ನ್ಯೂಸ್

ಪ್ರಾರಂಭವಾಗದ ಕಾಮಗಾರಿ ಆರಂಭಿಸಿದರೆ ಕಠಿಣ ಕ್ರಮ

ಹಾವೇರಿ: ವಿಧಾನಸಭಾ ಚುನಾಚಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ವಿವಿಧ ಇಲಾಖೆಯ ಕಾಮಗಾರಿಗಳು ಮಂಜೂರಾತಿ ದೊರೆತು ಈವರೆಗೆ ಪ್ರಾರಂಭವಾಗದೇ ಇರುವ ಕಾಮಗಾರಿಗಳನ್ನು ಯಾವುದೇ ಕಾರಣಕ್ಕೂ ಆರಂಭಿಸದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಅನುಷ್ಠಾನಾಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಾ.29ರಿಂದ ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಜಿಲ್ಲೆಯ ಎಲ್ಲ ಇಲಾಖಾ ಅಧಿಕಾರಿಗಳಿಂದ ಪ್ರಾರಂಭವಾಗದೇ ಇರುವ ಕಾಮಗಾರಿಗಳ ಮಾಹಿತಿ ಪಡೆದು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಮುಕ್ತಾಯವಾಗುವವರೆಗೂ ಕಾಮಗಾರಿಗಳನ್ನು ಆರಂಭಿಸದಂತೆ ನೋಡಿಕೊಳ್ಳುವುದು ಇಲಾಖೆಗಳ ಮುಖ್ಯಸ್ಥರ ಹಾಗೂ ಕಾಮಗಾರಿ ಅನುಷ್ಠಾನಗೊಳಿಸುವ ಜಿಲ್ಲಾ ಮಟ್ಟದ ಅಧಿಕಾರಿಗಳ ಜಂಟಿ ಹೊಣೆಗಾರಿಕೆಯಾಗಿದೆ.
ಇದನ್ನು ಮೀರಿ ಯಾರಾದರೂ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಕಾಮಗಾರಿ ಪ್ರಾರಂಭಿಸಿದ್ದು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕರ್ನಾಟಕ ನಾಗರಿಕ ಸೇವಾ ನಿಯಮದಡಿ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವದರ ಜತೆಗೆ ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.