| ರಾಘವ ಶರ್ಮ ನಿಡ್ಲೆ ವೀರಮ್ಗಾಮ್ (ಗುಜರಾತ್)
2017ರ ವಿಧಾನಸಭೆ ಚುನಾವಣೆಯಲ್ಲಿ ಪ್ರಬಲ ಪಾಟಿದಾರ ಸಮುದಾಯದ ಮೀಸಲಾತಿ ಆಂದೋಲನದ ನಾಯಕತ್ವ ವಹಿಸಿದ್ದ ಹಾರ್ದಿಕ್ ಪಟೇಲ್ ಎಂಬ ಯುವಕ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರ ನಿದ್ದೆಗೆಡಿಸಿದ್ದರು. 5 ವರ್ಷಗಳ ಹಿಂದೆ ಮೋದಿ ವಿರೋಧಿಯಾಗಿದ್ದ ಇದೇ ಯುವಕ ಈಗ ಮೋದಿವಾದಿಯಾಗಿ ಬದಲಾಗಿರುವುದಲ್ಲದೆ, ತನ್ನ ಜನ್ಮನೆಲೆಯಾದ ವೀರಮ್ಗಾಮ್ ಕ್ಷೇತ್ರದಿಂದ ಕೇಸರಿ ಝಂಡಾ ಹಿಡಿದು ಸ್ಪರ್ಧೆಗಿಳಿದಿದ್ದಾರೆ!
ವೀರಮ್ಗಾಮ್ ಗುಜರಾತ್ನಾದ್ಯಂತ ಚರ್ಚೆಗೀಡಾಗಿರುವ ವಿಧಾನಸಭಾ ಕ್ಷೇತ್ರ. ಹಾರ್ದಿಕ್ ಪಟೇಲ್ ಮೆಹಸಾನ ಜಿಲ್ಲೆಯ ನರ್ಶಿಪುರದ ತನ್ನ ಸೋದರ ಮಾವನ ಮನೆಯಲ್ಲಿ ಜನಿಸಿದ್ದರೂ, ಬೆಳೆದು ದೊಡ್ಡವನಾಗಿದ್ದು ಮೂಲ ಮನೆಯಿರುವ ಅಹ್ಮದಾಬಾದ್ ಜಿಲ್ಲೆಯ ವೀರಮ್ಗಾಮ್ನ ಚಂದನ್ ನಗರಿ ಹಳ್ಳಿಯಲ್ಲೆ. ಮೊದಲ ಬಾರಿಗೆ ತ್ರಿಕೋನ ಚುನಾವಣಾ ಕದನಕ್ಕೆ ಸಾಯಾಗುತ್ತಿರುವ ವೀರಮ್ಗಾಮ್, ಕಳೆದೆರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಾಖಾಭಾಯ್ ಭರ್ವಾಡರನ್ನು ಆಯ್ಕೆ ಮಾಡಿದೆ. ಲಾಖಾಭಾಯ್ ವ್ಯಕ್ತಿ ಒಳ್ಳೆಯವರಾಗಿದ್ದರೂ, ಜನಪ್ರತಿನಿಧಿಯಾಗಿ ಪ್ರಯೋಜನವಿಲ್ಲ ಎಂಬ ಮಾತುಗಳು ಈಗ ಅಲ್ಲಲ್ಲಿ ಕೇಳಿಬರುತ್ತಿವೆ. ಕಾಂಗ್ರೆಸ್ ಟಿಕೆಟ್ ಆಕಾಂಯಾಗಿದ್ದ ಸ್ಥಳಿಯ ಕಾಂಗ್ರೆಸ್ ಮುಖಂಡ ಅಮರ್ ಸಿನ್ಹಾ ಠಾಕೂರ್, ಟಿಕೆಟ್ ತಪ್ಪಿದ್ದರಿಂದ ಕೊನೆಣದಲ್ಲಿ ಆಮ್ ಆದ್ಮಿ ಪಾರ್ಟಿ ಸೇರಿದರು. ಮೊದಲಿಗೆ ಕುನ್ವರ್ಜಿ ಠಾಕೂರ್ಗೆ ಟಿಕೆಟ್ ೂಷಣೆ ಮಾಡಿದ್ದ ಆಪ್, ಕಾಂಗ್ರೆಸ್ ಮತಗಳನ್ನು ಒಡೆದು, ಹಾರ್ದಿಕ್ ಪಟೇಲ್ಗೆ ಫೈಟ್ ನೀಡಲು ಅಮರ್ ಸಿನ್ಹಾ ಸೂಕ್ತ ವ್ಯಕ್ತಿ ಎಂದು ಭಾವಿಸಿ, ಕುನ್ವರ್ಜಿ ಬದಲಿಗೆ ಅಮರ್ ಸಿನ್ಹಾರನ್ನು ಕಣಕ್ಕಿಳಿಸಿದೆ. ಮೇಲ್ನೋಟಕ್ಕೆ ಇಲ್ಲಿ ತ್ರಿಕೋನ ಕದನ ಎಂದು ಕಂಡುಬಂದರೂ, ಫೈನಲ್ ಫೈಟ್ ಬಿಜೆಪಿ&ಆಮ್ ಆದ್ಮಿ ನಡುವೆ ಎಂಬ ಅಭಿಪ್ರಾಯವಿದೆ.
ಆಂದೋಲನದ ಸದ್ದಿಲ್ಲ: ಪಟೇಲ್ ಮೀಸಲಾತಿಗಾಗಿ ಹಾರ್ದಿಕ್ ನಡೆಸಿದ ಆಂದೋಲನದ ಕಾರಣಕ್ಕಾಗಿಯೇ ಚಂದನ್ ನಗರಿ ಹಳ್ಳಿ ರಾಜ್ಯಾದ್ಯಂತ ಗಮನಸೆಳೆದಿತ್ತು. ಈಗ ಆಂದೋಲನದ ಸದ್ದಡಗಿದೆ. ಪಾಟಿದಾರರು ಮೌನಕ್ಕೆ ಶರಣಾಗಿದ್ದಾರೆ. ಹೋರಾಟಗಾರ ಹಾರ್ದಿಕ್ ಬಿಜೆಪಿ ತೆಕ್ಕೆಯಲ್ಲಿದ್ದಾರೆ. 750 ಜನಸಂಖ್ಯೆ ಇರುವ ಚಂದನ್ ನಗರಿಯಲ್ಲಿ 450ಕ್ಕೂ ಹೆಚ್ಚು ಮಂದಿ ಪಾಟಿದಾರ್ (ಪಟೇಲ್) ಸಮುದಾಯದವರು. ಮೀಸಲಾತಿ ಆಂದೋಲನದಲ್ಲಿ ಹಾರ್ದಿಕ್ಗೆ ಬೆನ್ನೆಲುಬಾಗಿ ನಿಂತಿದ್ದ ಹಳ್ಳಿಗರು, ಅಂದು ಬಿಜೆಪಿ ಮೇಲಿನ ಸಿಟ್ಟಿನಿಂದಲೇ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು. ಒಂದರ್ಥದಲ್ಲಿ, ಹಾರ್ದಿಕ್ ಕಾಂಗ್ರೆಸ್ಗೆ ಬಹಿರಂಗ ಬೆಂಬಲ ೂಷಿಸಿದ್ದರಿಂದಲೇ ವೀರಮ್ಗಾಮ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಹಾದಿ ಸುಲಭಗೊಂಡಿತ್ತು. ಮೊದಲಿನಿಂದಲೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಹಾರ್ದಿಕ್ ತಂದೆ ಭರತ್ ಭಾಯ್ ಪಟೇಲ್, ಮಾಜಿ ಸಿಎಂ ಆನಂದಿಬೆನ್ ಪಟೇಲ್ ಸೇರಿ ಅನೇಕರೊಂದಿಗೆ ಕೆಲಸ ಮಾಡಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಇವರೆಲ್ಲರೂ ತಿರುಗಿಬಿದ್ದರು. ಈ ಬಾರಿ ಚಿತ್ರಣ ಬದಲಾಗಿದೆ. ಲಾಖಾಭಾಯ್ ಜನಪ್ರಿಯತೆ ಬದಿಗೆ ಸರಿದು, ಬಿಜೆಪಿ&ಆಮ್ ಆದ್ಮಿ ಪಾರ್ಟಿ ಹವಾ ಜೋರಾಗಿದೆ.
