ನ್ಯೂಸ್

ಎರಡು ದಿನ ಹರಿದ್ವಾರ ಸೀಲ್​​! ಗಂಗಾ ಸ್ನಾನ ಕಾರ್ಯಕ್ರಮ ರದ್ದು

ಹರಿದ್ವಾರ : ಉತ್ತರಾಖಂಡದ ಹರಿದ್ವಾರದಲ್ಲಿ ಜೂನ್ 20 ಮತ್ತು 21 ರಂದು ನಿಗದಿಪಡಿಸಲಾಗಿದ್ದ ಗಂಗಾ ಸ್ನಾನ ಕಾರ್ಯಕ್ರಮವನ್ನು ಕರೊನಾದಿಂದಾಗಿ ರದ್ದುಗೊಳಿಸಲಾಗಿದೆ. ಭಕ್ತಾದಿಗಳು ಆ ಎರಡು ದಿನಗಳಂದು ಸಲ್ಲುವ ಗಂಗಾ ದಸರಾ ಮತ್ತು ನಿರ್ಜಲ ಏಕಾದಶಿಯ ಸಂದರ್ಭದಲ್ಲಿ ಗಂಗಾನದಿಯಲ್ಲಿ ಸ್ನಾನ ಮಾಡುವ ಪ್ರತೀತಿ ಇದೆ. ಆದರೆ ಈ ಬಾರಿ ಅದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಹರಿದ್ವಾರ ಜಿಲ್ಲಾಡಳಿತ ಹೇಳಿದೆ.

ಕರೊನಾ ಪ್ರಕರಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹರಿದ್ವಾರಕ್ಕೆ ಬರುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಿದೆ. ಕರೊನಾ ನೆಗೆಟಿವ್ ವರದಿ ಇರುವ ಜನರಿಗೆ ಪ್ರವೇಶ ನೀಡಲಾಗುತ್ತಿದೆ. ಆದರೆ ಜೂನ್ 20 ಮತ್ತು 21 ರಂದು ಜಿಲ್ಲೆಯ ಗಡಿಗಳನ್ನು ಸೀಲ್​ ಮಾಡಲಾಗುವುದು. ಹೊರಗಿನಿಂದ ಬರುವ ಯಾತ್ರಿಗಳನ್ನು ವಾಪಸ್​ ಕಳುಹಿಸಲಾಗುವುದು ಎಂದು ಜಿಲ್ಲಾ ಎಸ್ಪಿ ಕಮಲೇಶ್​ ಉಪಾಧ್ಯಾಯ ತಿಳಿಸಿದ್ದಾರೆ.

ಗಂಗಾ ದಸರಾ ಮತ್ತು ನಿರ್ಜಲ ಏಕಾದಶಿಯನ್ನು ಹರಿದ್ವಾರದ ಹರ್​ ಕಿ ಪೌಡಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಗುವುದು. ಕೇವಲ ತೀರ್ಥ ಪುರೋಹಿತರು ಮತ್ತು ಗಂಗಾ ಸಭಾದ ಅಧಿಕಾರಿಗಳಿಗೆ ಮಾತ್ರ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಲು ಅವಕಾಶವಿರುತ್ತದೆ ಎನ್ನಲಾಗಿದೆ. (ಏಜೆನ್ಸೀಸ್)