ಎರಡನೆಯದಾಗಿ, ಯಾವುದೇ ಸಂಕಲ್ಪವನ್ನೂ ಎರಡು ಅಥವಾ ಮೂರು ದಿನ ನಿರಂತರವಾಗಿ ತಪ್ಪಿಸಬಾರದು. ಒಟ್ಟಿನಲ್ಲಿ ಈ ವರ್ಷ ಹಿಂದಿನ ವರ್ಷಗಳಂತೆ ಪ್ರತಿಜ್ಞೆಗಳನ್ನು ವಿಫಲ ಮಾಡದೇ ದೃಢ ಮನಸ್ಸಿನಿಂದ 2025ನೇ ಇಸವಿಯನ್ನು ಸಫಲಗೊಳಿಸೋಣ. ನಾವೆಲ್ಲ ನಮ್ಮ ಆರೋಗ್ಯಕ್ಕಾಗಿ ಈ ಆರು ಪ್ರತಿಜ್ಞೆಗಳನ್ನು ಮಾಡೋಣ.
1. ದೇಹಕ್ಕೆ ಬೇಕಾದಷ್ಟು ನೀರುಣಿಸೋಣ: ನಮ್ಮ ದೇಹದ ಮುಕ್ಕಾಲು ಭಾಗ ನೀರಿನಿಂದಲೇ ಆಗಿದೆ. ಹಾಗಾಗಿ ಜೀರ್ಣಕ್ರಿಯೆ, ವಿಸರ್ಜನೆಯ ಕ್ರಿಯೆ, ದೇಹದ ಪ್ರಮುಖ ಅಂಗಗಳ ಕೆಲಸ ಸರಿ ಯಾಗಿ ಆಗಲು ಸರಿಯಾದ ಪ್ರಮಾಣದ ನೀರಿನ ಅವಶ್ಯಕತೆ ಇರುತ್ತದೆ. ಆದ್ದರಿಂದ ಪ್ರತಿನಿತ್ಯ ಕನಿಷ್ಠ ಮೂರ್ನಾಲ್ಕು ಲೀಟರ್ ನೀರನ್ನು ಸೇವಿಸುವ ಪ್ರತಿಜ್ಞೆ ಮಾಡೋಣ. (ಕೆಲ ಅಪರೂಪದ ಸಂದರ್ಭದಲ್ಲಿ ವೈದ್ಯರು ನೀರು ಸೇವನೆಗೆ ಮಿತಿ ಹಾಕಿದ್ದರೆ ಅದನ್ನೇ ಪಾಲಿಸಿ)
2.ವಿಷ ಸೇವನೆಯನ್ನು ಬಿಡೋಣ: ನಾಲಿಗೆಯ ಖುಷಿಗಾಗಿ ಇಡೀ ದೇಹದ ಆರೋಗ್ಯವನ್ನು ನಾವು ಹಾಳು ಮಾಡಿಕೊಳ್ಳುತ್ತೇವೆ. ಹೊರಗಿನಿಂದ ತಂದು ತಿನ್ನುವ ಬಹುತೇಕ ಎಲ್ಲ ಆಹಾರ ಪದಾರ್ಥಗಳಲ್ಲಿ ಹತ್ತಾರು ರೀತಿಯ ವಿಷಕಾರಿ ರಾಸಾಯನಿಕಗಳು ಇದ್ದೇ ಇರುತ್ತವೆ. ಇವುಗಳಿಂದ ಕ್ಯಾನ್ಸರ್ನಂತಹ ಕಾಯಿಲೆಗಳು ಬರುವುದು ದೃಢಪಟ್ಟಿದೆ. ಹಾಗಾಗಿ ಹೆಚ್ಚೆಂದರೆ ತಿಂಗಳಿಗೊಮ್ಮೆ ಮಾತ್ರ ಹೊರಗಿನ ಆಹಾರವನ್ನು ಸೇವಿಸುತ್ತೇವೆ ಎಂದು ಪ್ರತಿಜ್ಞೆ ಮಾಡೋಣ.
3.ಕಾಬೋಹೈಡ್ರೇಟನ್ನು ಅರ್ಧಕ್ಕಿಳಿಸೋಣ: ನಾವೆಲ್ಲಾ ಸುಮಾರು ಶೇಕಡ 80ರಷ್ಟು ಕಾಬೋಹೈಡ್ರೇಟನ್ನೇ ಸೇವಿಸುತ್ತೇವೆ. ಈ ವರ್ಷದಿಂದ ಅದನ್ನು ಅರ್ಧಕ್ಕೆ ಇಳಿಸಿ ಆ ಜಾಗದಲ್ಲಿ ಪೋ›ಟೀನ್, ಒಳ್ಳೆಯ ಕೊಬ್ಬು ಮತ್ತು ನಾರಿನಂಶ ಇರುವ ಆಹಾರವನ್ನು ಸೇವಿಸೋಣ. ಅಕ್ಕಿ, ಗೋಧಿ, ರಾಗಿ, ಜೋಳ ಇಂತಹ ಏಕದಳ ಧಾನ್ಯಗಳು ಕಾಬೋಹೈಡ್ರೇಟ್ನಿಂದ ತುಂಬಿರುತ್ತವೆ. ಬೇಳೆ, ಕಾಳುಗಳು, ಮೊಟ್ಟೆ ಇತ್ಯಾದಿಗಳಿಂದ ನಮಗೆ ಪೊ›ಟೀನ್ ಸಿಗುತ್ತದೆ. ಮನೆಯಲ್ಲೇ ತಯಾರಿಸಿದ ತುಪ್ಪ, ಗಾಣದಲ್ಲಿ ತಯಾರಿಸಿದ ಎಣ್ಣೆ ಮತ್ತು ಶೇಂಗಾ, ಬಾದಾಮಿ, ವಾಲ್ನಟ್ಗಳಂತಹ ನಟ್ಗಳಿಂದ ನಮಗೆ ಒಳ್ಳೆಯ ಕೊಬ್ಬು ಸಿಗುತ್ತದೆ. ತರಕಾರಿಗಳು, ಹಣ್ಣುಗಳು ಸೊಪ್ಪುಗಳಿಂದ ನಾರಿನಂಶ ಸಿಗುತ್ತದೆ. ಹೀಗೆ ಕಾಬೋಹೈಡ್ರೇಟ್ಸ್ ಸೇವನೆಯನ್ನು ಅರ್ಧಕ್ಕಿಳಿಸಿ ಪ್ರೋಟೀನ್, ಕೊಬ್ಬು, ನಾರು ಪದಾರ್ಥಗಳನ್ನು ಹೆಚ್ಚು ಸೇವಿಸೋಣ.
4.ನಿತ್ಯವೂ ತಪ್ಪದೇ ವ್ಯಾಯಾಮ ಮಾಡೋಣ: ಮಾಂಸಖಂಡ ಗಳು, ಮೂಳೆ, ಸಂಧಿಗಳ ಆರೋಗ್ಯ ಚೆನ್ನಾಗಿರಬೇಕೆಂದರೆ ನಿತ್ಯವೂ ವ್ಯಾಯಾಮವನ್ನು ಮಾಡಲೇಬೇಕು. ನಮ್ಮ ಪೂರ್ವಜರು ಕೊಟ್ಟ ಯೋಗಾಸನಗಳು ನಮ್ಮ ಪಾಲಿಗೆ ವರವೇ. ದಿನದಲ್ಲಿ ಕನಿಷ್ಠ ಅರ್ಧ ಘಂಟೆ ಯಾವ ನೆಪವನ್ನೂ ಹೇಳದೇ ವ್ಯಾಯಾಮ ಮಾಡೋಣ.
5.ವಾರಕ್ಕೊಂದು ದಿನ ಉಪವಾಸ ಮಾಡೋಣ: ಉಪವಾಸ ಎಷ್ಟು ಮಹತ್ವದ್ದು ಎಂಬುದಕ್ಕೆ ಅದರ ಬಗ್ಗೆ ತಿಳಿಸಿದ ವಿಜ್ಞಾನಿಗೆ ನೊಬೆಲ್ ಪ್ರಶಸ್ತಿ ಬಂದಿರುವುದೇ ಸಾಕ್ಷಿ. ಮುಪ್ಪನ್ನು ದೂರ ಮಾಡಿ, ರೋಗನಿರೋಧಕ ಶಕ್ತಿ ಹೆಚ್ಚಿಸಿ, ಕ್ಯಾನ್ಸರ್ನಂತಹ ಕಾಯಿಲೆಗಳನ್ನು ತಡೆಯುವ ಮತ್ತು ಗುಣಪಡಿಸುವ ಶಕ್ತಿ ಇರುವ ಉಪವಾಸವನ್ನು ವಾರಕ್ಕೊಂದು ದಿನವಾದರೂ ಆಚರಿಸೋಣ.
6.ಮನಸ್ಸನ್ನು ಸದಾ ಶಾಂತವಾಗಿಟ್ಟುಕೊಳ್ಳೋಣ: ಇತ್ತೀಚೆಗೆ ಎಷ್ಟೋ ಕಾಯಿಲೆಗಳಿಗೆ ಮನಸ್ಸೇ ಕಾರಣವಾಗಿದೆ. ಸದಾ ಉದ್ವೇಗದಲ್ಲಿ ಇರುವ ಮನಸ್ಸನ್ನು ಶಾಂತಗೊಳಿಸಿ ನಿನ್ನೆ ಮತ್ತು ನಾಳೆಯ ಯೋಚನೆ ಇಲ್ಲದೇ ಈ ಕ್ಷಣದಲ್ಲಿ ಮಾತ್ರ ಮನಸ್ಸು ಇರುವಂತೆ ಸಾಧನೆ ಮಾಡೋಣ. ದಿನಕ್ಕೆ ಎರಡು ಬಾರಿ ಪ್ರಾರ್ಥನೆ, ಕನಿಷ್ಠ ಅರ್ಧಗಂಟೆ ಆಸನ, ಪ್ರಾಣಾಯಾಮಗಳು ಮತ್ತು ಕಡೇ ಪಕ್ಷ ಹತ್ತು ನಿಮಿಷ ಧ್ಯಾನ ಮಾಡುವ ಮೂಲಕ ಮನಸ್ಸನ್ನು ಶಾಂತವಾಗಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳೋಣ.
(ಪ್ರತಿಕ್ರಿಯಿಸಿ: vvsudina@gmail.com)