ಹಾವೇರಿ: ಯುವತಿ ಮೇಲಿನ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಪ್ರಸಾದ ಚಿಕ್ಕಳ್ಳಿ ಬಂಧಿತ ಆರೋಪಿ. ಈತನನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಗ್ರಾಮವೊಂದರಲ್ಲಿ ಪೊಲೀಸರು ಬಂಧಿಸಿದ್ದಾರೆ. ಸಿಪಿಐ ಪ್ರಭಾವತಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಘಟನೆ ಹಿನ್ನೆಲೆ ಏನು?
ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿ ಮೇಲೆ ಬೈಕ್ನಲ್ಲಿ ಬಂದ ಪ್ರಸಾದ ಚಿಕ್ಕಳ್ಳಿ ಹಾವೇರಿ ನಗರದ ಕಟ್ಟಿಮನಿ ಗ್ಯಾರೇಜ್ ಬಳಿ ಮಂಗಳವಾರ ಸಂಜೆ ಆ್ಯಸಿಡ್ ದಾಳಿ ಮಾಡಿದ್ದ. ಪ್ರೀತಿ ನಿರಾಕರಿಸಿದಳೆಂಬ ದ್ವೇಷಕ್ಕೆ ಈ ರೀತಿ ಮಾಡಿದ್ದ ಎನ್ನಲಾಗಿದೆ. ದಾಳಿಯಿಂದ ಯುವತಿಯ ಮುಖ, ಕಣ್ಣು ಹಾಗೂ ಕೈ ಮೇಲೆ ಆಸಿಡ್ ಬಿದ್ದಿತ್ತು.
ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡಲೇ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಅಲ್ಲಿಂದ ಕೂಡಲೇ ಆಕೆಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಶಾಸಕ ನೆಹರು ಓಲೇಕಾರ, ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲ್ದಂಡಿ ಆಸ್ಪತ್ರೆಗೆ ಭೇಟಿ ನೀಡಿ ಯುವತಿ ಆರೋಗ್ಯ ವಿಚಾರಿಸಿದ್ದರು.
ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ಯುವತಿ ಸದ್ಯ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)