Haveri, Yadava Sangha,  
ನ್ಯೂಸ್

ಡಿ.ಟಿ.ಶ್ರೀನಿವಾಸಗೆ ಸಚಿವ ಸ್ಥಾನ ಕೊಡಿ; ಹಾವೇರಿ ಜಿಲ್ಲಾ ಯಾದವ ಸಂಘ ಒತ್ತಾಯ

ಹಾವೇರಿ: ಕರ್ನಾಟಕ ರಾಜ್ಯ ಯಾದವ ಗೊಲ್ಲ ಸಂಘ ಹಾಗೂ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ ಅವರಿಗೆ ರಾಜ್ಯ ಸರ್ಕಾರ ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯ ಯಾದವ ಸಂಘದ ಜಂಟಿ ಕಾರ್ಯದರ್ಶಿ ಆರ್.ಎಸ್ ಪಾಟೀಲ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾದವ (ಗೊಲ್ಲ) ಸಮುದಾಯವು ಸುಮಾರು 19 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜಕೀಯವಾಗಿ ಸಮಾಜಕ್ಕೆ ಪ್ರಾತಿನಿಧ್ಯ ಇಲ್ಲದಾಗಿದೆ. ಯಾದವ ಸಮುದಾಯದ ನಾಯಕ ದಿ.ಎ.ಕೃಷ್ಣಪ್ಪ ನಂತರ ರಾಜ್ಯ ಗೊಲ್ಲ ಸಂಘದ ನೇತೃತ್ವವನ್ನು ಚುನಾವಣೆ ಮೂಲಕ ಎದುರಿಸಿ ಡಿ.ಟಿ.ಶ್ರೀನಿವಾಸ ಅಧ್ಯಕ್ಷರಾಗಿ ಮುನ್ನಡೆಸುತ್ತಿದ್ದಾರೆ. ಶ್ರೀನಿವಾಸ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಸಂಘಟನೆ ಮಾಡಿದ್ದಾರೆ. ತುಮಕೂರು, ಚಿತ್ರದುರ್ಗ, ಚಿಕ್ಕೋಡಿಗಳಲ್ಲಿ ಸಮಾವೇಶ ನಡೆಸಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. 2024ರಲ್ಲಿ ನಡೆದ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಗೆಲುವು ಸಾಧಿಸಿ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದರು.
ರಾಜ್ಯದಲ್ಲಿ ಹಿಂದುಳಿದ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷರಾಗಿ ಸುಮಾರು 95ಕ್ಕೂ ಹೆಚ್ಚು ಅತಿ ಹಿಂದುಳಿದ ಸಮಾಜಗಳನ್ನು ಸಂಘಟಿಸಿ ಅವರನ್ನು ಮುನ್ನೆಲೆಗೆ ತರಲು ಅವಿರತ ಶ್ರಮವಹಿಸುತ್ತಿದ್ದಾರೆ. ಆದ್ದರಿಂದ ಡಿ.ಟಿ ಶ್ರೀನಿವಾಸ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ಭೋವಿ ಮಾತನಾಡಿ, ಜಿಲ್ಲೆಯಲ್ಲಿ ಆರೂ ಜನ ಕಾಂಗ್ರೆಸ್ ಪಕ್ಷದ ಶಾಸಕರಿದ್ದು, ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಶಂಕರ ಸುತಾರ, ಸಿ.ಎಂ.ತಂಗೋಡರ ಮಾತನಾಡಿದರು. ಶಿವಣ್ಣ ಗೊಲ್ಲರ, ಪಿ.ಆರ್ ಗೌಡರ, ಬಾಬಣ್ಣ ಗೊಲ್ಲರ, ಚನ್ನಪ್ಪ ಗೊಲ್ಲರ, ಗದಿಗೆಪ್ಪ ಮೇಗಳಮನಿ, ಅಣ್ಣಪ್ಪ ಮೇಗಳಮನಿ, ಫಕ್ಕಿರೇಶ ಹಾವನೂರ, ಬಸನಗೌಡ ಸಣ್ಣಗೌಡ್ರ, ಗಂಗಾಧರ ಶಿರಕೋಳ, ನಾಗರಾಜ ಬಿಷ್ಟಣ್ಣನವರ, ಇತರರಿದ್ದರು.