"ನಿಮ್ಮ ಅಂದಿನ ಹೋರಾಟಕ್ಕೆ ಗೆಲುವು ಸಿಕ್ಕಿತೆ' ಎಂಬ ವಿಜಯವಾಣಿ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್ ತಂಗಿ ಸೃಷ್ಟಿ ಪಟೇಲ್, ಆರ್ಥಿಕವಾಗಿ ದುರ್ಬಲವಿರುವ ಮೇಲ್ವರ್ಗದ ಮಂದಿಗೆ ಕನಿಷ್ಠ ಶೇ. 10 ಮೀಸಲಾತಿ ಸಿಗುತ್ತಿದೆ. ಶೂನ್ಯದ ಬದಲು ಶೇ. 10 ಮೀಸಲಾತಿಯನ್ನು ಮೋದಿ ಸರ್ಕಾರ ನೀಡಿರುವುದು ಸಮಾಧಾನ ತಂದಿದೆ ಎಂದು ಸಮರ್ಥಿಸಿಕೊಂಡರು.
ಠಾಕೂರರ ಪ್ರಾಬಲ್ಯ: ವೀರಮ್ಗಾಮ್ ಕ್ಷೇತ್ರದಲ್ಲಿ 65 ಸಾವಿರ ಒಬಿಸಿಯ ಠಾಕೂರರು, 50 ಸಾವಿರ ಪಟೇಲರು, 35 ಸಾವಿರ ದಲಿತರಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ಠಾಕೂರ್ ಸಮುದಾಯ ಪ್ರತಿನಿಧಿಸುತ್ತಿರುವುದರಿಂದ ಬಿಜೆಪಿಯಲ್ಲಿ ಸಹಜವಾಗಿಯೇ ಆತಂಕ ಸೃಷ್ಟಿಯಾಗಿದೆ. ಬಿಜೆಪಿ ವಿರೋಧಿ ಮತಗಳು ಆಪ್&ಕಾಂಗ್ರೆಸ್ ಮಧ್ಯೆ ವಿಭಜನೆಗೊಳ್ಳುವುದರಿಂದ ಬಿಜೆಪಿಗೇ ಲಾಭ. ಕಳೆದ ಬಾರಿ ಬಿಜೆಪಿಯಿಂದ ದೂರವಿದ್ದ ಪಟೇಲ್ ಮತಗಳು ಈ ಬಾರಿ ಹಾರ್ದಿಕ್ರನ್ನು ಬೆಂಬಲಿಸಲಿವೆ. ಹೀಗಾಗಿ, ನಮಗೆ ಗೆಲುವು ನಿಶ್ಚಿತ ಎಂದು ಬಿಜೆಪಿ ಕಚೇರಿಯಲ್ಲಿ ಸಿಕ್ಕ ಅಹ್ಮದಾಬಾದ್ ಜಿಲ್ಲಾ ಮಹಿಳಾ ಮೋರ್ಚಾ ಮಹಾಮಂತ್ರಿ ಆನಂದಿಬೆನ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿ ಹಾರ್ದಿಕ್ ಪಟೇಲ್ ಪರ ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಚಾರ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಜನಪ್ರಿಯ ನಾಯಕರ ಅನುಪಸ್ಥಿತಿ ಎದ್ದುಕಾಣುತ್ತಿದೆ.
