ಹಾವೇರಿ: ತನ್ನ ಮದುವೆಗೆ ಅಡ್ಡಿಯಾಗುತ್ತಾಳೆ ಎಂಬ ಭಯದಲ್ಲಿ ಯುವಕನೊಬ್ಬ ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾನಗಲ್ ತಾಲೂಕಿನ ಮಕರವಳ್ಳಿ ಕ್ರಾಸ್ ಬಳಿ ನಡೆದಿದೆ.
ಈರಮ್ಮ ಸೋನಾರಪ್ಪ ಮೃತ ದುರ್ದೈವಿ. ಆರೋಪಿ ಯಲ್ಲಪ್ಪ (28) ಈರಮ್ಮಳನ್ನು ಕಾಡಿಗೆ ಕರೆದೊಯ್ದು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಇಬರಿಬ್ಬರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದ ನಿವಾಸಿಗಳು.
ಕಳೆದ ಒಂದು ವರ್ಷದಿಂದ ಈರಮ್ಮ, ಯಲ್ಲಪ್ಪನನ್ನ ಲವ್ ಮಾಡುತ್ತಿದ್ದಳಂತೆ. ಅನಾರೋಗ್ಯಕ್ಕೆ ತುತ್ತಾದ ಗಂಡನನ್ನು ದೂರ ಮಾಡಿ ಯಲ್ಲಪ್ಪನ ಪ್ರೀತಿಯಲ್ಲಿ ಬಿದ್ದಿದ್ದಳು. ಮಿಕ್ಸಿ ರಿಪೇರಿ ಕೆಲಸ ಮಾಡುತ್ತಿದ್ದ ಯಲ್ಲಪ್ಪ ಇನ್ನು ಮದುವೆಯಾಗಿರಲಿಲ್ಲ. ಇತ್ತ ಆಂಟಿಯ ಸಂಗವನ್ನೂ ಮಾಡಿದ್ದ. ಇಬ್ಬರ ನಡುವಿನ ಅಕ್ರಮ ಸಂಬಂಧ ಊರಿನ ಜನರಿಗೂ ತಿಳಿದಿತ್ತು.
ಹೀಗಿರುವಾಗ ಯಲ್ಲಪ್ಪನ ಮನೆಯಲ್ಲಿ ಮದುವೆ ವಿಚಾರ ಪ್ರಸ್ತಾಪವಾಗಿ ಹುಡುಗಿಯನ್ನು ಹುಡುಕುತ್ತಿದ್ದರು. ಹೀಗಾಗಿ ಯಲ್ಲಪ್ಪ, ಈರಮ್ಮನನ್ನು ನಿರ್ಲಕ್ಷಿಸಲು ಆರಂಭಿಸಿದ್ದ. ನೀನು ಮದುವೆಯಾಗುವುದು ಬೇಡ ನನ್ನೊಂದಿಗೆ ಇರು ಎಂದು ಈರಮ್ಮ ಅವಾಜ್ ಹಾಕಿದ್ದಳು ಎನ್ನಲಾಗಿದೆ.
ಹೀಗೆ ಬಿಟ್ಟರೆ ಮುಂದೆ ತೊಂದರೆ ಕೊಡುತ್ತಾಳೆ. ಮದುವೆಗೂ ಅಡ್ಡಿಯಾಗಬಹುದು ಅಂದುಕೊಂಡ ಯಲ್ಲಪ್ಪ ಆಕೆಯ ಕೊಲೆಗೆ ಸಂಚು ರೂಪಿಸುತ್ತಾನೆ. ಅದರಂತೆ ಊರಿನ ಬಳಿಯ ಕಾಡಿಗೆ ಕರೆದೊಯ್ದು ಕೊಲೆ ಮಾಡಿದ್ದಾನೆ. ಸ್ವತಃ ಯಲ್ಲಪ್ಪನೇ ತಪ್ಪೊಪ್ಪಿಕೊಂಡಿದ್ದಾನೆ.
ಇದೀಗ ಘಟನಾ ಸ್ಥಳಕ್ಕೆ ಆಡೂರು ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಬಂಧನವಾಗಿರುವ ಯಲ್ಲಪ್ಪನ ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)