ನವದೆಹಲಿ: ಅಪಹೃತರ ಮೇಲೆ ಹಲ್ಲೆ ಮಾಡದೆ, ಬೆದರಿಸದೆ ಸರಿಯಾಗಿ ನೋಡಿಕೊಂಡರೆ ಅಪಹರಣಕಾರರಿಗೆ ಭಾರತೀಯ ದಂಡಸಂಹಿತೆಯ ಸೆಕ್ಷನ್ 364ಎ (ಒತ್ತೆ ಹಣಕ್ಕಾಗಿ ಅಪಹರಣ) ಪ್ರಕಾರ ಜೀವಾವಧಿ ಶಿಕ್ಷೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ತೆಲಂಗಾಣದ ಮಗುವೊಂದರ ಅಪಹರಣ ಪ್ರಕರಣದ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಆರ್. ಸುಭಾಷ್ ರೆಡ್ಡಿ ಅವರನ್ನು ಒಳಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಏನಿದು ಪ್ರಕರಣ ? : ರಿಕ್ಷಾ ಚಾಲಕ ಶೇಖ್ ಅಹಮದ್ ಎಂಬಾತ 2011ರಲ್ಲಿ ಆರನೇ ತರಗತಿ ಬಾಲಕನನ್ನು ಮನೆಗೆ ಡ್ರಾಪ್ ಮಾಡುವ ಬದಲು ಅಪಹರಿಸಿದ್ದ. ಆ ಬಾಲಕನ ತಂದೆಯ ಬಳಿ 2 ಲಕ್ಷ ರೂಪಾಯಿ ಒತ್ತೆ ಹಣ ಕೇಳಿದ್ದ. ಪೊಲೀಸರು ಬಾಲಕನನ್ನು ರಸಿದ್ದರು. ಅಪಹರಣಕಾರ ಅಹಮದ್ ಬಾಲಕನಿಗೆ ಯಾವುದೇ ಹಾನಿ ಮಾಡಿಲ್ಲ, ಬೆದರಿಕೆ ಒಡ್ಡಿಲ್ಲ ಎಂದು ಕೆಳ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಬಾಲಕನ ತಂದೆ ಹೇಳಿದ್ದರು. ಆದಾಗ್ಯೂ, ಅಹಮದ್ಗೆ 364 ಎ ಪ್ರಕಾರ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟಿತ್ತು. ಹೈಕೋರ್ಟ್ ಕೂಡ ಇದನ್ನು ಎತ್ತಿ ಹಿಡಿದಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಶೇಖ್ ಅಹಮದ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ.
ಕೋರ್ಟ್ ಹೇಳಿದ್ದೇನು?
ಅಪರಾಧಿ ಅಹಮದ್ ಈಗಾಗಲೇ ಏಳು ವರ್ಷ ಶಿಕ್ಷೆ ಅನುಭವಿಸಿದ್ದಾನೆ. 5,000 ರೂ. ದಂಡ ಪಾವತಿಸುವುದಕ್ಕೂ ಆತ ಬಾಧ್ಯಸ್ಥ. ಸೆಕ್ಷನ್ 363 (ಅಪಹರಣಕ್ಕೆ ಶಿಕ್ಷೆ) ಪ್ರಕಾರ ಗರಿಷ್ಠ ಏಳು ವರ್ಷ ಸಜೆ ಮತ್ತು ದಂಡ ಪಾವತಿಸಬೇಕು. ಇದು ಈಗಾಗಲೇ ಆಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮೂರು ಅಂಶಗಳು
ಐಪಿಸಿ ಸೆಕ್ಷನ್ 364 ಎ ಪ್ರಕಾರ ಅಪರಾಧವನ್ನು ಸಾಬೀತು ಮಾಡಲು ಪರಿಗಣಿಸಬೇಕಾದ ಮೂರು ಅಂಶಗಳನ್ನು ಕೋರ್ಟ್ ಉಲ್ಲೇಖಿಸಿದೆ. ಅಪಹರಣ ಅಥವಾ ಯಾವುದೇ ವ್ಯಕ್ತಿಯ ಅಪಹರಣ ಅಥವಾ ಅಕ್ರಮ ಬಂಧನದಲ್ಲಿ ಇರಿಸುವಂಥದ್ದು, ಅಪಹರಣಕಾರನ ನಡವಳಿಕೆ ಹಾಗೂ ಸರ್ಕಾರ, ಸಂಸ್ಥೆ ಅಥವಾ ವ್ಯಕ್ತಿಗಳ ಮೇಲೆ ಒತ್ತಡ ಹೇರಲು ಅಪಹೃತರಿಗೆ ಘಾಸಿ ಮಾಡುವಂಥದ್ದು. ಈ ಮೂರು ಕಾರಣಗಳ ಪೈಕಿ ಎರಡು ಅಥವಾ ಮೂರನೇ ಕಾರಣ ಸಾಬೀತಾದರೆ ಮಾತ್ರ ಸೆಕ್ಷನ್ 364 ಎ ಪ್ರಕಾರದ ಜೀವಾವಧಿ ಶಿಕ್ಷೆ ನೀಡಬಹುದಾಗಿದೆ.
