ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿವೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನಲ್ಲಿ ಕೂಡ ಲೋಕಸಭೆ ಚುನಾವಣಾ ಜ್ವರ ಕಾಣಿಸಿಕೊಂಡಿದೆ.
ಹಾಸನ ಮತ್ತು ಮಂಡ್ಯ ಕ್ಷೇತ್ರಗಳ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಮೈತ್ರಿಯಿಂದ ಲಾಭ ಪಡೆಯಬಹುದಾದ ಕ್ಷೇತ್ರಗಳ ಬಗ್ಗೆ ಜೆಡಿಎಸ್ ವರಿಷ್ಠರು ಲೆಕ್ಕಾಚಾರದಲ್ಲಿ ಮಗ್ನರಾಗಿದ್ದಾರೆ.
ಹಾಸನ ಕ್ಷೇತ್ರ ಜೆಡಿಎಸ್ ಹಿಡಿತದಲ್ಲಿದೆ. ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಮತ್ತೆ ಕಣಕ್ಕಿಳಿಸುವ ಬಗ್ಗೆ ಜೆಡಿಎಸ್ ವರಿಷ್ಠರಲ್ಲೇ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿವೆ. ಜೆಡಿಎಸ್ ಗೆಲ್ಲಬಹುದಾದ ಕ್ಷೇತ್ರಗಳ ಕುರಿತು ಸರ್ವೇ ಮಾಡಿಸಲಾಗಿದೆ. ಈ ಸರ್ವೇ ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಪೂರಕವಾಗಿಲ್ಲ. ಹಾಗಾಗಿ ಮತ್ತೊಂದು ಸರ್ವೇ ಮಾಡಿಸಿ ನೋಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ದೇವೆಗೌಡರ ಕುಟುಂಬಕ್ಕೆ ಟಕ್ಕರ್ ಕೊಡಲು ಡಿ.ಕೆ.ಶಿವಕುಮಾರ್ ಬ್ರದರ್ಸ್ ರಣತಂತ್ರ ರೂಪಿಸಿದ್ದಾರೆ. ಜೆಡಿಎಸ್, ಬಿಜೆಪಿ ಹಾಲಿ ಮತ್ತು ಮಾಜಿ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಾಸನ ಕ್ಷೇತ್ರದ ಸ್ಪರ್ಧೆ ಜೆಡಿಎಸ್‌ಗೆ ಬಿಸಿತುಪ್ಪವಾಗಿದೆ.
ಸರ್ವೇ ವರದಿ ಆಧರಿಸಿ ದೇವೇಗೌಡರು ಒಪ್ಪುವುದಾದರೆ ಅವರನ್ನೇ ಕಣಕ್ಕಿಳಿಸುವ ಇಂಗಿತವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. ದೇವೇಗೌಡರ ಕೊನೆಯ ಚುನಾವಣೆ ಎಂದು ಬಿಂಬಿಸಿ ಗೆಲುವು ಪಡೆಯಬಹುದು ಎಂಬ ಲೆಕ್ಕಾಚಾರದಲ್ಲಿ ಹಾಸನ ಲೋಕಸಭೆ ಕ್ಷೇತ್ರಕ್ಕೆ ದೇವೇಗೌಡರ ಹೆಸರನ್ನು ಮತ್ತೆ ಎಳೆತರಲಾಗಿದೆ.
ಈ ನಡುವೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಕಾರಣ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ಜನರ ಅಭಿಪ್ರಾಯ ಏನಿದೆ? ಮೈತ್ರಿ ಪ್ರಜ್ವಲ್ ಕೈ ಹಿಡಿಬಲ್ಲದೆ ಎಂಬ ಕುರಿತು ಸರ್ವೇ ಮಾಡಿಸಲು ಜೆಡಿಎಸ್ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.