ನ್ಯೂಸ್

ಸಂಪಾದಕೀಯ: ಎಚ್ಚರಿಕೆ ಗಂಟೆ; ದ್ವೇಷಭಾಷಣ ಪ್ರಕರಣ, ಆಜಂ ಖಾನ್​ಗೆ ಶಿಕ್ಷೆ

Bengaluru - General - Rama Kishan K V

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ದ್ವೇಷಭಾಷಣ ಮಾಡಿದ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವ, ಸಮಾಜವಾದಿ ಪಕ್ಷದ ಪ್ರಭಾವಿ ನಾಯಕ ಆಜಂ ಖಾನ್ ಅವರಿಗೆ ಲಖನೌ ನ್ಯಾಯಾಲಯ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಈ ಶಿಕ್ಷೆ ಪ್ರಶ್ನಿಸಿ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಹೋಗಲು ಅವರಿಗೆ ಏಳು ದಿನಗಳ ಅವಕಾಶವಿದೆ. ಅವರು ತಕ್ಷಣ ಅಪೀಲು ಹೋಗದಿದ್ದರೆ ಅವರ ಶಾಸಕ ಸ್ಥಾನ ರದ್ದಾಗುತ್ತದೆ. ಏಕೆಂದರೆ, ಜನಪ್ರತಿನಿಧಿಯೊಬ್ಬರು ಯಾವುದಾದರೂ ಪ್ರಕರಣದಲ್ಲಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆಗೆ ಒಳಗಾದಲ್ಲಿ ಅವರ ಸ್ಥಾನ ರದ್ದಾಗುತ್ತದೆಯೆಂಬ ನಿಯಮವನ್ನು ತಿದ್ದುಪಡಿ ಮೂಲಕ ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿ ಸೇರಿಸಲಾಗಿದೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿನ ಪ್ರಚಾರ ಭಾಷಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಮೋದಿಯವರು ದೇಶದಲ್ಲಿ ಮುಸ್ಲಿಮರಿಗೆ ಬದುಕಲು ಕಷ್ಟಕರವಾದ ಪರಿಸ್ಥಿತಿಯನ್ನು ನಿರ್ವಿುಸುತ್ತಿದ್ದಾರೆ ಎಂದು ಖಾನ್ ಆರೋಪಿಸಿದ್ದರು. ಉಳಿದಂತೆ ಆಜಂ ಖಾನ್ ಮೇಲೆ 80ಕ್ಕೂ ಅಧಿಕ ಕೇಸುಗಳನ್ನು ಉಪ್ರ ಸರ್ಕಾರ ಹಾಕಿದ್ದು, ಭೂ ಕಬಳಿಕೆ ಪ್ರಕರಣದಲ್ಲಿ ಎರಡು ವರ್ಷ ಜೈಲಲ್ಲಿದ್ದ ಅವರು ಈಚೆಗಷ್ಟೆ ಸುಪ್ರೀಂ ಕೋರ್ಟಿನಿಂದ ಜಾಮೀನು ಪಡೆದಿದ್ದಾರೆ. ‘ನನ್ನ ಮೇಲೆ ರಾಜಕೀಯ ದುರುದ್ದೇಶದಿಂದ ಒಂದಾದ ಮೇಲೊಂದು ಕೇಸ್ ಹಾಕಲಾಗುತ್ತಿದೆ’ ಎಂದು ಖಾನ್ ಆರೋಪಿಸಿದ್ದಾರೆ.