ಅನರ್ಹತೆ ಇತ್ಯರ್ಥಕ್ಕೆ ಕಾಯ್ದೆ ರೂಪಿಸಿ
ಸಂವಿಧಾನದ 10ನೇ ಷೆಡ್ಯೂಲ್ ಪ್ರಕಾರ, ಜನಪ್ರತಿನಿಧಿಗಳ ಅನರ್ಹತೆ ದೂರುಗಳನ್ನು ಸ್ಪೀಕರ್ ಅಥವಾ ಸದನದ ಅಧ್ಯಕ್ಷರು ಇತ್ಯರ್ಥಗೊಳಿಸುವುದಕ್ಕೆ ಸಂಬಂಧಿಸಿದ ಸಮಯ ಮಿತಿಯ ಚೌಕಟ್ಟನ್ನು ಹಾಕಲು ಕಾನೂನು ರೂಪಿಸುವ ಕೆಲಸ ಸಂಸತ್ ಮಾತ್ರವೇ ಮಾಡಲು ಸಾಧ್ಯ ಎಂದು ಮುಖ್ಯ ನ್ಯಾಯ ಮೂರ್ತಿ ಎನ್.ವಿ. ರಮಣ, ನ್ಯಾಯ ಮೂರ್ತಿಗಳಾದ ಎ.ಎಸ್. ಬೋಪಣ್ಣ, ಹೃಷಿಕೇಶ್ ರಾಯ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ನ್ಯಾಯ ಪೀಠ ಗುರುವಾರ ಹೇಳಿದೆ. ಪಶ್ಚಿಮ ಬಂಗಾಳದ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ರಣಜಿತ್ ಮುಖರ್ಜಿ ಸಲ್ಲಿಸಿದ್ದ ದೂರಿನ ವಿಚಾರಣೆ ವೇಳೆ ನ್ಯಾಯಪೀಠ ಈ ಮಾತು ಹೇಳಿದೆ. ಹಾಲಿ ಸಂಸದರ ಅನರ್ಹತೆ ಪಿಟಿಷನ್ಗಳ ಬಗ್ಗೆ ತೀರ್ಮಾನ ಮಾಡುವುದಕ್ಕೆ ಸ್ಪೀಕರ್ಗಳಿಗೆ ಸಮಯ ಮಿತಿ ನಿಗದಿ ಮಾಡಬೇಕು. ಸಂವಿಧಾನದ 10ನೇ ಷೆಡ್ಯೂಲ್ ಪ್ರಕಾರ ಸಕಾಲಿಕ ನಿರ್ಧಾರಗಳನ್ನು ತೆಗೆದುಕೊಳ್ಳ ಲಾಗುತ್ತಿಲ್ಲ. ಕರ್ನಾಟಕದ ಶಾಸಕರ ಕೇಸ್ ಗಮನಿಸಿ ಈಗಾಗಲೇ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ಹಿರಿಯ ನ್ಯಾಯ ವಾದಿ ಕಪಿಲ್ ಸಿಬಲ್ ಇದೇ ದಾರಿಯಲ್ಲಿ ವಾದ ಮುಂದುವರಿಸಿದ್ದಾರೆ. ಇದರ ತೀರ್ಮಾನ ಏನಿದ್ದರೂ ಸಂಸತ್ ಮಾಡಬೇಕಾಗಿದೆ ಎಂದು ಸಿಜೆಐ ರಮಣ ಹೇಳಿದರು.