ನ್ಯೂಸ್

ಮನೆಯ ಅಂದ ಹೆಚ್ಚಿಸುವ ಹಸೆ ಚಿತ್ತಾರ; ಮರುಕುಳಿಸಿದ ಪ್ರಾಚೀನ ಅಲಂಕಾರ

ಪ್ರಶಾಂತ ರಿಪ್ಪನ್​ಪೇಟೆ, ಬೆಂಗಳೂರು: ಇತ್ತೀಚೆಗೆ ತಿನ್ನುವ ಆಹಾರ, ಧರಿಸುವ ಬಟ್ಟೆ, ಕಟ್ಟುವ ಮನೆ, ವಿನ್ಯಾಸಗೊಳಿಸುವ ಅಲಂಕಾರ ಪ್ರತಿ ವಿಷಯದಲ್ಲೂ ಮನುಷ್ಯ ಪ್ರಾಚೀನ ಶೈಲಿಯತ್ತ ಆಸಕ್ತನಾಗುತ್ತಿದ್ದಾನೆ. ಇದ್ದಕ್ಕೆ ಹೊಸ ಸೇರ್ಪಡೆ ನೂತನ ಮನೆಗಳಲ್ಲಿ ಹೆಚ್ಚುತ್ತಿರುವ ಹಸೆ ಚಿತ್ತಾರ. ಹಸೆ ಪ್ರಾಚೀನವಾದ ಒಂದು ಜನಪದ ಕಲೆ. ಹಬ್ಬ, ಹರಿದಿನ, ಮದುವೆ ಇತ್ಯಾದಿ ಶುಭ ಕಾರ್ಯಗಳಿಗೆ ಮನೆಯನ್ನು ಶೃಂಗರಿಸಲು ಮನೆಯ ಹಿರಿಯರು ಸುಣ್ಣದ ಗೋಡೆಯ ಮೇಲೆ ಕೆಮ್ಮಣ್ಣಿನಿಂದ ತಯಾರಿಸಿದ ಬಣ್ಣದಿಂದ ಹಸೆ ಚಿತ್ರವನ್ನು ಬರೆಯುತ್ತಿದ್ದರು. ಈ ಮೂಲಕ ಶುಭಸಮಾರಂಭ ಕಳೆಗಟ್ಟುತ್ತಿತ್ತು. ಕಾಲ ಬದಲಾದಂತೆ ಹಸೆಕಲೆ ಕಣ್ಮರೆಯಾಗುತ್ತಾ ಬಂದಿತ್ತು. ಕೇವಲ ಸಾಂಕೇತಿಕವಾಗಿ ಮದುವೆ-ಮುಂಜಿಗಳಲ್ಲಿ ಹಸೆ ಚಿತ್ತಾರ ಬಳಸುತ್ತಿದ್ದರು. ನೂತನ ಮನೆಗಳನ್ನು ನಿರ್ಮಿಸುವವರು ಮನೆಯ ಒಳಾಂಗಣ ವಿನ್ಯಾಸ ಮತ್ತು ಅಲಂಕಾರಕ್ಕೆ ಹೆಚ್ಚು ಗಮನ ನೀಡುತ್ತಾರೆ. ಹಾಗೆ ಮನೆಯ ಅಲಂಕಾರಕ್ಕಾಗಿರುವ ಹಲವು ಆಧುನಿಕ ವಿಧಾನಗಳ ನಡುವೆ ಪ್ರಾಚೀನ ಶೈಲಿಯ ಹಸೆ ಚಿತ್ರಕಲೆಯನ್ನು ಬಳಸಿಕೊಳ್ಳುವ ಟ್ರೆಂಡ್ ಆರಂಭವಾಗಿದೆ.