ಕೈ ಸುಟ್ಟುಕೊಳ್ಳುವುದೇ?: ಅಮರ್ ಸಿನ್ಹಾ ಠಾಕೂರ್ಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರೆ, ಇಲ್ಲಿ ಆಮ್ ಆದ್ಮಿ ಪಾರ್ಟಿ ಚಿತ್ರಣದಲ್ಲೆ ಇರುತ್ತಿರಲಿಲ್ಲ ಎಂಬ ವಾದವನ್ನು ಅನೇಕರು ಒಪ್ಪಿಕೊಳ್ಳುತ್ತಾರೆ. ಹಾಲಿ ಶಾಸಕರ ಬಗ್ಗೆ ವಿರೋಧಿ ಅಲೆಯಿದ್ದರೂ, ಅವರಿಗೆ ಟಿಕೆಟ್ ನೀಡುವ ನಿರ್ಧಾರದಿಂದ ಸ್ಥಳಿಯ ಕಾರ್ಯಕರ್ತರಲ್ಲಿ ಬೇಸರ ಕಾಣುತ್ತಿದೆ. ಟಿಕೆಟ್ ತಪ್ಪಿದ್ದರಿಂದ ಅಮರ್ ಸಿನ್ಹಾ ಅವರಿಗೆ ಬಿಜೆಪಿಗಿಂತ ಕಾಂಗ್ರೆಸ್ ಸೋಲಿಸಬೇಕೆಂಬ ಸಿಟ್ಟು ಹೆಚ್ಚಾಗಿದೆ ಎಂದು ಸ್ಥಳಿಯರು ವಿಶ್ಲೇಷಿಸುತ್ತಾರೆ.
ಹಾರ್ದಿಕ್ಗೆ ವಿಶ್ವಾಸಾರ್ಹತೆ ಪ್ರಶ್ನೆ: 2015ರಿಂದ 2 ವರ್ಷ ಆಕ್ರಮಣಕಾರಿ ಆಂದೋಲನ ನಡೆಸಿ, ಆನಂದಿಬೆನ್ ಪಟೇಲ್ ರಾಜೀನಾಮೆಗೆ ಕಾರಣಕರ್ತರಾಗಿದ್ದ ಹಾರ್ದಿಕ್ ಪಟೇಲ್, 2017ರ ಚುನಾವಣೆ ಬಳಿಕ ಕಾಂಗ್ರೆಸ್ಸನ್ನು ಅಧಿಕೃತವಾಗಿ ಸೇರಿಕೊಂಡಿದ್ದರು. ರಾಜ್ಯ ಕಾಂಗ್ರೆಸ್ ಅಧ್ಯ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹಾರ್ದಿಕ್ ಕಾರ್ಯಾಧ್ಯ ಸ್ಥಾನಕ್ಕೆ ತೃಪ್ತರಾಗಿರಲಿಲ್ಲ. ಹಾರ್ದಿಕ್ಗೆ ಯಾವುದೇ ರೀತಿಯಲ್ಲಿ ಸಹಕಾರ ನೀಡದ ಸ್ಥಳಿಯ ಕಾಂಗ್ರೆಸ್ ನಾಯಕರು, ಅನಿವಾರ್ಯವಾಗಿ ಪದಿಂದ ಹೊರಹೋಗುವಂತೆ ನೋಡಿಕೊಂಡರು. ಅತ್ತ ರಾಹುಲ್ ಗಾಂಧಿಗೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ನಲ್ಲಿದ್ದು ಪ್ರಯೋಜನವಿಲ್ಲ ಎಂದುಕೊಂಡ ಹಾರ್ದಿಕ್ ಬಿಜೆಪಿಯಲ್ಲಿ ರಾಜಕೀಯ ಭವಿಷ್ಯ ಎದುರು ನೋಡುತ್ತಿದ್ದಾರೆ. ಒಂದೆಡೆ, ಸಿಎಂ ಸ್ಥಾನದಿಂದ ವಿಜಯ್ ರೂಪಾಣಿ ಅವರನ್ನು ಕೆಳಗಿಳಿಸಿ ಪಟೇಲ್ ಸಮುದಾಯದ ಭೂಪೇಂದ್ರ ಪಟೇಲ್ರನ್ನು ಮುಖ್ಯಮಂತ್ರಿ ಮಾಡಿ, ಮತ್ತೊಂದೆಡೆ ಹಾರ್ದಿಕ್ರನ್ನು ಪಕ್ಕೆ ಸೇರಿಸಿಕೊಂಡ ದಿಲ್ಲಿ ವರಿಷ್ಠರು, ಇಡೀ ಪಾಟಿದಾರ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ಮಾಡಿದ್ದಾರೆ. ಆದರೆ, ಹಾರ್ದಿಕ್ ಪಟೇಲ್ ಅವಕಾಶವಾದಿ ಎಂದು ಪಟೇಲ್ ಸಮುದಾಯದ ಒಂದು ವರ್ಗ ಭಾವಿಸಿದೆ. ಈ ಚರ್ಚೆಗೆ ಇನ್ನೊಂದು ಆಯಾಮ ನೀಡಿದ ತೌರಿ ಮುಬಾರಕ್ ಗ್ರಾಮದ ಯುವಕ ಲಲಿತ್ ಭಾಯ್, 5 ವರ್ಷದ ಹಿಂದೆ ತಮ್ಮ ವಿರುದ್ಧ ಹಾರ್ದಿಕ್ ಏನೇನು ಮಾತನಾಡಿದ್ದ ಎನ್ನುವುದನ್ನು ಮೋದಿ&ಶಾ ಮರೆಯಲು ಸಾಧ್ಯವೇ? ಅಷ್ಟು ಸುಲಭದಲ್ಲಿ ಅವರು ಹಾರ್ದಿಕ್ರನ್ನು ಅಪ್ಪಿಕೊಳ್ಳುತ್ತಾರಾ? ಒಂದು ವೇಳೆ ಹಾರ್ದಿಕ್ ಸೋತರೆ ಆತನ ರಾಜಕೀಯ ಭವಿಷ್ಯ ಅಲ್ಲಿಗೆ ಮುಕ್ತಾಯ. ಬಹುಶ@ ಬಿಜೆಪಿ ನಾಯಕರು ಅದನ್ನೇ ಬಯಸುತ್ತಿರಬಹುದು. ರಾಜಕಾರಣದಲ್ಲಿ ಯಾರನ್ನೂ ನಂಬಬೇಡಿ ಎಂದು ಎಚ್ಚರಿಕೆ ನೀಡಿದ!
