ಮಹಿಳಾ ದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ನ್ಯಾಯಾಧೀಶ ಕೆ.ಎಂ.ಶೈನಿ ಉದ್ಘಾಟಿಸಿದರು. ಡಾ. ಕೆ.ಸಂಧ್ಯಾ ಕಾವೇರಿ, ಡಾ. ಹಸೀನಾ, ಶಶಿರೇಖಾ, ತಾರಾ, ರೇಖ್ಯಾನಾಯ್ಕ, ಎಚ್.ಉಮೇಶ್, ಕೆ.ಟಿ.ಕೆ.ಉಲ್ಲಾಸ್ ಇದ್ದರು. 
ನ್ಯೂಸ್

ಸಾಧನೆಯ ಉತ್ತುಂಗಕ್ಕೇರಲು ಸ್ವಸಾಮರ್ಥ್ಯದ ಮೇಲೆ ನಂಬಿಕೆಯಿರಲಿ

ಶಿವಮೊಗ್ಗ: ನಮ್ಮೊಳಗಿನ ಆಂತರಿಕ ಶಕ್ತಿ ನಮ್ಮನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಆದ್ದರಿಂದ ಹೆಣ್ಣು ಮಕ್ಕಳು ಸ್ವಸಾಮರ್ಥ್ಯ ಅರಿತು ಮುಂದೆ ಬರಬೇಕು ಎಂದು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಕೆ.ಎಂ.ಶೈನಿ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ನೆಹರು ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಹೆಣ್ಣುಮಕ್ಕಳು ಕಟ್ಟುಪಾಡುಗಳನ್ನು ಮೀರಿ ಮುಂದೆ ಬಂದಿದ್ದಾಳೆ. ಪುರುಷರು ನಿರ್ವಹಿಸುವಂತಹ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಇಂದು ಮಹಿಳೆಯರಿದ್ದಾರೆ. ಜತೆಗೆ ಅವಳೆಡೆಗಿನ ಸಮಾಜದ ನಿರೀಕ್ಷೆಗಳು, ಪಿತೃಪ್ರಧಾನ ಸಮಾಜದ ರೂಢಿಗಳು ಹಾಗೂ ಸಾಕಷ್ಟು ಇತರೆ ಸವಾಲುಗಳನ್ನು ಎದುರಿಸುತ್ತ ಬಂದಿದ್ದಾಳೆ. ಹೆಣ್ಣು ಎಷ್ಟೇ ಯಶಸ್ಸು ಸಾಧಿಸಿದ್ದರೂ ಕುಟುಂಬ, ಕಾಳಜಿ ವಿಷಯ ಬಂದಾಗ ತನ್ನ ಆಸೆಗಳನ್ನು ತ್ಯಾಗ ಮಾಡಿ ರಾಜೀ ಮಾಡಿಕೊಳ್ಳಲೇಬೇಕಾಗುತ್ತದೆ ಎಂದರು.

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಚಾರ್ಯೆ ಡಾ. ಕೆ.ಸಂಧ್ಯಾ ಕಾವೇರಿ ಮಾತನಾಡಿ, ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಘೋಷವಾಕ್ಯ ಕ್ರಿಯೆಗಳ ವೇಗವನ್ನು ವರ್ಧಿಸಿ ಎಂಬುದಾಗಿದೆ. ನಾವು ಸಮಾನತೆಯ ಕ್ರಿಯೆಗಳ ವೇಗವನ್ನು ವರ್ಧಿಸಬೇಕು. ಇಡೀ ಸಮಾಜ ಸಕ್ರಿಯವಾಗಿ ಪಾಲ್ಗೊಂಡು ಸಮಾನತೆ ಸಾಧಿಸಬೇಕು. ಸಾಧನೆಯೊಂದೇ ಸಾಲದು, ಇದರ ವೇಗವನ್ನು ವರ್ಧಿಸಬೇಕು. ಉತ್ತಮ ಸಾಧನೆಯ ಭಾಗವೇ ಕ್ರೀಡೆ. ಇದೊಂದು ಸಮಾಜದ ಅಭಿವೃದ್ಧಿಯ ಅತ್ಯುತ್ತಮ ಮಾದರಿ. ಇದನ್ನು ಸಮಾನತೆಯ ಸೂಚ್ಯಂಕವನ್ನಾಗಿ ತೆಗೆದುಕೊಳ್ಳಬಹುದು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಜಿಪಂ ಸಹಾಯಕ ಕಾರ್ಯದರ್ಶಿ ತಾರಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ನೆಹರು ಯುವ ಕೇಂದ್ರದ ಯುವ ಅಧಿಕಾರಿ ಕೆ.ಟಿ.ಕೆ.ಉಲ್ಲಾಸ್ ಇತರರಿದ್ದರು.

ಮಹನೀಯರ ಸಾಧನೆ

ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಕ್ಲೇಷಮುಕ್ತರಾಗಿರುತ್ತಾರೆ. ಆದ್ದರಿಂದ ಹೆಣ್ಣುಮಕ್ಕಳು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕುವೆಂಪು ವಿವಿ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದ ಉಪನ್ಯಾಸಕಿ ಡಾ. ಹಸೀನಾ ಹೇಳಿದರು. ಪ್ರಸ್ತುತ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಬಹಳ ದೊಡ್ಡ ದೊಡ್ಡ ಸಾಧನೆ ಮಾಡಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಮತ್ತಿತರ ಮಹನೀಯರ ಹೋರಾಟದ ಫಲವಾಗಿ ನಾವಿಂದು ಇಂತಹ ವೇದಿಕೆಯಲ್ಲಿದ್ದೇವೆ ಎಂದರು.