ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್ಗೆ ಅಧಿಕಾರ ಬಂದಿದ್ದು, ಬಹುಮತ ದಕ್ಕಿದ್ದು ಬಿಎಸ್ಪಿ ಶಾಸಕರಿಂದ....!
ಒಟ್ಟು 200 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 100 ಸ್ಥಾನಗಳನ್ನು ಗಳಿಸಿತ್ತು. ಅತ್ತ ಬಹುಮತಕ್ಕೆ ಇನ್ನೊಂದು ಸ್ಥಾನ ಹಾಗೂ ಸರ್ಕಾರದ ಸ್ಥಿರತೆಗೆ ಇನ್ನಷ್ಟು ಶಾಸಕರು ಬೇಕಾಗಿದ್ದರು. ಈ ಕಾರಣಕ್ಕಾಗಿಯೇ ಸಿಎಂ ಗೆಹ್ಲೋಟ್ ಬಿಎಸ್ಪಿಯ ಆರು ಶಾಸಕರನ್ನು ಕಾಂಗ್ರೆಸ್ನಲ್ಲಿ ವಿಲೀನ ಮಾಡಿಸಿಕೊಂಡಿದ್ದರು. ಹೀಗಾಗಿ ಸರ್ಕಾರ ಬಹುಮತ ಪಡೆದಿತ್ತು.
ಇದನ್ನು ಪ್ರಶ್ನಿಸಿ ಬಿಜೆಪಿ ಹೈಕೋರ್ಟ್ಗೆ ಮೊರೆ ಹೋಗಿತ್ತು. ಶಾಸಕ ಮದನ್ ದಿಲಾವರ್ ಈ ವಿಲೀನವನ್ನು ರದ್ದುಗೊಳಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಜತೆಗೆ, ವಿಲೀನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಬಗ್ಗೆ ಸ್ಪೀಕರ್ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ದೂರಲಾಗಿತ್ತು.
ಇದೀಗ ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ. ಇದು ಸಿಎಂ ಅಶೋಕ್ ಗೆಹ್ಲೋಟ್ಗೆ ಭಾರಿ ನಿರಾಳತೆ ನೀಡಿದೆ. ಇದಕ್ಕೂ ಮುನ್ನ, ಅರ್ಜಿಗೆ ಸಂಬಂಧಿಸಿದಂತೆ ಸ್ಪೀಕರ್ರಿಂದ ಎಲ್ಲ ಮಾಹಿತಿಯನ್ನು ಪಡೆಯುವಂತೆ ರಾಜ್ಯ ಸರ್ಕಾರದ ಪರ ವಕೀಲರಿಗೆ ಹೈಕೋರ್ಟ್ ಸೂಚಿಸಿತ್ತು.
ಈ ನಡುವೆ ಈ ಅರ್ಜಿಯಲ್ಲಿ ತನ್ನನ್ನು ಪಕ್ಷಗಾರನಾಗಿ ಪರಿಗಣಿಸಬೇಕೆಂದು ಬಿಎಸ್ಪಿ ಕೂಡ ಮನವಿ ಸಲ್ಲಿಸಿತ್ತು. ಇದೆಲ್ಲದರ ಬಳಿಕವೂ ಅರ್ಜಿ ವಜಾಗೊಳಿಸಿರುವುದು ರಾಜ್ಯ ಸರ್ಕಾರಕ್ಕೆ ನೆಮ್ಮದಿ ನೀಡಿದಂತಾಗಿದೆ.