ನ್ಯೂಸ್

ಹಾಥರಸ್ ಕಾಲ್ತುಳಿತ ಪ್ರಕರಣ;​ ಇದು ಸಮಾಜ ವಿರೋಧಿಗಳ ಕೃತ್ಯ, ಇದರ ಹಿಂದೆ ದೊಡ್ಡ ಷಡ್ಯಂತ್ಯವಿದೆ ಎಂದ ಭೋಲೆ ಬಾಬಾ

ಲಖನೌ: ಹಾಥರಸ್​ನಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಉಂಟಾದ ಭೀಕರ ಕಾಲ್ತುಳಿತದಲ್ಲಿ 120ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯ ನಂತರ ಸ್ವಘೋಷಿತ ದೇವಮಾನವ ಭೋಲೆ ಬಾಬಾ ವಿವಾದದ ಕೇಂದ್ರ ಬಿಂದುವಾಗಿದ್ದು, ದುರಂತ ಸಂಭವಿಸಿದ ಬಳಿಕ ಅವರು ತಲೆಮಾರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ನಡುವೆಯೇ ಘಟನೆಗೆ ಸಂಬಂಧಿಸಿದಂತೆ ಭೋಲೆ ಬಾಬಾ ಪ್ರತಿಕ್ರಿಯಿಸಿದ್ದು, ಇದು ಪಿತೂರಿ ಎಂದು ಆರೋಪಿಸಿದ್ದಾರೆ.

ತಮ್ಮ ವಕೀಲರ ಮೂಲಕ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಭೋಲೆ ಬಾಬಾ ನಾವು ಮೃತರ ಕುಟುಂಬಳಿಗೆ ಸಂತಾಪ ಸೂಚಿಸುತ್ತೇವೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಘಟನೆಯಲ್ಲಿ ಸಮಾಜ ವಿರೋಧಿಗಳ ಕೈವಾಡವಿದ್ದು, ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಇದರ ಬಗ್ಗೆ ತನಿಖೆಯಾಗಬೇಕಿದ್ದು, ಸರ್ಕಾರ ಈ ಬಗ್ಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಘಟನೆಯ ನಂತರ ಭೋಲೆ ಬಾಬಾ ಕಾಣೆಯಾಗಿದದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಗಾಯಾಳುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಘಟನೆಗೆ ಕಾರಣರಾದವರನ್ನು ನಮ್ಮ ಸರ್ಕಾರ ಸುಮ್ಮನೇ ಬಿಡುವುದಿಲ್ಲ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.