ನಂಜನಗೂಡು: ಹಿಂದು ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗುವ ಇತಿಹಾಸ ಪ್ರಸಿದ್ಧ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಬೆಳಲೆ ಗ್ರಾಮದ ಹಜರತ್ ಸೈದಾನಿ ಬಿಬಿ ಮಾ ದರ್ಗಾದಲ್ಲಿ ಗಂಧದ ಮಹೋತ್ಸವದ ಹಿನ್ನೆಲೆಯಲ್ಲಿ ಹುಲ್ಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಜರತ್ ಸೈದಾನಿ ಬಿಬಿ ಮಾ ದರ್ಗಾದಲ್ಲಿ ಫೆ.22 ರಂದು ಗಂಧದ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ದುರ್ಗಾದ ಗುರುಗಳಾದ ಕೆ.ಆರ್ ಹುಸೇನ್ ಧರ್ಮಿ ರೇಂಜಲಾಡಿ ತಿಳಿಸಿದ್ದಾರೆ.
ಅಂದು ಶನಿವಾರ ಸಂಜೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಗುತ್ತದೆ. ಜಾಮಿಯಾ ಮಸೀದಿಯಿಂದ ಸಂಜೆ 5 ಗಂಟೆಗೆ ಪಲ್ಲಕ್ಕಿ ಉತ್ಸವದಲ್ಲಿ ಗಂಧದ ಮಹೋತ್ಸವ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಡುತ್ತದೆ. ನಂತರ ದರ್ಗಾಗೆ ಹೋಗಿ ವಿಠಲಪುರದ ಗುರುಗಳಾದ ಹಜರತ್ ಸೈಯದ್ ಷಾ ಮಹಮ್ಮದ್, ಉಸ್ಮಾನ್ ಪಾಷಾ ಖಾದ್ರಿ ತಂಡದ ವತಿಯಿಂದ ಗಂಧವನ್ನು ಸಮರ್ಪಿಸಲಾಗುವುದು. ವಿವಿಧ ಧಾರ್ಮಿಕ ಗುರುಗಳಿಂದ ಪ್ರವಚನವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಸಿದ್ಧ ಕವಾಲಿ ತಂಡದಿಂದ ನೃತ್ಯ ಪ್ರದರ್ಶನವಿದೆ ಎಂದು ಹಜರತ್ ಸೈದಾನಿ ಬಿಬಿ ಮಾ ದರ್ಗಾದ ಆಡಳಿತ ಮಂಡಳಿ ತಿಳಿಸಿದೆ.
ಹುಲ್ಲಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಚೇತನ್‌ಕುಮಾರ್ ದರ್ಗಾಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಮಹೋತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪರಿಶೀಲನೆ ವೇಳೆ ಗ್ರಾಪಂ ಸದಸ್ಯ ಅನ್ಸರ್ ಅಹಮದ್, ಕಮಿಟಿ ಅಧ್ಯಕ್ಷ ಮುಸಿರ್ ಅಹಮದ್, ಕಾರ್ಯದರ್ಶಿ, ಜಾವಿದ್ ಅಹ್ಮದ್ ಸದಸ್ಯರಾದ ಅನ್ಸರ್ ಸಮೀಉಲ್ಲಾ ಇತರರಿದ್ದರು.