District Administration Constitution Day  
ನ್ಯೂಸ್

ಭಾರತದ ಧರ್ಮಗ್ರಂಥ ನಮ್ಮ ಸಂವಿಧಾನ; ಸರ್ವರಿಗೂ ಸಮಾನತೆಯ ಹಕ್ಕು ನೀಡಿದ ಡಾ.ಬಿ.ಆರ್.ಅಂಬೇಡ್ಕರ್; ಶಾಸಕ ಬಸವರಾಜ ಶಿವಣ್ಣನವರ

ಕೇಶವಮೂರ್ತಿ ಬೇಲೂರಪ್ಪನವರ

ಪ್ರಮುಖ ಮುಖ್ಯಾಂಶಗಳು

  • ಭಾರತ ಸಂವಿಧಾನ ಈ ದೇಶದ ಧರ್ಮಗ್ರಂಥ ಇದ್ದಂತೆ
  • ದೇಶದ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ನೀಡಿದೆ
  • ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ
ಹಾವೇರಿ: ಭಾರತ ಸಂವಿಧಾನ ಈ ದೇಶದ ಧರ್ಮಗ್ರಂಥ ಇದ್ದಂತೆ. ಹಲವಾರು ಜಾತಿ, ಭಾಷೆ, ವೈವಿಧ್ಯಮಯವಾದ ಸಂಸ್ಕೃತಿ ಹಾಗೂ ಆಚರಣೆಗಳಿಂದ ಕೂಡಿದ ಈ ದೇಶದ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಸೇರಿದಂತೆ ಸಮಾನತೆ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಪರಿಶಿಷ್ಟ ಜಾತಿಗಳ ಒಕ್ಕೂಟಗಳು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಅಹಿಂಸಾ ಮಾರ್ಗದಿಂದ ಶಾಂತಿಯುತವಾಗಿ 1947ರಲ್ಲಿ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಅದೇ ರೀತಿ ಡಾ.ಬಿ.ಆರ್.ಅಂಬೇಡ್ಕರ್ ದೇಶದ ಪ್ರತಿ ಪ್ರಜೆಗೆ ಜಾತ್ಯಾತೀತವಾಗಿ ಸಮಾನ ಹಕ್ಕುಗಳನ್ನು ಸಂವಿಧಾನದಲ್ಲಿ ನೀಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಸಮಾಜಕ್ಕೆ ಮಾತ್ರ ಸಂವಿಧಾನ ಬರೆಯಲಿಲ್ಲ, ಎಲ್ಲರಿಗೂ ಸಮಾನತೆ ಕಲ್ಪಿಸುವ ಸಂವಿಧಾನ ದೇಶಕ್ಕೆ ನೀಡಿದ್ದಾರೆ. ಅವರ ಕನಸು ನನಸು ಮಾಡಲು ಸಂವಿಧಾನದ ಆಶಯದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಹೇಳಿದರು.
ಸ್ವಾತಂತ್ರಾೃ ನಂತರದಲ್ಲಿ ದೇಶದ ಜನಸಂಖ್ಯೆ 36 ಕೋಟಿ ಹಾಗೂ ಸಾಕ್ಷರತಾ ಪ್ರಮಾಣ ಶೇ.26ರಷ್ಟು ಇತ್ತು. ಈಗ 140 ಕೋಟಿ ಜನಸಂಖ್ಯೆ ಹಾಗೂ ಶೇ.76ರಷ್ಟು ಸಾಕ್ಷರತಾ ಪ್ರಮಾಣವಿದೆ. ಇಂದು ಎಲ್ಲ ಕ್ಷೇತ್ರಗಳಲ್ಲಿ ದೇಶ ಸಾಧನೆ ಮಾಡಿದೆ. ಮತದಾರರು ಉತ್ತಮ ನಾಯಕನನ್ನು ಆಯ್ಕೆ ಮಾಡುವ ಮೂಲಕ ಸುಭದ್ರ ಹಾಗೂ ಸದೃಢ ದೇಶ ಕಟ್ಟಲು ಕೈಜೋಡಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್ ಮಾತನಾಡಿ, ವಿದ್ಯಾರ್ಥಿಗಳು ಸಂವಿಧಾನ ಓದಬೇಕು ಹಾಗೂ ಸಂವಿಧಾನದಲ್ಲಿ ನೀಡಿದ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.
ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಸ್.ಟಿ. ಬಾಗಲಕೋಟಿ ಮಾತನಾಡಿ, ಭಾರತ ಸಂವಿಧಾನ ವಿಶಿಷ್ಟವಾಗಿದೆ. ಸಂವಿಧಾನ ಪ್ರತಿಯೊಬ್ಬರಿಗೂ ಘನತೆಯ ಜೀವನ ಕಟ್ಟಿಕೊಟ್ಟಿದೆ. ನಮ್ಮ ಪರಂಪರೆ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದಿದೆ. ಸಾರ್ವತ್ರಿಕ ಮತದಾನದ ಹಕ್ಕು ನೀಡಿದೆ. ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ಯಾವ ರೀತಿ ನಡೆಯಬೇಕು ಎಂದು ಉಲ್ಲೇಖಿಸಿದೆ. ವಿವಿಧ ದೇಶಗಳ ಸಂವಿಧಾನ 16ರಿಂದ 17 ವರ್ಷಗಳು ಮಾತ್ರ ಜಾರಿಯಲ್ಲಿರುತ್ತವೆ. ಆದರೆ ನಮ್ಮ ಸಂವಿಧಾನ 76 ವರ್ಷ ಕಳೆದರೂ ಗಟ್ಟಿತನ, ಸದೃಢತೆ ಸೂಚಿಸುತ್ತದೆ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆಂಜನೇಯ ಹುಲ್ಲಾಳ ಸಂವಿಧಾನದ ಪೂರ್ವ ಪೀಠಿಕೆ ವಾಚಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ.ಮೈದೂರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳಿ,್ಳ ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್., ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ್ ಶರಣಮ್ಮ, ಮುಖಂಡರಾದ ಬಸವರಾಜ ಹೆಡಿಗ್ಗೊಂಡ, ಉಡಚಪ್ಪ ಮಾಳಗಿ, ಹೊನ್ನಪ್ಪ ತಗಡಿನಮನಿ, ಎನ್.ಬಿ.ಕಾಳೆ, ಮಾಲತೇಶ ಯಲ್ಲಾಪೂರ, ಬಸವರಾಜ ಹಾದಿಮನಿ, ಭೀಮಪ್ಪ ಯಲ್ಲಾಪೂರ, ಮಂಜುನಾಥ ಸಣ್ಣಿಂಗಣ್ಣನವರ, ಮಂಜುನಾಥ ಪಾಟೀಲ, ನವೀನ ಸಿದ್ದಣ್ಣನವರ, ಅಶೋಕ ಮರೆಯಣ್ಣನವರ, ವಿಭೂತಿ ಶೆಟ್ಟರ, ಮಂಜಪ್ಪ ಮರೋಳ, ಸುಭಾಸ ಚವ್ಹಾಣ, ಸುನೀಲ ಬೆಟಗೇರಿ, ದಯಾನಂದ ಸುತ್ತಕೋಟಿ, ಗುಡ್ಡಪ್ಪ ನೆಲೋಗಲ್, ರಮೇಶ ಆನವಟ್ಟಿ, ಸಂಜಯಗಾಂಧಿ, ಇತರರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ ಸ್ವಾಗತಿಸಿದರು.
ಬಹುಮಾನ ವಿತರಣೆ:
ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಂಗೋಲಿ, ಚಿತ್ರಕಲಾ, ಛಾಯಾಚಿತ್ರ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಗಮನ ಸೆಳೆದ ಜಾಥಾ
ಬೆಳಗ್ಗೆ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಚಾಲನೆ ನೀಡಿದರು. ರಾಷ್ಟ್ರಧ್ವಜ ಪ್ರದರ್ಶನದೊಂದಿಗೆ ಸಂವಿಧಾನ ಪುಸ್ತಕವನ್ನು ಪ್ರದರ್ಶಿಸುವ ಮೂಲಕ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.