ಹಕ್ಕುಪತ್ರಕ್ಕೆ ಆಗ್ರಹಿಸಿ ಹಸೂಡಿ ಫಾರ್ಮ್ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು. ಸಂಜಯಕುಮಾರ್, ಕೆ.ರಾಣಿ, ಪಿ.ರವಿ, ಮೀನಾಕ್ಷಿ, ಪಿ.ಮಂಜುನಾಥ್, ಭಾಗ್ಯ, ವೇಲಾಂಗಿಣಿ ಮುಂತಾದವರಿದ್ದರು.  
ನ್ಯೂಸ್

ಹಕ್ಕುಪತ್ರಕ್ಕಾಗಿ ಹಸೂಡಿ ಫಾರ್ಮ್ ರೈತರ ಒತ್ತಾಯ

ಶಿವಮೊಗ್ಗ: ಜಿಪಿಎಸ್ ಸರ್ವೇ ಮುಗಿದಿರುವ ಎಲ್ಲರಿಗೂ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಹಸೂಡಿ ಫಾರ್ಮ್ ನಾಗರಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

94-ಡಿ ಅಡಿಯಲ್ಲಿ ಸರ್ವೇ ಸಂಪೂರ್ಣ ಮುಗಿದಿದೆ. 186 ಅರ್ಜಿಗಳಿಗೆ ಸಂಬಂಧಿಸಿ ಸರ್ವೇ ನಡೆಸಿ ಅದೆಲ್ಲವೂ ಸರಿಯಿದೆ ಎಂದು ತಹಸೀಲ್ದಾರರು ತಿಳಿಸಿದ್ದರು. ಆದರೆ ಈ ಅರ್ಜಿಗಳ ಪೈಕಿ 42ಕ್ಕೆ ಮಾತ್ರ ತಹಸೀಲ್ದಾರರು ಭೂ ಹಕ್ಕುಪತ್ರ ನೀಡಲು ಮುಂದಾಗಿರುವುದಕ್ಕೆ ನಮ್ಮ ಆಕ್ಷೇಪಣೆಯಿದೆ. ನಿದಿಗೆ-1 ಹೋಬಳಿಯ ಹಸೂಡಿ ಫಾರ್ಮ್‌ನಲ್ಲಿ 94-ಡಿ ಮೂಲಕ 220 ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂದು ಮನವರಿಕೆ ಮಾಡಿಕೊಟ್ಟರು.

ಹಕ್ಕುಪತ್ರ ನೀಡಿ ಎಂದು ಗ್ರಾಮಸ್ಥರು ಹಲವು ಬಾರಿ ಒತ್ತಾಯಿಸಿದ್ದರು. ಸರ್ಕಾರಿ ಕಾರ್ಯಕ್ರಮವೊಂದರಲ್ಲಿ 186 ಫಲಾನುಭವಿಗಳಿಗೆ ಹಕ್ಕುಪತ್ರ ಸಿದ್ಧವಾಗಿದೆ ಎಂದು ತಹಸೀಲ್ದಾರ್ ಭರವಸೆ ನೀಡಿದ್ದರು. ಈಗ ಏಕಾಏಕಿ 42 ಅರ್ಜಿಗಳಿಗೆ ಮಾತ್ರ ಹಕ್ಕುಪತ್ರ ನೀಡಲು ಗ್ರಾಮಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕರು ಮುಂದಾಗಿದ್ದಾರೆ ಎಂದು ದೂರಿದರು.

ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಕಣ್ಣೊರೆಸುವ ತಂತ್ರಗಾರಿಕೆಯಿಂದ 42 ಹಕ್ಕುಪತ್ರ ನೀಡಿ ಬಳಿಕ 144 ಜನರಿಗೆ ಅನ್ಯಾಯ ಮಾಡುವುದನ್ನು ನಾವು ಸಹಿಸುವುದಿಲ್ಲ. 186 ಜನರಿಗೂ ಹಕ್ಕುಪತ್ರ ನೀಡಬೇಕು. ಇಲ್ಲವಾದರೆ ಹಸೂಡಿ ಗ್ರಾಮಸ್ಥರು ಡಿಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

ಹಸೂಡಿ ಗ್ರಾಪಂ ಸದಸ್ಯ ಸಂಜಯಕುಮಾರ್, ಪ್ರಮುಖರಾದ ಪಿ.ಮಂಜುನಾಥ್, ಕೆ.ರಾಣಿ, ಭಾಗ್ಯಾ, ಮುರಳಿ, ಪಿ.ರವಿ, ವೇಲಾಂಗಿಣಿ, ಚಿನ್ನಮ್ಮ, ಕೃಷ್ಣ, ಮೀನಾಕ್ಷಿ ಇತರರಿದ್ದರು.