ಬೆಂಗಳೂರು: ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಅಶ್ಲೀಲ ಪೆನ್ ಡ್ರೈವ್ ಪ್ರಕರಣ ಇಡೀ ನಾಡನ್ನೇ ತಲೆತಗ್ಗಿಸುವಂತೆ ಮಾಡಿರುವ ಸಂಸದ ಪ್ರಜ್ವಲ್ ರೇವಣ್ಣ ಎಸಗಿದರೆನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ನಟಿ ಹರ್ಷಿಕಾ ಪೂಣಚ್ಚ ಪ್ರತಿಕ್ರಿಯಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಎಸಗಿದ ಪೈಶಾಚಿಕ ಕೃತ್ಯದ ಬಗ್ಗೆ ನಟಿ ಹರ್ಷಿಕಾ ಪೂಣಚ್ಚ ಮಾತನಾಡಿದ್ದಾರೆ. ಹಾಸನ ಸಂಸದರ 2976 ವಿಡಿಯೋಗಳ ಪೈಕಿ ಒಂದು ದುರದೃಷ್ಟವಶಾತ್ ವಿಡಿಯೋವನ್ನು ನೋಡಿದೆ ಎಂದು ಹರ್ಷಿಕಾ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು ಇಂಥ ಕೆಟ್ಟ ಕೃತ್ಯಗಳನ್ನು ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ದುರದೃಷ್ಟವಶಾತ್ ಇಂದು ಪ್ರಸ್ತುತ ವೈರಲ್ ಆಗಿರುವ 2976 ವೀಡಿಯೊಗಳಲ್ಲಿ ಒಂದನ್ನು ನಾನು ನೋಡಿದೆ. ಅದನ್ನು ನೋಡುವುದು ನಿಜಕ್ಕೂ ನೋವಿನ ಸಂಗತಿ! ವಿಡಿಯೋಗಳು ಕಾನೂನು ಬದ್ಧ ಮತ್ತು ನೈಜವಾಗಿದ್ದರೆ, ಅಂತಹ ಕೊಳಕು ಕೃತ್ಯಗಳನ್ನು ಸೃಷ್ಟಿಸಿದವರು ಖಂಡಿತವಾಗಿಯೂ ದೇಶದ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗಬೇಕು' ಎಂದು ಅವರು ತಮ್ಮ ಮೊದಲ ಟ್ವೀಟ್‌ನಲ್ಲಿ ಬರೆದಿದ್ದಾರೆ.
ಈ ವಿಡಿಯೋಗಳಲ್ಲಿ ಕಾಣಿಸಿಕೊಂಡಿರುವ ಅಸಂಖ್ಯಾತ ಮಹಿಳೆಯರ ಕುರಿತಾಗಿ ನನ್ನ ನೋವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರೆಲ್ಲರೂ ಸಭ್ಯ ಮತ್ತು ಸರಳ ಕುಟುಂಬದ ಸಾಮಾನ್ಯ ಮಹಿಳೆಯರಂತೆ ಕಾಣುತ್ತಾರೆ. ಈ ಸಂತ್ರಸ್ತರ ಮುಖಗಳನ್ನು ವಿವಿಧ ಗುಂಪುಗಳು ರಾಜಕೀಯ ಚರ್ಚೆಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಅವರು ರಾಜಕಾರಣಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನಿಷ್ಠ ಪಕ್ಷ ಈ ಜನರು ಅಲ್ಲಿರುವ ಮಹಿಳೆಯರ ಮುಖವನ್ನಾದರೂ ಬ್ಲರ್ ಮಾಡಬಹುದಿತ್ತು. ಭವಿಷ್ಯದಲ್ಲಿ ಅವರು ಸಮಾಜವನ್ನು ಹೇಗೆ ಎದುರಿಸ್ತಾರೆ. ಇನ್ನು ಮುಂದೆ ನಮ್ಮ ಜನ ಅವರನ್ನು ಯಾವ ದೃಷ್ಟಿಕೋನದಲ್ಲಿ ನೋಡಬಹುದು ಎಂದು ವಿವರಿಸಿ ಹೇಳಬೇಕಾಗಿಲ್ಲ. ಅವರ ಕುಟುಂಬ ಮತ್ತು ಮಕ್ಕಳ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀರಾ?ಅವರು ಈಗ ಅನುಭವಿಸುತ್ತಿರುವ ಮಾನಸಿಕ ಆಘಾತವನ್ನೊಮ್ಮೆ ಊಹಿಸಿ ನೋಡಿ ಎಂದು ಅವರು ಬರೆದಿದ್ದಾರೆ.