ನ್ಯೂಸ್

ಒಳ್ಳೆಯ ಸಂಕಲ್ಪವಿರಲಿ

Webdesk - Manjunatha B
ಕೃಷ್ಣರಾಜ ಕುತ್ಪಾಡಿ
ಒಳ್ಳೆಯ ಕೆಲಸಕ್ಕೆ ನೂರಾರು ವಿಘ್ನಗಳು. ಆದರೆ, ‘ಹಿಡಿದ ಕೆಲಸವನ್ನು ದೊಡ್ಡವರು ಎನಿಸಿಕೊಂಡವರು ಮಧ್ಯದಲ್ಲಿ ಕೈ ಬಿಡುವುದಿಲ್ಲ’. ಹನುಮಂತನಂತೆ ಎಂದು ಉದಾಹರಿಸಬಹುದು. ಸಮುದ್ರಲಂಘನಕ್ಕೆ ತೊಡಗಿದಾಗ ಮೈನಾಕನ ಆತ್ಮೀಯ ಆತಿಥ್ಯವೂ ರಾಮನ ಕಾರ್ಯಕ್ಕೆ ತೊಡಕೆನಿಸಿತು. ಹನುಮ ಆತನನ್ನು ತಬ್ಬಿಕೊಂಡು ಮುಂದೆ ಸಾಗಿದ. ಸುರಸಾ, ಸಿಂಹಿಕಾ, ಲಂಕಿಣಿ, ರಕ್ಕಸರು, ಬಾಲಕ್ಕೆ ಬೆಂಕಿ ಹೀಗೆ ಹಲವು ಅಡೆ-ತಡೆ ಒದಗಿದಾಗಲೂ ಹಿಂಜರಿಯಲಿಲ್ಲ. ರಾಮನ ಕಾರ್ಯದ ಗುರಿ ಎಲ್ಲ ಥರದ ತೊಂದರೆಗಳನ್ನು ನಿವಾರಿಸಿತು.

ರಾಮನ ಕಥೆ ಹೇಳುವ ಸಂಕಲ್ಪ ಮಾಡಿದ ವಾಲ್ಮೀಕಿಗಳಿಗೆ ಒದಗಿದ ಸಹಕಾರ ಸಮೂಹಗಳೇ ಸಾಕ್ಷಿ ಒಳಿತಿಗೆ ಎಂದೂ ಕೆಡುಕಾಗದು ಎಂದು.

‘ನಾಸತೋ ವಿದ್ಯತೇ ಭಾವಃ ನಾಭಾವೋ ವಿದ್ಯತೇ ಸತಃ’
‘ಕೆಡುಕಿಗೆ ಉಳಿಗಾಲವಿಲ್ಲ. ಒಳಿತಿಗೆ ಅಳಿಗಾಲವಿಲ್ಲ.’
ಶಿಷ್ಯ ಸಿದ್ಧನಾಗಲು ಗುರು ಹುಟ್ಟುತ್ತಾನೆ.
ರಾಮನ ಬಗ್ಗೆ ತಿಳಿಯುವ ಕುತೂಹಲ ಮೂಡಿದೊಡನೆ ನಾರದರು ಎದುರಾದರು.
‘ಮಚ್ಛಂದಾದೇವ ತೇ ಬ್ರಹ್ಮನ್ ಪ್ರವೃತ್ತೇಯಂ ಸರಸ್ವತೀ|
ರಾಮಸ್ಯ ಚರಿತಂ ಕೃತ್ಸ ್ನ ಕುರು ತ್ವಂ ಋಷಿಸತ್ತಮ||
‘ಬ್ರಹ್ಮಜ್ಞಾನಿಯೇ! ನನ್ನ ಬಯಕೆಯಂತೆಯೇ ಸರಸ್ವತಿ ನಿನ್ನಲ್ಲಿ ನಲಿದಿದ್ದಾಳೆ. ಜ್ಞಾನಿಗಳ ಅರಸನೇ ನೀನು ಸಮಗ್ರ ರಾಮನ ಚರಿತೆಯನ್ನು ಸಿದ್ಧಪಡಿಸು.’

ಕೇಳಿದ ಕಥೆಯನ್ನು ಬರೆಯಬಲ್ಲೆ. ಆದರೆ ಕಾಣದ ಸಂಗತಿಯನ್ನು ಹೆಣೆಯುವುದು ಹೇಗೆ ಎಂಬ ಒಳಗಿದ್ದ ವಾಲ್ಮೀಕಿಗಳ ಆತಂಕವನ್ನು ಪುರುಷಸರಸ್ವತಿ ತಾನೇ ಪರಿಹರಿಸಿದ.

ರಾಮಸ್ಯ ಸಹ ಸೌಮಿತ್ರೇ: ರಾಕ್ಷಸಾನಾಂ ಚ ಸರ್ವಶಃ|
ವೈದೇಹ್ಯಾಶ್ಒ್ಯೆವ ಯದ್ವೃ್ತಂಪ್ಕಾಶಂ ಯದಿ ವಾ ರಹಃ||
ತಚ್ಚಾಪ್ಯವಿದಿತಂ ಸರ್ವಂ ವಿದಿತಂ ತೇ ಭವಿಷ್ಯತಿ||

‘ಕಣ್ಣಿಗೆ ಕಾಣುವ, ಕಾಣದ ಎಲ್ಲ ರಹಸ್ಯಗಳು, ರಾಮ ಸೀತೆ ಲಕ್ಷ್ಮಣರ ಪರಿವಾರ ಮತ್ತು ರಾಕ್ಷಸರ ಸುತ್ತ ನಡೆದ ಎಲ್ಲ ಸಂಗತಿಗಳು ನಿನ್ನ ಕಣ್ಣಮುಂದೆ ತೆರೆದುಕೊಳ್ಳಲಿ. ತಿಳಿಯದ ಸಂಗತಿಗಳು ಕೂಡ ನಿನಗೆ ತಿಳಿದು ಬರಲಿ.’

ಇಂಥ ಹರಕೆಯಿಂದ ರಾಮಾಯಣ ಓದುವಾಗ ಈಗಲೂ ನಮ್ಮ ನಡುವೆಯೇ ರಾಮಕಥೆ ನಡೆಯುತ್ತಿರುವಂತೆ ಭಾಸವಾಗುತ್ತದೆ. ಇದು ಒಳಿತಿನ ಸಂಕಲ್ಪಕ್ಕೆ ದಕ್ಕಿದ ಫಲ.

(ಲೇಖಕರು ಸಂಸ್ಕೃತ ಉಪನ್ಯಾಸಕರು)