ಮಲೆನಾಡಿನ ಮೂಲ ಕಲೆಗೆ ಬೆಲೆ

ಹಸೆ ಚಿತ್ತಾರ ಎಂಬುದು ಮಲೆನಾಡು ಪ್ರಾಂತ್ಯದ ಮೂಲ ಕಲೆ. ಹೊಸನಗರ, ಸಾಗರ, ಸೊರಬ, ಕಾರವಾರ, ಶಿರಸಿ ಭಾಗದಲ್ಲಿ ಅತಿ ಹೆಚ್ಚು ಹಸೆ ಕಲೆಯನ್ನು ರೂಢಿಸಿಕೊಂಡು ಬಂದಿರುವ ಸಾಂಪ್ರಾದಾಯಿಕ ಕಲೆಗಾರರಿದ್ದಾರೆ. ಬಿಳಿ ಗೋಡೆಯ ಮೇಲೆ ಕೆಂಪು ಚಿತ್ತಾರ ಅಥವಾ ಕೆಂಪು ಗೋಡೆಯ ಮೇಲೆ ಬಿಳಿ ಚಿತ್ತಾರವನ್ನು ಬರೆಯಲಾಗುತ್ತದೆ. ಹೀಗೆ ಒಂದು ಕಾಲಕ್ಕೆ ಬಹುತೇಕ ಮಲೆನಾಡು ಪ್ರಾಂತ್ಯದ ಮನೆಯ ಗೋಡೆಗಳಲ್ಲಿ ರಾರಾಜಿಸುತ್ತಿದ್ದ ಹಸೆ ಚಿತ್ತಾರಗಳು ಇತ್ತೀಚೆಗೆ ನಗರಗಳಿಗೂ ವಿಸ್ತರಣೆಯಾಗುತ್ತಿದೆ. ಉದ್ಯೋಗ, ವ್ಯವಹಾರದ ಕಾರಣಕ್ಕಾಗಿ ಸ್ವಂತ ಊರು ತೊರೆದು ನಗರಗಳಿಗೆ ಸ್ಥಳಾಂತರಗೊಂಡಿರುವ ಮಲೆನಾಡಿಗರು, ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹಸೆ ಕಲೆಯನ್ನು ಬರೆದು ಗಮನಸೆಳೆದಿದ್ದಾರೆ. ಇದರಿಂದ ಪ್ರೇರಿತರಾಗಿ ಇತರರು ಕೂಡಾ ತಮ್ಮ ನೂತನ ಮನೆಗಳ ಗೋಡೆ ಮೇಲೆ ಹಸೆ ಚಿತ್ತಾರವನ್ನು ಬರೆಸುತ್ತಿದ್ದಾರೆ. ಈ ಕಲೆಯನ್ನು ಶಾಶ್ವತವಾಗಿ ಮುಂದಿನ ತಲೆಮಾರಿಗೆ ಉಳಿಸುವುದಕ್ಕಾಗಿ ಕೆಲ ಸಂಸ್ಥೆಗಳು ಶ್ರಮಿಸುತ್ತಿರುವುದು ಗಮನಾರ್ಹ.

ಓಲ್ಡ್ ಈಸ್ ಗೋಲ್ಡ್ ಸಂಪ್ರದಾಯ

ಓಲ್ಡ್ ಈಸ್ ಗೋಲ್ಡ್ ಎಂಬ ಆಂಗ್ಲ ನುಡಿಗಟ್ಟು ಮನುಷ್ಯನ ಜೀವನದಲ್ಲಿ ಆಗುವ ಹಲವು ಬದಲಾವಣೆಗೆ ಸಾಕ್ಷಿ ಒದಗಿಸುತ್ತಿದ್ದು, ಹಸೆ ಕಲೆ ಕೂಡಾ ಇಂತದ್ದೊಂದು ಪರಿವರ್ತನೆಗೆ ಸಾಕ್ಷಿಯಾಗಿದೆ. ಹಸೆ ಕಲೆಯು ಗೋಡೆ, ಮಡಿಕೆ, ಬುಟ್ಟಿ, ಬಟ್ಟೆ ಇತ್ಯಾದಿ ವಸ್ತುಗಳ ಮೇಲೂ ಬರೆಯಲ್ಪಡುವ ಒಂದು ವಿಶೇಷ ಚಿತ್ರಕಲೆ. ಮದುವೆಯಲ್ಲಿ ವಧುವರರು ಕುಳಿತುಕೊಳ್ಳುವ ಮಣೆಯನ್ನು ಹಸೆಯಿಂದ ಶೃಂಗರಿಸುವುದರಿಂದ ಅದನ್ನು ‘ಹಸೆಮಣೆ’ ಎಂದು ಕರೆಯುವುದು. ಹಾಗೂ ಹಸೆ ಗೋಡೆ ಎಂಬ ಹೆಸರಿನಲ್ಲಿ ಗೋಡೆಯನ್ನು ಅಲಂಕರಿಸಿ ಆ ಗೋಡೆಯ ಮುಂದೆ ಮಧುಮಕ್ಕಳನ್ನು ಕೂರಿಸಿ ಆರತಿ ಮಾಡುತ್ತಿದ್ದರು. ಈ ಹಳೆಯ ಪದ್ದತಿಗಳು ಸ್ವರೂಪದಲ್ಲಿ ಬದಲಾವಣೆಯಾಗಿ ಮತ್ತೆ ಬಳಕೆಗೆ ಬಂದಿವೆ. ಹಸೆ ಚಿತ್ತಾರದ ಸ್ಟಿಕ್ಕರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅದನ್ನು ಗೋಡೆಗೆ ಅಂಟಿಸಬಹುದು. ದೇವರಮನೆ, ತುಳಸಿಕಟ್ಟೆ ಮನೆ ಬಾಗಿಲಿನ ಹೊಸ್ತಿಲ ಮೇಲೆ ಹೀಗೆ ಆಯಾಯ ಗಾತ್ರಕ್ಕೆ ತಕ್ಕ ಹಾಗೆ ಹಸೆ ಸ್ಟಿಕ್ಕರ್‌ಗಳು ದೊರೆಯುತ್ತವೆ. ಇನ್ನುಳಿದಂತೆ ಮೂಲ ಕಲೆಯ ವಿಧಾನದಲ್ಲಿ ಗೋಡೆ, ಕಾಂಪೌಂಡ್, ವಾಣಿಜ್ಯ ವ್ಯವಹಾರ ಕಟ್ಟಡಗಳಲ್ಲಿ ಹಸೆ ಕಲೆಯನ್ನು ಆಕರ್ಷಕವಾಗಿ ಬಳಸುತ್ತಿರುವುದು ಇತ್ತೀಚೆಗೆ ಹೊಸ ಟ್ರೆಂಡ್ ಆಗಿದೆ.