- ಮೆಕ್ಕೆಜೋಳಕ್ಕೆ 3 ಸಾವಿರ ರೂ. ದರ ಘೋಷಣೆಗೆ ಆಗ್ರಹ
- ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವ
- ಮೈಕೊರೆವ ಚಳಿಯ ನಡುವೆಯೇ ರೈತರು ಡಿಸಿ ಕಚೇರಿ ಎದುರು ರಸ್ತೆಬದಿ ಟೆಂಟ್‌ನಲ್ಲಿ ಅಹೋರಾತ್ರಿ ಧರಣಿ
ಹಾವೇರಿ: ಮೆಕ್ಕೆಜೋಳಕ್ಕೆ 3 ಸಾವಿರ ರೂ. ದರ ಘೋಷಣೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಇಲ್ಲಿನ ಹೊರವಲಯ ಜಿಲ್ಲಾಡಳಿತ ಭವನದ ಎದುರು ರೈತರು ಆರಂಭಿಸಿರುವ ಅಹೋರಾತ್ರಿ ಧರಣಿ ಬುಧವಾರ ಮೂರು ದಿನ ಪೂರೈಸಿ, ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಮೈಕೊರೆವ ಚಳಿಯ ನಡುವೆಯೇ ರೈತರು ಡಿಸಿ ಕಚೇರಿ ಎದುರು ರಸ್ತೆಬದಿ ಟೆಂಟ್‌ನಲ್ಲಿ ಬುಧವಾರ ರಾತ್ರಿಯೂ ನಡುಗುತ್ತ ಮಲಗಿದ್ದರು. ಬೆಳಗ್ಗೆ ಎದ್ದ ಬಳಿಕ ಟೆಂಟ್ ಪಕ್ಕದಲ್ಲೇ ಅಡುಗೆ ತಯಾರಿಸಿ ಉಪಾಹಾರ ಸೇವಿಸಿದರು. ಬಳಿಕ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ರೈತ ಗೀತೆ, ಕ್ರಾಂತಿ ಗೀತೆಗಳನ್ನು ಹಾಡುತ್ತ ಪ್ರತಿಭಟಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಕಳೆದ ನಾಲ್ಕು ದಿನಗಳಿಂದ ರೈತರು ಮೆಕ್ಕೆಜೋಳಕ್ಕೆ ಮೂರು ಸಾವಿರ ರೂ.ದರ ನಿಗದಿ ಹಾಗೂ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಹಗಲು ರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೂ ಸರ್ಕಾರ ರೈತರ ನೆರವಿಗೆ ಧಾವಿಸಿಲ್ಲ. ಜಿಲ್ಲೆಯ ಯಾವೊಬ್ಬ ಸಚಿವರು, ಶಾಸಕರೂ ರೈತರ ಸಂಕಷ್ಟ ಆಲಿಸಲು ಬಂದಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಾನ, ಮರ್ಯಾದೆ ಇಲ್ಲದಾಗಿದೆ. ರೈತರು ಒದ್ದಾಡುತ್ತಿದದ್ರೆ ಇವರು ಸಿಎಂ ಕುರ್ಚಿಗಾಗಿ ಹೊಡೆದಾಡುತ್ತಿದ್ದಾರೆ. ರೈತರನ್ನು ಕಡೆಗಣಿಸುವ ಸರ್ಕಾರಗಳಿಗೆ ಭವಿಷ್ಯದಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಹಾವೇರಿ ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಬಸವರಾಜ ಅರಬಗೊಂಡ, ವಿವಿಧ ಮಹಿಳಾ ಸಂಘಟನೆಯವರು ಬೆಂಬಲ ನೀಡಿದ್ದರು. ಮುಖಂಡರಾದ ಮಾಲತೇಶ ಪೂಜಾರ, ಎಚ್.ಎಚ್ ಮುಲ್ಲಾ, ಶಿವಬಸಪ್ಪ ಗೋವಿ, ಮರಿಗೌಡ್ರ ಪಾಟೀಲ, ಪ್ರಭುಗೌಡ ಪ್ಯಾಟಿ, ಚನ್ನಪ್ಪ ಮರಡೂರ, ರಾಜು ತರ್ಲಗಟ್ಟ, ಶಂಕ್ರಣ್ಣ ಶಿರಗಂಬಿ, ಅಡಿವೆಪ್ಪ ಆಲದಕಟ್ಟಿ, ರುದ್ರಗೌಡ ಕಾಡನಗೌಡ್ರ, ದಿಳ್ಳೆಪ್ಪ ಮಣ್ಣೂರ, ಮುತ್ತಪ್ಪ ಗುಡಗೇರಿ, ಇತರರಿದ್ದರು.
ನ.27ರಂದು ಗುರುವಾರ ಬೆಳಗ್ಗೆ 10ಕ್ಕೆ ಧರಣಿ ಸ್ಥಳದಲ್ಲಿ ರೈತ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಹೋರಾಟ ತೀವ್ರಗೊಳಿಸುವ ಕುರಿತು ಚರ್ಚೆ ನಡೆಸುತ್ತೇವೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.