ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಮದುವೆ ಅದ್ದೂರಿಯಾಗಿ ನೆರವೇರಿದೆ. ನಿನ್ನೆ ವಿರಾಜಪೇಟೆ ಸಮೀಪದ ಅಮ್ಮತ್ತಿಯ ಕೊಡವ ಸಮಾಜ ಭವನದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭುವನ್-ಹರ್ಷಿಕಾ ಗೃಹಸ್ತಾಶ್ರಮ ಪ್ರವೇಶಿಸಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಡಾ. ಕೆ. ಸುಧಾಕರ್, ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ ದಂಪತಿ, ದೊಡ್ಡಣ್ಣ, ತಬಲಾ ನಾಣಿ, ಅನುಪ್ರಭಾಕರ್ ಮತ್ತು ರಘು ಮುಖರ್ಜಿ ದಂಪತಿ, ಪೂಜಾ ಗಾಂಧಿ, ಶ್ರೀಕಿ, ತೇಜಸ್ವಿನಿ ಶರ್ಮಾ ಸೇರಿ ರಾಜಕೀಯ ಮತ್ತು ಸಿನಿಮಾ ಕ್ಷೇತ್ರದ ಹಲವರು ಆಗಮಿಸಿ, ನವಜೋಡಿಗೆ ಆಶೀರ್ವದಿಸಿದರು.
ಕೊಡವ ಸಂಪ್ರದಾಯದಂತೆ ಮದುವೆ:
ಕೊಡಗಿನ ಸಾಂಪ್ರದಾಯಿಕ ಉಡುಗೊರೆ, ಸಂಪ್ರದಾಯಗಳೇ ಅಲ್ಲಿನ ಮದುವೆಗಳ ವಿಶೇಷ ಆಕರ್ಷಣೆ. ಅದೇ ರೀತಿ ಉಡುಗೆ, ತೊಡುಗೆಗಳಲ್ಲಿ ಹರ್ಷಿಕಾ-ಭುವನ್ ಕಾಣಿಸಿಕೊಂಡರು. ಬುಧವಾರ (ಆ. 23) ಊರುಕೂಡು ಸಂಪ್ರದಾಯದೊಂದಿಗೆ ವಿವಾಹಪೂರ್ವ ಶಾಸ್ತ್ರಗಳು ನಡೆದಿತ್ತು. ನಂತರ ಇಬ್ಬರಿಗೂ ಹಿರಿಯರಿಂದ ಪ್ರತ್ಯೇಕವಾಗಿ ಮೆಹೆಂದಿ ಶಾಸ್ತ್ರ ಪೂರ್ಣಗೊಳಿಸಿ ಬಳಿಕ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಹಾಡಿ, ಕುಣಿದು ಸಂಭ್ರಮಿಸಿದರು. ನಂತರ ಗುರುವಾರ (ಆ.24) ಬೆಳಗ್ಗೆ ಹುಡುಗ ಮತ್ತು ಹುಡುಗಿ ಮನೆಯಲ್ಲಿ ಪ್ರತ್ಯೇಕವಾಗಿ ಪೂಜೆ ನಡೆಯಿತು. ಬಳೆ ಶಾಸ್ತ್ರ, ವರಪೂಜೆ ರೀತಿಯಲ್ಲಿ ಹೊಂಬಣ್ಣ ಪೂಜೆ ನಡೆದ ಬಳಿಕ ಭುವನ್ ಮಂಟಪಕ್ಕೆ ಬಂದು ಬಾಳೆ ಕಡಿಯುವ ಶಾಸ ನೆರವೇರಿಸಿದರು. ನಂತರ ಹುಡುಗನಿಗೆ ಹುಡುಗಿ ಅಮ್ಮ ಹಾಲು, ಬಾಳೆಹಣ್ಣು, ಅನ್ನ ತಿನ್ನಿಸಿ, ಮಂಟಪದ ಒಳಗೆ ಕರೆದುಕೊಂಡು ಹೋಗಿ, ವಧುವಿನ ಜತೆ ವೇದಿಕೆಯಲ್ಲಿ ಕೂರಿಸಿದರು. ಬಳಿಕ ನವಜೋಡಿಯ ಮುಹೂರ್ತ ನೆರವೇರಿತು.