ಇದೇನೆ ಇದ್ದರೂ, ಒಟ್ಟಾರೆಯಾಗಿ ನೋಡಿದಾಗ, ಜನಪ್ರತಿನಿಧಿಗಳಿಗೆ ಈ ಪ್ರಕರಣದ ತೀರ್ಪು ಎಚ್ಚರಿಕೆಯ ಗಂಟೆ ಎಂದು ಹೇಳಬಹುದು. ಏಕೆಂದರೆ, ಈಚಿನ ವರ್ಷಗಳಲ್ಲಿ ಆ ಪಕ್ಷ ಈ ಪಕ್ಷ ಎಂಬ ಭೇದವಿಲ್ಲದೆ, ನಾಲಗೆಯನ್ನು ಬೇಕಾಬಿಟ್ಟಿ ಹರಿಬಿಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ತಮ್ಮ ಮಾತಿನ ಪರಿಣಾಮ ಏನಾದೀತು ಎಂಬ ಗೊಡವೆಗೆ ಹೋಗದೆ ಆಕ್ರಮಣಕಾರಿ ಶೈಲಿಯಲ್ಲಿ ಭಾಷಣ ಮಾಡುವವರು ಹೆಚ್ಚಿದ್ದಾರೆ. ಹೀಗೆ ಮಾಡುವ ಮೂಲಕ ಪಕ್ಷದ ನಾಯಕರನ್ನು ಸೆಳೆಯುವುದು ಹಾಗೂ ಜನರ ದೃಷ್ಟಿಯಲ್ಲಿ ‘ನಾಯಕ’ ಎನಿಸಿಕೊಳ್ಳುವ ಉಮೇದು ಇವರದ್ದಾಗಿರಬಹುದು. ಆದರೆ ಸಾರಾಸಾರ ವಿವೇಚನೆಯಿರದ ಮಾತಿನಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು. ಅದರಲ್ಲೂ ಕೋಮು ವಿಷಯ ಮಾತಾಡುವಾಗಂತೂ ಮತ್ತಷ್ಟು ಎಚ್ಚರ, ಸಂವೇದನಾಶೀಲತೆ ಅಗತ್ಯ.

ವಿಶೇಷವಾಗಿ ಚುನಾವಣೆಗಳು ಸಮೀಪಿಸಿದಾಗ ಇಂಥ ಮಾತಿನ ಭರಾಟೆಗಳು ಜೋರಾಗುತ್ತವೆ. ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ, ವಾದವನ್ನು ದೊಡ್ಡದನಿಯಲ್ಲಿ ಪ್ರತಿಪಾದಿಸಲು ಒಂದುಹಂತದವರೆಗೆ ಜೋರು ಭಾಷಣ ಅಗತ್ಯ ಎಂಬುದನ್ನು ಒಪ್ಪಬಹುದು. ಆದರೆ ಮಾತಿನ ಲಕ್ಷ್ಮಣರೇಖೆಯನ್ನು ಸಹ ಅರಿತಿರಬೇಕಾಗುತ್ತದೆ. ಸಂವಿಧಾನವು ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ ಎಂಬುದು ನಿಜ. ಆದರೆ ಯಾವುದೇ ಹಕ್ಕಿನ ಜತೆಗೆ ಕರ್ತವ್ಯ ಕೂಡ ಅಂತರ್ಗತವಾಗಿರುತ್ತದೆ. ದ್ವೇಷಭಾಷಣ ವಿಷಯದಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಈಚೆಗೆ ಸುಪ್ರೀಂ ಕೋರ್ಟ್ ಸಹ ರಾಜ್ಯಗಳಿಗೆ ಸೂಚಿಸಿದೆ. ಸಮಾಜದಲ್ಲಿ ಶಾಂತಿನೆಮ್ಮದಿ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಪಾತ್ರ ಪ್ರಮುಖವಾದುದು. ಈ ಕರ್ತವ್ಯದಲ್ಲಿ ವಿಫಲರಾದರೆ ಅದರ ಪರಿಣಾಮ ಬೇರೆ ಬೇರೆ ರೀತಿಯಲ್ಲಿ ಆಗುತ್ತದೆ. ರಾಜಕೀಯ ಪಕ್ಷಗಳು ತಂತಮ್ಮ ನಾಯಕರು ಮತ್ತು ಕಾರ್ಯಕರ್ತರಿಗೆ ಈ ದಿಸೆಯಲ್ಲಿ ಜಾಗೃತಿ ಮೂಡಿಸಿ ಒಂದು ನೀತಿಸಂಹಿತೆಯನ್ನು ಮಾಡಿಕೊಡುವುದು ಒಳಿತು.