ್ನು ಮುಚ್ಚಿಕೊಳ್ಳಲು ಸರ್ಕಾರ ಹೊರಟಿತ್ತು ಎಂದು ಕಿಡಿಕಾರಿದರು.

ಅಧಿಕಾರ ಕೊಟ್ಟವರು ಯಾರು?
ಈಗಾಗಲೇ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ‌ ಗೋಪಾಲಗೌಡ‌ ನೇತೃತ್ವದಲ್ಲಿ ಜನತಾ ಅದಾಲತ್ ರಚನೆ ಆಗಿದೆ. ಆದರೆ, ಜನತಾ ಅದಾಲತ್ ಮಾಡಬಾರದು, ಪ್ರೆಸ್ ಮೀಟ್ ಮಾಡಬಾರದು ಎಂದು ಪೊಲೀಸರು ಮೊಟಕು‌ಗೊಳಿಸಿದ್ದಾರೆ. ಇದಕ್ಕೆ ಅಧಿಕಾರ ಕೊಟ್ಟವರು ಯಾರು? ಬೀದಿ ಬದಿ‌ ವ್ಯಾಪಾರಿಗಳಿಗೂ ಪೊಲೀಸರು ಹೊಡೆಯುತ್ತಾರೆ. ಸಿಕ್ಕಸಿಕ್ಕವರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ ಎಂದು ಆರೋಪಿಸಿದರು.

ಅಸಲಿ ಸತ್ಯಾಂಶ ಬಹಿರಂಗವಾಗಲಿದೆ
ಬಂದರು ಪೋಲಿಸ್ ಠಾಣೆಯ ಬಳಿ ಇರುವ 360 ಡಿಗ್ರಿ ಸಿಸಿ ಕ್ಯಾಮೆರಾ ದೃಶ್ಯವನ್ನು ಪೋಲಿಸರು ಬಿಡುಗಡೆ ಮಾಡಿಲ್ಲ. ಆ ಸಿಸಿ ಕ್ಯಾಮೆರಾ ದೃಶ್ಯವನ್ನು ಪೋಲಿಸರು ಬಿಡುಗಡೆ ಮಾಡಿದರೆ, ಗೋಲಿಬಾರ್​ನ ಅಸಲಿ ಸತ್ಯಾಂಶ ಬಹಿರಂಗವಾಗಲಿದೆ ಎಂದು ಹೇಳಿ ಇದೇ ವೇಳೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ದೃಶ್ಯಾವಳಿಗಳನ್ನು ಎಚ್​ಡಿಕೆ ಪ್ರಸಾರ ಮಾಡಿದರು.

ತನಿಖೆ ನಡೆಸುತ್ತಿರುವ ಮ್ಯಾಜಿಸ್ಟ್ರೇಟ್​ ಯಾರು?
19 ರಂದು ನಡೆದ ಗಲಭೆ ಪ್ರಕರಣದ ಬಗ್ಗೆ ಮಂಗಳೂರು ಪೋಲಿಸ್ ಆಯುಕ್ತ ಹರ್ಷ ಅವರ ನಡವಳಿಕೆ ಬಗ್ಗೆಯೇ ಅನುಮಾನ ವ್ಯಕ್ತವಾಗಲಿದೆ. ಅವರನ್ನು ಅಮಾನತಿನಲ್ಲಿಡಬೇಕು ಎಂದು ಒತ್ತಾಯಿಸಿದ ಎಚ್​ಡಿಕೆ, ತನಿಖೆ ನಡೆಸುತ್ತಿರುವ ಮ್ಯಾಜಿಸ್ಟ್ರೇಟ್​ ಯಾರು? ಉಡುಪಿ ಜಿಲ್ಲಾಧಿಕಾರಿಯಾಗಿದ್ದು, ಸರ್ಕಾರ ಹೇಳಿದ್ದನ್ನು ಬರೆದುಕೊಡುತ್ತಾರೆ ಎಂದರು.

ಏನನ್ನು ಮಾಡಲು ಹೊರಟ್ಟಿದ್ದೀರಿ?
ನಿವೃತ್ತ ನ್ಯಾಯಾಮೂರ್ತಿ ಗೋಪಾಲಗೌಡರ ನೇತೃತ್ವದಲ್ಲಿ ಪೀಪಲ್ಸ್ ಕೋರ್ಟ್ ಮಾಡಿಕೊಂಡಿದ್ದರು. ಗೋಲಿಬಾರ್​ನಿಂದ ಮೃತಪಟ್ಟ ಕುಟುಂಬದವರು ಪೀಪಲ್ಸ್ ಕೋರ್ಟ್​ನಲ್ಲಿ ತಮ್ಮ ಅಹವಾಲು ಹೇಳಬಹುದಾಗಿತ್ತು. ಆದರೆ ಅದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಪತ್ರಿಕಾಗೋಷ್ಠಿ ಮಾಡಲು ಸುಗತ ಶ್ರೀನಿವಾಸ ರಾಜು ಅವರಿಗೆ ಅವಕಾಶ ನೀಡಲಿಲ್ಲ. ಗೋಪಾಲಗೌಡರಂತ ನಿವೃತ್ತ ನ್ಯಾಯಮೂರ್ತಿಯವರಿಗೆ ದಿಗ್ಬಂಧನ ವಿಧಿಸಿದರು. ಈ ರೀತಿಯ ವರ್ತನೆಯಿಂದ ಏನನ್ನು ಮಾಡಲು ಹೊರಟ್ಟಿದ್ದೀರಿ ಎಂದು ಎಚ್​ಡಿಕೆ ಪ್ರಶ್ನಿಸಿದರು.

ರಾಜಕೀಯ ತೋಳಗಳ ಗ್ರಹಣ ಬಿಡಿಸುವವರು ಯಾರು?
ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದ್ದಾರೆ. ಆದರೆ ಈ ಹಿಂದೆ 2008ರಲ್ಲಿ ಮಂತ್ರಿಗಿರಿಗಾಗಿ ಜಗದೀಶ್ ಶೆಟ್ಟರ್ ಬೆಂಬಲಿಗರು, ನಾರಾಯಣ ಸ್ವಾಮಿ ಬೆಂಬಲಿಗರು ಬಸ್ ಸುಟ್ಟರಲ್ಲ, ಅವರ ಮೇಲೆ ಕ್ರಮ ಕೈಗೊಂಡರಾ? ತೋಳ ಚಂದ್ರಗಹಣದ ಬಗ್ಗೆ ಮಾಧ್ಯಮಗಳಲ್ಲಿ ತೋರಿಸ್ತಿದ್ದೀರಲ್ಲ ರಾಜಕೀಯ ತೋಳಗಳ ಗ್ರಹಣ ಬಿಡಿಸುವವರು ಯಾರು? ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ 144 ಸೆಕ್ಷನ್ ಹಾಕೊದೆ ಖುಷಿಯಾಗಿದೆ ಎಂದು ಜರಿದರು. (ದಿಗ್ವಿಜಯ ನ್ಯೂಸ್​)