ನ್ಯೂಸ್

ಪತ್ನಿಯೊಂದಿಗೆ ಹೆಲಿಕಾಪ್ಟರ್​ನಲ್ಲಿ ಬಂದು ಮತ ಚಲಾಯಿಸಿದ ಮಾಜಿ ಪ್ರಧಾನಿ

ಹಾಸನ: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರು ಪತ್ನಿ ಚೆನ್ನಮ್ಮ ಅವರೊಂದಿಗೆ ಹೆಲಿಕಾಪ್ಟರ್​​ನಲ್ಲಿ ಬಂದು ಮತ ಚಲಾಯಿಸಿದ್ದಾರೆ. ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಲಾಗಿದೆ. ಅಲ್ಲಿಂದ ಪಡುವಲಹಿಪ್ಪೆ ಗ್ರಾಮ ಮತಗಟ್ಟೆ ಸಂಖ್ಯೆ 251ರಲ್ಲಿ ಹಕ್ಕು ಚಲಾವಣೆ ಮಾಡಿದ್ದಾರೆ.

ಹಕ್ಕು ಚಲಾಯಿಸಿದ ರೇವಣ್ಣ ಕುಟುಂಬ

ಮಾಜಿ ಸಚಿವ ಎಚ್​.ಡಿ.ರೇವಣ್ಣ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದ್ದಾರೆ. ಪಡುವಲಹಿಪ್ಪೆ ಗ್ರಾಮದ 197 ಮತಕೇಂದ್ರದಲ್ಲಿ ಭವಾನಿ ರೇವಣ್ಣ, ಸಂಸದ ಪ್ರಜ್ವಲ್‌ ರೇವಣ್ಣ, ಎಂಎಲ್‌ಸಿ ಸೂರಜ್‌ ರೇವಣ್ಣ ಮತ ಚಲಾಯಿಸಿದ್ದಾರೆ. ಬರಿಗಾಲಿನಲ್ಲಿ ಆಗಮಿಸಿ ಹಕ್ಕು ಚಲಾಯಿಸುವ ಮೂಲಕ ಎಚ್​.ಡಿ.ರೇವಣ್ಣ ಗಮನ ಸೆಳೆದರು.

ರಾಮನಗರದಲ್ಲಿ ಎಚ್​ಡಿಕೆ ಕುಟುಂಬ ಮತದಾನ

ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಮತದಾನ ಮಾಡಿದರು. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸೊಸೆ ರೇವತಿ ನಿಖಿಲ್ ಜೊತೆ ಎಚ್​ಡಿಕೆ ಮತದಾನ ಮಾಡಿದರು. ಕೇತಗಾನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲಾ ಮತಗಟ್ಟೆ ಸಂಖ್ಯೆ 235ರಲ್ಲಿ ಮತ ಚಲಾಯಿಸಿದರು.