12 ವರ್ಷಗಳ ಪ್ರೀತಿಗೆ ದಾಂಪತ್ಯದ ಮುದ್ರೆ
ಭುವನ್ ಪೊನ್ನಣ್ಣ ಮೂಲತಃ ಮಡಿಕೇರಿಯವರು. ಕೊಡವ ಭಾಷೆಯ ಬ್ರಹ್ಮಗಿರಿ ವಾರಪತ್ರಿಕೆ ಸಂಪಾದಕ ಉಳ್ಳಿಯಡ ಪೂವಯ್ಯ ಮತ್ತು ಡಾಟಿ ದಂಪತಿ ಪುತ್ರ. ಹರ್ಷಿಕಾ ಪೂಣಚ್ಚ ಅಮ್ಮತ್ತಿ ನಿವಾಸಿ ಉದ್ದಪಂಡ ದಿ. ಪೂಣಚ್ಚ ಮತ್ತು ಶಾಂಭವಿ ದಂಪತಿ ಪುತ್ರಿ. ಭುವನ್ ಮತ್ತು ಹರ್ಷಿಕಾ ಕಳೆದ 12 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಯ ವಿಷಯವನ್ನು ಗೌಪ್ಯವಾಗಿಟ್ಟಿದ್ದ ಈ ಜೋಡಿ ಕರೊನಾ ಸಮಯದಲ್ಲಿ ‘ಭುವನಂ’ ಮೂಲಕ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗಿತ್ತು. ಆ ಸಮಯದಲ್ಲಿ ಇಬ್ಬರ ಪ್ರೀತಿ-ಪ್ರೇಮದ ಬಗ್ಗೆ ಸುದ್ದಿಯಾಗಿತ್ತಾದರೂ, ಅದನ್ನು ಅಲ್ಲಗಳೆದಿದ್ದರು.
ವೆಜ್-ನಾನ್‌ವೆಜ್ ಭರ್ಜರಿ ಖಾದ್ಯಗಳು
ಕೊಡವ ಜೋಡಿಯ ಮದುವೆಯಲ್ಲಿ ಬಗೆ ಬಗೆಯ, ರುಚಿ-ರುಚಿಯಾದ ಥರಹೇವಾರಿ ಖಾದ್ಯಗಳನ್ನು ಸಿದ್ದಪಡಿಸಲಾಗಿತ್ತು. ಮಾಂಸಾಹಾರ ಹಾಗೂ ಸಸ್ಯಾಹಾರ ಎರಡಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಕೊಡವ ಶೈಲಿಯ ನೂಪಟ್ಟು, ಪೋರ್ಕ್ ್ರೈ, ಪೋರ್ಕ್ ಕರಿ, ಮಟನ್ ಬಿರಿರ್ಯಾನಿ, ಮಟನ್ ್ರೈ, ಚಿಕನ್ ್ರೈ ತಯಾರಿಸಲಾಗಿತ್ತು. ಹಾಗೇ ವೆಜ್‌ನಲ್ಲಿ ಪಲಾವ್, ಅಲಸಂದೆ ಪಲ್ಯ, ಬೆಂಡೆ ್ರೈ, ಅನಾನನ್ ಕರಿ, ಈರುಳ್ಳಿ ಕರಿ, ಮೊಸರು ವಡೆ, ತೆಂಗಿನ ಹಾಲು, ವೆಜ್ ಕುರ್ಮಾ ಸೇರಿ ಹಲವು ತಿಂಡಿ, ತಿನಿಸುಗಳು ಮೆನುನಲ್ಲಿದ್ದವು.
ಇಬ್ಬರಿಗೂ ಒಳ್ಳೆಯದಾಗಲಿ. ಕೊಡವ ಸಂಪ್ರದಾಯ ಕಂಡು ಸಂತೋಷವಾಯಿತು.
