ಹಾವೇರಿ: ಹಣಕಾಸು ತಂತ್ರಜ್ಞಾನ ಎನ್ನುವುದು ಹಣಕಾಸು ಸೇವೆಗಳನ್ನು ನೀಡಲು ತಂತ್ರಜ್ಞಾನವನ್ನು ಬಳಸುವ ಕಂಪನಿಗಳಿಂದ ಕೂಡಿದ ಉದ್ಯಮವಾಗಿದೆ. ವಿಮೆ, ಆಸ್ತಿ ನಿರ್ವಹಣೆ ಮತ್ತು ಪಾವತಿ ಮತ್ತು ಹಲವಾರು ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವುದರ ಜತೆಗೆ ವ್ಯವಸ್ಥೆಗೆ ಪೂರಕವಾದ ಮತ್ತು ಅನುಕೂಲವಾದ ವಾತಾವರಣವನ್ನು ನಿರ್ಮಾಣ ಮಾಡಿದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಟಿ.ಬಾಗಲಕೋಟಿ ಅಭಿಪ್ರಾಯಪಟ್ಟರು.
ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಹಣಕಾಸು ತಂತ್ರಜ್ಞಾನ; ತಾಂತ್ರಿಕ ಯುಗಕ್ಕಾಗಿ ಹಣಕಾಸು ಸೇವೆಗಳ ವಲಯವನ್ನು ಮರುಪರಿಶೀಲಿಸುವುದು’ ವಿಷಯದ ಕುರಿತ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಕೆಲವು ವರ್ಷಗಳಲ್ಲಿ ಹಣಕಾಸು ತಂತ್ರಜ್ಞಾನವು ಭಾರತದಲ್ಲಿ ತುಲನಾತ್ಮಕವಾಗಿ ಹೊಸ ಉದ್ಯಮವಾಗಿ ಹೊರಹೊಮ್ಮಿದೆ. ಭಾರತೀಯ ಮಾರುಕಟ್ಟೆಯು ಫಿನ್‌ಟೆಕ್‌ನ್ನು ಅಳವಡಿಸಿಕೊಳ್ಳುವ ವಿವಿಧ ವಲಯಗಳಲ್ಲಿ ಬೃಹತ್ ಹೂಡಿಕೆಗಳಿಗೆ ಸಾಕ್ಷಿಯಾಗಿದೆ. ಇದು ದೇಶವನ್ನು ಡಿಜಿಟಲ್ ಆರ್ಥಿಕತೆಯತ್ತ ತಳ್ಳುತ್ತಿರುವ ದೃಢವಾದ ಮತ್ತು ಪರಿಣಾಮಕಾರಿ ಸರ್ಕಾರದ ಸುಧಾರಣೆಗಳಿಂದ ಭಾಗಶಃ ನಡೆಸಲ್ಪಟ್ಟಿದೆ. ಇದು ಬೆಳೆಯುತ್ತಿರುವ ಇಂಟರ್‌ನೆಟ್ ಮತ್ತು ಸ್ಮಾರ್ಟ್‌ಫೋನ್ ನುಗ್ಗುವಿಕೆಯಿಂದ ಸಹಾಯ ಮಾಡಲ್ಪಟ್ಟಿದೆ. ಇದು ಡಿಜಿಟಲ್ ತಂತ್ರಜ್ಞಾನಗಳ ಅಳವಡಿಕೆಗೆ ಮತ್ತು ದೇಶದಲ್ಲಿ ಫಿನ್‌ಟೆಕ್‌ನ ಉದಯಕ್ಕೆ ದಾರಿ ತೋರಿದೆ ಎಂದರು.
