ನೂತನ ವರ್ಷ ಆರಂಭವಾಗುವ ಸಂದರ್ಭದಲ್ಲಿ ಎಲ್ಲರೂ ಏನಾದರೊಂದು ನಿರ್ಣಯ ಕೈಗೊಳ್ಳುವುದು ರೂಢಿ. ಇದಕ್ಕೆ ರಾಜಕಾರಣಿಗಳು, ಕ್ರೀಡಾಪಟುಗಳು, ಸಿನಿಮಾರಂಗದ ಸೆಲೆಬ್ರಿಟಿಗಳು ಮುಂತಾಗಿ ಯಾರೂ ಹೊರತಲ್ಲ. 2020ರ ಹೊಸ್ತಿಲಲ್ಲಿ ಯಾರ್ಯಾರು ಏನೇನು ಸಂಕಲ್ಪ ಮಾಡಿರಬಹುದು ಎಂಬುದನ್ನು ಕನ್ನಡದ ಖ್ಯಾತ ಹಾಸ್ಯ ಸಾಹಿತಿ, ‘ವಿಜಯವಾಣಿ’ಯ ಅಂಕಣಕಾರ ಎಚ್. ಡುಂಡಿರಾಜ್ Fun ಶೈಲಿಯಲ್ಲಿ ಹೇಳ್ತಾ ಇದ್ದಾರೆ, ಕೇಳೋಣ ಬನ್ನಿ.
ಎಚ್.ಡಿ. ದೇವೇಗೌಡ
ಇತ್ತೀಚಿನ ಉಪ ಚುನಾವಣೆಯ ಫಲಿತಾಂಶ ನೋಡಿ ಅಪ್ಪ ಮಕ್ಕಳು ಮತ್ತು ಜಾತ್ಯತೀತ ಜನತಾದಳದ ಕತೆ ಮುಗೀತು ಅಂತ ಕೆಲವರು ಹೇಳ್ತಾ ಇದಾರೆ. ಅದನ್ನ ಸುಳ್ಳು ಮಾಡೋದೇ ನನ್ನ ಹೊಸ ವರ್ಷದ ಸಂಕಲ್ಪ. ಇದಕ್ಕಾಗಿ ಕರ್ನಾಟಕದ ಎಲ್ಲಾ ಮಂದಿರಗಳಲ್ಲೂ ನಾನೇ ಹೋಗಿ ಸಂಕಲ್ಪಕ್ಕೆ ಕುಳಿತು ಹೋಮ, ಪೂಜೆ ಮಾಡಿಸುತ್ತೇನೆ. ಕಾರ್ಯಕರ್ತರು ಹತಾಶರಾಗಿ ಬೇರೆ ಪಕ್ಷಗಳಿಗೆ ಹಾರಬಾರದು. ಜಾತಿ ಇರುವವರೆಗೆ ಜಾತ್ಯತೀತ ಪಕ್ಷಕ್ಕೆ ಉಜ್ವಲ ಭವಿಷ್ಯವಿದೆ. ಯಾವಾಗ ಯಾವ ಪಕ್ಷದ ಜೊತೆ ಸೇರಿದರೆ ಅಧಿಕಾರ ಸಿಗುತ್ತದೆ ಅನ್ನುವುದನ್ನು ನಮ್ಮ ಜ್ಯೋತಿಷಿಗಳ ಬಳಿ ವಿಚಾರಿಸಿ ನಿರ್ಧರಿಸುತ್ತೇನೆ.