-ದೊಡ್ಡಣ್ಣ, ಹಿರಿಯ ನಟ
*ನನ್ನ ಮದುವೆಗೆ ಉಟ್ಟಿದ್ದ ಸೀರೆಯನ್ನು ಈಗ ಹರ್ಷಿಕಾಗಾಗಿ ಕೊಡವ ಶೈಲಿಯಲ್ಲಿ ಧರಿಸಿದ್ದೇನೆ. ಇಬ್ಬರೂ ಒಳ್ಳೆಯವರು. ಅವರಿಗೆ ಒಳ್ಳೆಯದಾಗಲಿ ಎಂದು ಎಲ್ಲರೂ ಆಶೀರ್ವದಿಸೋಣ
-ಅನು ಪ್ರಭಾಕರ್, ನಟಿ
*ಹಲವು ವರ್ಷಗಳ ಸ್ನೇಹ ಈಗ ಮದುವೆಗೆ ಬದಲಾಗಿದೆ. ಸ್ನೇಹಿತರಾಗಿ, ಗಂಡ ಹೆಂಡತಿಯಾಗಿ ಇಬ್ಬರೂ ಖುಷಿಯಾಗಿರಲಿ
-ಗಣೇಶ್, ನಟ
*ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗೆ ಒಳ್ಳೆಯದಾಗಲಿ. ‘ಮುಂಗಾರು ಮಳೆ’ ಚಿತ್ರದ ಬಳಿಕ ಎರಡನೇ ಬಾರಿ ಈ ಶೈಲಿಯ ಸೀರೆ ಉಡುತ್ತಿದ್ದೇನೆ.
-ಪೂಜಾ ಗಾಂಧಿ, ನಟಿ
ಮದುವೆಗೆ ಬಂದ ಎಲ್ಲರಿಗೂ ಧನ್ಯವಾದ. ಬಹಳ ಖುಷಿಯಾಗುತ್ತಿದೆ. ಕೊಡಗು ದೂರ, ಎಲ್ಲರೂ ಬರಲ್ಲ ಅಂದುಕೊಂಡಿದ್ದೆವು. ಯಡಿಯೂರಪ್ಪಾಜಿ, ನಿರಾಣಿ ಸರ್ ಅಷ್ಟು ದೂರದಿಂದ ಬಂದು ಹರಸಿದರು.
-ಭುವನ್ ಪೊನ್ನಣ್ಣ, ವರ
ಗೆಳೆಯನನ್ನು ಮದುವೆಯಾದ ಖುಷಿಯಿದೆ. ಇಷ್ಟು ವರ್ಷದಿಂದ ಗೆಳೆಯರಾಗಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಬಂದಿದ್ದೇವೆ. ಈಗ ಮತ್ತೊಂದು ಹಂತಕ್ಕೆ ಕಾಲಿಡುತ್ತಿದ್ದೇವೆ. ಮಧುಮಗಳಾಗಿ ನಟಿಸೋದು ಸುಲಭ. ಆದರೆ, ನಿಜವಾಗಿಯೂ ಮಧುಮಗಳಾಗಿರೋದು ಕಷ್ಟ ಅಂತ ಗೊತ್ತಾಯಿತು. ನಾನು, ಭುವನ್ ಕುಟುಂಬಕ್ಕೆ ಸೇರಿದ್ದೇನೆ. ಇನ್ನು ಮುಂದೆ ಅವರ ಫ್ಯಾಮಿಲಿ ನನ್ನದು. ಒಳ್ಳೆಯ ಅತ್ತೆ ಮಾವ ಸಿಕ್ಕಿದ್ದಾರೆ ಅನ್ನುವ ಸಮಾಧಾನ ಇದೆ. ನಮ್ಮ ಪ್ರೊಡಕ್ಷನ್‌ನಲ್ಲಿ ‘ಭುವನಂ ಶ್ರೇಷ್ಠಮ್ ಗಚ್ಚಾಮಿ’ ಸಿನಿಮಾ ಘೋಷಣೆ ಆಗಿದೆ. ಕೆಲವು ದಿನಗಳಲ್ಲಿ ಶೂಟಿಂಗ್ ಶುರುವಾಗಲಿದೆ. ಈ ಸಂದರ್ಭದಲ್ಲಿ ತಂದೆಯನ್ನು ಮಿಸ್ ಮಾಡಿಕೊಂಡೆ. ಆದರೆ , ಅವರು ನಮ್ಮನ್ನು ನೋಡಿ ಹರಸುತ್ತಿದ್ದಾರೆ ಅಂತ ನಂಬಿಕೆ ಇದೆ.
-ಹರ್ಷಿಕಾ ಪೂಣಚ್ಚ, ವಧು