ವರದಿಯೊಂದರ ಪ್ರಕಾರ, ಭಾರತವು ವಿಶ್ವದಲ್ಲೇ ಅತಿ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಫಿನ್‌ಟೆಕ್ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದು ಫಿನ್‌ಟೆಕ್ ಅಳವಡಿಕೆ ಸೂಚ್ಯಂಕದಲ್ಲಿ ಶೇ.87ರಷ್ಟು ದತ್ತು ದರದೊಂದಿಗೆ ಚೀನಾದ ನಂತರ ಎರಡನೇ ಸ್ಥಾನದಲ್ಲಿದೆ. ಎಫ್‌ಐಎ ಗ್ಲೋಬಲ್‌ನ ವರದಿಯಲ್ಲಿ ಉಲ್ಲೇಖಿಸಿರುವಂತೆ ಭಾರತಕ್ಕೆ 2021ರಲ್ಲಿ ಫಿನ್‌ಟೆಕ್ ಮಾರುಕಟ್ಟೆಯ ಒಟ್ಟಾರೆ ಅಂದಾಜು 50 ಬಿಲಿಯನ್ ಡಾಲರ್ ಆಗಿದೆ ಎಂದರು.
ಬೆಂಗಳೂರಿನ ಹಣಕಾಸು ತಂತ್ರಜ್ಞಾನಿ ಡಾ.ಕಿರಣಕುಮಾರ ಕೆ.ವಿ. ಉಪನ್ಯಾಸ ನೀಡಿದರು.
ಹಣಕಾಸು ಮಾಹಿತಿ ತಂತ್ರಜ್ಞ ಡಾ. ಸುಧೀಂದ್ರ ವಿ.ಆರ್. ಹಾಗೂ ಕಾಲೇಜು ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ.ಎಸ್. ಎಲ್.ಬಾಲೇಹೊಸೂರ, ಕಾಲೇಜು ಮಂಡಳಿ ಸದಸ್ಯರಾದ ಬಸವರಾಜ ಮಾಸೂರ, ಜೆ.ಎಸ್.ಅರಣಿ, ಎಸ್.ಎಂ.ಹುರಳಿಕುಪ್ಪಿ, ವಿಭಾಗದ ಮುಖ್ಯಸ್ಥ ಡಾ.ಎಂ.ಬಿ.ಯಾದಗುಡಿ, ಇತರರು ಉಪಸ್ಥಿತರಿದ್ದರು.
ಸ್ವಾತಿ ಗೌಳಿ ಪ್ರಾರ್ಥಿಸಿದರು. ಪ್ರಾಚಾರ್ಯೆ ಡಾ.ಸಂಧ್ಯಾ ಕುಲಕರ್ಣಿ ಸ್ವಾಗತಿಸಿದರು. ಪ್ರೊ.ಜಿ.ಎಸ್.ಬಾರ್ಕಿ ಸ್ವಾಗತಿಸಿದರು. ಪ್ರೊ.ರಿಷಿಕಾ ಡಿ. ನಿರೂಪಿಸಿದರು. ಪ್ರೊ.ಆರ್.ಬಿ.ಅಜರಡ್ಡಿ ವಂದಿಸಿದರು.
43 ಪ್ರಬಂಧ ಮಂಡನೆ :
ದೇಶ, ವಿದೇಶಗಳಿಂದ ಆಗಮಿಸಿದ್ದ ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಪ್ರತಿನಿಧಿಗಳು 43 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.
ಆರ್ಥಿಕ ಅಭಿವೃದ್ಧಿಗೆ ಸಹಕಾರಿ
ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ.ಕೊಳ್ಳಿ ಮಾತನಾಡಿ, ಆಧುನಿಕತೆಯ ಜಗತ್ತಿನಲ್ಲಿ ತಾಂತ್ರಿಕ ವ್ಯವಸ್ಥೆ ಅತ್ಯಂತ ಮಹತ್ವದ ಮೈಲಿಗಲ್ಲುಗಳನ್ನು ದಾಟಿ ವಿಶ್ವವನ್ನು ಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದೆ. ಆರ್ಥಿಕ ವ್ಯವಸ್ಥೆಗೆ ಅನುಕೂಲವಾಗುವ ರೀತಿಯಲ್ಲಿ ಹಣಕಾಸು ತಂತ್ರಜ್ಞಾನವೂ ಸಹ ತನ್ನ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿಕೊಂಡು ಎಲ್ಲ ಕ್ಷೇತ್ರಗಳಂತೆ ಮುಂದೆ ಸಾಗುತ್ತಿದೆ ಎಂದರು.