Petrol Bunk : ಇಂದು ಬಹುತೇಕರ ಮನೆಯಲ್ಲಿ ಒಂದಲ್ಲ ಒಂದು ವಾಹನ ಇದ್ದೇ ಇದೆ. ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಗಮನ ಸೆಳೆಯುತ್ತಿದ್ದರೂ ಇಂಧನ ಆಧಾರಿತ ವಾಹನಗಳ ಸಂಖ್ಯೆಯೇನು ಕಡಿಮೆಯಾಗುತ್ತಿಲ್ಲ. ಇಂದಿಗೂ ಬಹುತೇಕ ಮನೆಗಳಲ್ಲಿ ಡೀಸೆಲ್ ಅಥವಾ ಪೆಟ್ರೋಲ್ನಿಂದ ಓಡುವ ವಾಹನಗಳೇ ಹೆಚ್ಚು.
ವಾಹನ ಅಂತಾ ಬಂದಾಗ ಇಂಧನ ತುಂಬಾ ಮುಖ್ಯ. ಪೆಟ್ರೋಲ್ ಅಥವಾ ಡೀಸೆಲ್ ತುಂಬದೇ ಹೋದರೆ ವಾಹನ ಒಂದಿಂಚು ಕೂಡ ಕದಲಲ್ಲ. ಇಂಧನ ತುಂಬುವುದಕ್ಕಾಗಿಯೇ ಅನೇಕ ಪೆಟ್ರೋಲ್ ಬಂಕ್ಗಳಿವೆ. ನಿತ್ಯವೂ ಕೋಟ್ಯಂತರ ರೂ. ಆದಾಯ ಮಾಡುತ್ತಿವೆ. ಆದರೆ, ಕೆಲವು ಬಂಕ್ಗಳಲ್ಲಿ ಸವಾರರನ್ನು ವಂಚಿಸುವ ಮೂಲಕ ಹಣ ದೋಚುತ್ತಿವೆ.
ಇಂಧನ ತುಂಬಿಸಲು ಪೆಟ್ರೋಲ್ ಬಂಕ್ಗೆ ನಿತ್ಯವೂ ಸಾವಿರಾರು ಮಂದಿ ಹೋಗುತ್ತಾರೆ. ಆದರೆ, ಕೆಲವು ಪಂಪ್‌ಗಳಲ್ಲಿ ನೀವು ಮೋಸ ಹೋಗುತ್ತೀರಿ. ಆದರೆ, ಅದು ನಿಮಗೆ ಗೊತ್ತಾಗುವುದೇ ಇಲ್ಲ. ಈ ರೀತಿ ಜನರನ್ನು ಮೂರ್ಖರನ್ನಾಗಿಸಲು ಪೆಟ್ರೋಲ್ ಬಂಕ್ನಲ್ಲಿ ಬಳಸುವ ತಂತ್ರವೇ ಜಂಪ್ ಟ್ರಿಕ್. ಈ ಜಂಪ್ ಟ್ರಿಕ್ ಅಂದರೆ ಏನೆಂಬುದನ್ನು ನಾವೀಗ ನೋಡೋಣ.
ಜಂಪ್ ಟ್ರಿಕ್ ಅಂದರೆ ಕಡಿಮೆ ಇಂಧನವನ್ನು ನೀಡಲು ರೀಡಿಂಗ್ ಮೀಟರ್ ಅನ್ನು ತಿರುಚುವ ಒಂದು ವಂಚನೆಯ ಮಾರ್ಗವಾಗಿದೆ. ಪೆಟ್ರೋಲ್ ಬಂಕ್ನಲ್ಲಿ ಮೀಟರ್ ಅನ್ನು ಟ್ಯಾಂಪರಿಂಗ್ ಮಾಡಿ, ಹೆಚ್ಚಿನ ಮೀಟರ್ ರೀಡಿಂಗ್ ಅನ್ನು ತೋರಿಸಲು ಇಂಧನ ಫ್ಲೋರೇಟ್ ಅನ್ನು ಬಹಳ ಕುಶಲತೆಯಿಂದ ನಿರ್ವಹಿಸುತ್ತಾರೆ. ಇದರಿಂದ ಸಾಕಷ್ಟು ಮಂದಿ ಮೋಸ ಹೋಗುತ್ತಿದ್ದಾರೆ. ಕಾಸಿಗೆ ತಕ್ಕಷ್ಟು ಇಂಧನ ಸಿಗದಂತೆ ಮಾಡಿ, ಸವಾರರನ್ನು ಕೆಲ ಬಂಕ್ನವರು ವಂಚಿಸುತ್ತಿದ್ದಾರೆ. ನಾವೀಗ ಈ ಜಂಪ್ ಟ್ರಿಕ್ ಅನ್ನು ತಪ್ಪಿಸಲು ಅಥವಾ ಪತ್ತೆಹಚ್ಚುವುದು ಹೇಗೆಂದು ತಿಳಿಯೋಣ.
ಪೆಟ್ರೋಲ್ ಬಂಕ್ಗೆ ಭೇಟಿ ನೀಡಿ ಇಂಧನವನ್ನು ಟ್ಯಾಂಕ್ಗೆ ತುಂಬಿಸುವಾಗ ನೀವು ಮೀಟರ್ ರೀಡಿಂಗ್ ಮೇಲೆ ಗಮನವಿಟ್ಟಿರಬೇಕು. ಒಂದು ವೇಳೆ ಮೀಟರ್ ರೀಡಿಂಗ್ನಲ್ಲಿ ಗಮನಾರ್ಹವಾಗಿ ಜಿಗಿತವಾದರೆ, ಅದು ಮೀಟರ್ ಟ್ಯಾಂಪರಿಂಗ್ನ ಸೂಚನೆಯಾಗಿದೆ.
ಇಂಧನ ತುಂಬಲು ಪ್ರಾರಂಭಿಸುವ ಮೊದಲು ಮೀಟರ್ ಶೂನ್ಯದಲ್ಲಿಯೇ ಎಂದು ಪರಿಶೀಲಿಸಿಕೊಳ್ಳಿ. ಮೀಟರ್ ಯಾವ ರೀತಿ ಓಡುತ್ತದೆ ಎಂಬುದನ್ನು ಗಮನಿಸಿ. ಮೀಟರ್ ಓಡುವಾಗ ಕ್ರಮಬದ್ಧತೆ ಇರಬೇಕು. ಒಂದು ವೇಳೆ ನಂಬರ್ಗಳಲ್ಲಿ ಜಿಗಿತ ಕಂಡರೆ ತಕ್ಷಣವೇ ಯಂತ್ರವನ್ನು ನಿಲ್ಲಿಸಲು ಆಪರೇಟರ್ ಅನ್ನು ಕೇಳಿ. ಈ ತಂತ್ರಗಳ ಮೂಲಕ ಜಂಪ್ ಟ್ರಿಕ್ ಅನ್ನು ಪತ್ತೆಹಚ್ಚಬಹುದು. ಪೆಟ್ರೋಲ್ ಹಾಕಿಸಿಕೊಳ್ಳುವಾಗ ಮೀಟರ್ ರೀಡಿಂಗ್ ಮೇಲೆ ನಿಮ್ಮ ಗಮನವಿರಲಿ. (ಏಜೆನ್ಸೀಸ್)