ನ್ಯೂಸ್

ಹಾಸನದಲ್ಲಿ ಹೆಚ್ಚಾದ ಪುಂಡರ ಹಾವಳಿ: ಫೋನ್​ ನಂಬರ್​​ಗೆ ಒತ್ತಾಯ, ಹೆದರಿ ಅವಿತುಕೊಳ್ಳುತ್ತಿರುವ ವಿದ್ಯಾರ್ಥಿನಿಯರು

ಹಾಸನ: ನಗರದಲ್ಲಿ ಬೈಕ್ ವ್ಹೀಲಿಂಗ್​ ಮಾಡುವ ಪುಂಡರ ಹಾವಳಿ ಹೆಚ್ಚಾಗಿದ್ದು, ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿನಿಯರೂ ಕೂಡ ಇವರಿಂದ ನಿತ್ಯವು ಕಿರುಕುಳ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಾಲಕಿಯರನ್ನು ಕಿಚಾಯಿಸಿ ಪೋನ್ ನಂಬರ್ ಕೊಡುವಂತೆ ಯುವಕರ ಗುಂಪು ಪೀಡಿಸಿದ ಘಟನೆ ಹಾಸನ‌ದ ಬಸಟ್ಟಿ ಕೊಪ್ಪಲ್​ನಲ್ಲಿ ನಡೆದಿದೆ. ಯುವಕರ ಆಟಾಟೋಪಕ್ಕೆ ಹೆದರಿದ ಬಾಲಕಿಯರು ಅವರಿಂದ ತಪ್ಪಿಸಿಕೊಳ್ಳಲು ಮರೆಯಾಗಿ ನಿಲ್ಲುತ್ತಿದ್ದು, ಪುಂಡರ ಹಾವಳಿಗೆ ಬ್ರೇಕ್​ ಹಾಕುವ ಅವಶ್ಯಕತೆ ಇದೆ.

ಯುವಕರ ಆಟಾಟೋಪವನ್ನು ಮೊಬೈಲ್ ಮೂಲಕ ಸೆರೆ ಹಿಡಿಯಲು ಸಾರ್ವಜನಿಕರು ಯತ್ನಿಸಿದಾಗ ಅದನ್ನು ಗಮನಿಸಿದ ಪುಂಡರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಹಾಸನದ ಡಿಸಿ ಕಚೇರಿ ಮುಂದೆಯು ನಿತ್ಯವು ಪುಂಡರು ವ್ಹೀಲಿಂಗ್ ಮಾಡುತ್ತಿದ್ದು, ಇವರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. (ಏಜೆನ್ಸೀಸ್​)