ಸೊರಬ ತಾಲೂಕಿನ ನಿಸರಾಣಿಯಲ್ಲಿ ಅಖಿಲ ಹವ್ಯಕ ಮಹಾಸಭಾದಿಂದ ಪ್ರತಿಬಿಂಬ ಸಾಗರ-ಸೊರಬ ಕಾರ್ಯಕ್ರಮದಲ್ಲಿ ಎಚ್.ರಾಜಾರಾಮ ರಾವ್, ರಾಜಲಕ್ಷ್ಮೀ ದೇವಪ್ಪ, ರಾಘವೇಂದ್ರ, ಶೇಷಾಚಲ , ಚಂದ್ರಶೇಖರ್ ಭಟ್ ಇದ್ದರು.  
ನ್ಯೂಸ್

ಹವ್ಯಕ ಸಮಾಜ ಸಾಮರಸ್ಯಕ್ಕೆ ಹೆಸರು

ಶಿವಕುಮಾರ ಎಸ್.ಪಿ.

ಸೊರಬ: ಸಮಾಜದಲ್ಲಿ ಹವ್ಯಕ ಸಮುದಾಯವನ್ನು ಇನ್ನಷ್ಟು ಸಂಘಟಿಸಬೇಕು ಎಂದು ಲಯನ್ಸ್ ಕ್ಲಬ್ ಜಿಲ್ಲಾ ಮಾಜಿ ಗವರ್ನರ್ ಡಾ. ಎಂ.ಕೆ.ಭಟ್ ಹೇಳಿದರು.

ತಾಲೂಕಿನ ನಿಸರಾಣಿ ಗ್ರಾಮದ ವಿದ್ಯಾಭಿವೃದ್ಧಿ ಸಂಘದ ಪ್ರೌಢಶಾಲೆ ಸಭಾಂಗಣದಲ್ಲಿ ಅಖಿಲ ಹವ್ಯಕ ಮಹಾಸಭಾದಿಂದ ಭಾನುವಾರ ಆಯೋಜಿಸಿದ್ದ ಪ್ರತಿಬಿಂಬ ಸಾಗರ-ಸೊರಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹವ್ಯಕ ಸಮಾಜದವರು ಸಾಮರಸ್ಯಕ್ಕೆ ಹೆಸರಾಗಿದ್ದು, ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ಔದಾರ್ಯ ಗುಣ ಹೊಂದಿದ್ದಾರೆ. ಇತರ ಎಲ್ಲ ಸಮಾಜದವರೊಂದಿಗೆ ಹೊಂದಿಕೊಳ್ಳುವ ಗುಣ ಹವ್ಯಕ ಸಮಾಜದವರಲ್ಲಿದೆ. ನಾವು ವೃತ್ತಿ ಮಾಡುವಾಗ ಯಾವುದೇ ಮತ, ಪಂಥ, ಜಾತಿ, ಬಡತನ, ಸಿರಿತನ ಎಂಬ ಭೇದವಿಲ್ಲದೆ ಸೇವೆಯೇ ನಮ್ಮ ಗುರಿ ಎಂದು ತಿಳಿಯಬೇಕು. ಹವ್ಯಕ ಸಮಾಜಕ್ಕೆ ಸಂಘಟನೆಯೇ ಮುಖ್ಯ. ಸಂಘಟನೆ ಎಂಬ ಶಕ್ತಿ ನಮಗೆ ಅಡಿಪಾಯ ಆಗಬೇಕು. ಈ ಮೂಲಕ ಮಾದರಿ ಸಮಾಜ ನಿರ್ಮಿಸಬೇಕು ಎಂದರು.

ಪ್ರಗತಿಪರ ಕೃಷಿಕ ಸೀತಾರಾಮಯ್ಯ ಕಟ್ಟಿನಕೆರೆ ಮಾತನಾಡಿ, ಹವ್ಯಕ ಸಮಾಜದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಪ್ರತಿಬಿಂಬ ವೇದಿಕೆ ಮಾಡುತ್ತಿದೆ. ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಹವ್ಯಕ ಸಮುದಾಯ ಪ್ರಗತಿ ಹೊಂದಬೇಕು ಎಂದು ತಿಳಿಸಿದರು.

ಸಾಗರ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ಮಹಾಬಲೇಶ್ವರ ಮಾತನಾಡಿ, ಹವ್ಯಕರು ನಮ್ಮ ಸಂಸ್ಕೃತಿಯನ್ನು ದೇಶದ ಎಲ್ಲೆಡೆ ಪ್ರತಿಬಿಂಬಿಸಿದ್ದಾರೆ ಎಂದರು.

ಪ್ರತಿಬಿಂಬ ಸಂಚಾಲಕ ಎಚ್.ರಾಜಾರಾಮ ರಾವ್ ಹೊಸಬಾಳೆ, ಮಹಾಸಭಾ ನಿರ್ದೇಶಕಿ ರಾಜಲಕ್ಷ್ಮೀ ದೇವಪ್ಪ, ರಾಘವೇಂದ್ರ, ಶೇಷಾಚಲ, ಚಂದ್ರಶೇಖರ್ ಭಟ್, ಬಿಎನ್‌ಸಿ ರಾವ್, ಸವಿತಾ ಭಟ್, ಕಂಚಿ ಶಿವರಾಮ್ ಹೆಗಡೆ, ಜಿ.ಜಿ.ಹೆಗಡೆ, ಹೂ.ಭಾ.ಅಶೋಕ್ ಇತರರಿದ್ದರು.