ಅಂದು ಮೂವರು, ಈಗ ಒಬ್ಬನೇ!: 2017ರಲ್ಲಿ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ ನಾಯಕ ಹಾರ್ದಿಕ್ ಪಟೇಲ್, ಒಬಿಸಿ ಏಕತಾ ಮಂಚ್ ಅಧ್ಯಕ್ಷ ಅಲ್ಪೇಶ್ ಠಾಕೂರ್, ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ ನಾಯಕ ಜಿಗ್ನೇಶ್ ಮೆವಾನಿ ಸೇರಿ ಮೂವರೂ ಬಿಜೆಪಿ ವಿರುದ್ಧ ವ್ಯವಸ್ಥಿತ ಅಭಿಯಾನ ನಡೆಸಿದ ಪರಿಣಾಮ ಬಿಜೆಪಿ 99 ಸೀಟುಗಳಿಗೆ ತಗ್ಗಿ, ಕಾಂಗ್ರೆಸ್ 77 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಆದರೆ, ಈ ಬಾರಿ ಜಿಗ್ನೇಶ್ ಮೆವಾನಿ ಮಾತ್ರ ಕಾಂಗ್ರೆಸ್ ಅಖಾಡದಲ್ಲಿದ್ದಾರೆ. ಅಲ್ಪೇಶ್ ಠಾಕೂರ್ ಕೂಡ ಬಿಜೆಪಿ ಸೇರಿ ಗಾಂಧಿನಗರ ದಣದಿಂದ ಸ್ಪರ್ಧಿಸುತ್ತಿದ್ದಾರೆ. ಅಲ್ಪೇಶ್ 2017ರಲ್ಲಿ ಕಾಂಗ್ರೆಸ್ ಪರ ರಾಧಾನ್ಪುರ ೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ, 2 ವರ್ಷಗಳ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ನಂತರ ಅದೇ ೇತ್ರದಿಂದ ಉಪ ಚುನಾವಣೆಗೆ ಸ್ಪರ್ಧಿಸಿದ ಅಲ್ಪೇಶ್ ಠಾಕೂರ್ರನ್ನು ಮತದಾರರು 4000 ಮತಗಳಿಂದ ಸೋಲಿಸಿದರು. ಹಾಗಾದರೆ, ಅಂದು ಕಾಂಗ್ರೆಸ್ ಜತೆಗಿದ್ದು, ಈಗ ಬಿಜೆಪಿ ಸೇರಿರುವ ಹಾರ್ದಿಕ್ಗೂ ಈ ಆತಂಕ ಇರಬಹುದೇ? ಡಿ. 8ಕ್ಕೆ ಉತ್ತರ ಸಿಗಲಿದೆ.
ನೀರಿಲ್ಲ, ಊಟವಿಲ್ಲ...
ವೀರಮ್ಗಾಮ್ನ ಹಲವು ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ದಯನೀಯವಾಗಿದೆ. ತೌರಿ ಮುಬಾರಕ್ ಎಂಬ ಹಳ್ಳಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಮಕ್ಕಳಿಗೆ ನೀರಿನ ವ್ಯವಸ್ಥೆ ಒದಗಿಸಲು ಟ್ಯಾಂಕ್ ಕೂಡ ಇರಲಿಲ್ಲ. ಮಧ್ಯಾಹ್ನದ ಬಿಸಿಯೂಟವೂ ನೀಡಲಾಗುತ್ತಿಲ್ಲ. ಬಿಸಿಯೂಟಕ್ಕೆ ದುಡ್ಡು ಬಂದರೂ ಮಕ್ಕಳು ಮನೆಯಿಂದ ಟಿಫನ್ ಬಾಕ್ಸ್ ಮತ್ತು ಬಾಟಲಿಯಲ್ಲಿ ನೀರು ತರಬೇಕು. 8ನೇ ತರಗತಿವರೆಗೆ ವಿದ್ಯಾರ್ಥಿಗಳು ಇಲ್ಲಿ ಓದುತ್ತಾರೆ. ಸರ್ಕಾರಕ್ಕೆ ನಿಜಕ್ಕೂ ಕಾಳಜಿ ಇದೆಯೇ ಎಂದು ಸ್ಥಳಿಯ ಯುವಕ ಕಲ್ಪೇಶ್ ಪ್ರವಿಣ್ ಭಾಯ್ ಪ್ರಶ್ನಿಸಿದರು. ಶಾಲೆಗೆ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಮುಂದೆ ಎಲ್ಲಾ ವ್ಯವಸ್ಥೆ ಬರಲಿದೆ ಎಂದು ಶಾಲೆ ಸಿಬ್ಬಂದಿ ಸಮರ್ಥಿಸಿಕೊಂಡರೂ, ಕುಡಿಯುವ ನೀರಿಗೆ ತಾತ್ಕಾಲಿಕ ವ್ಯವಸ್ಥೆಯಿಲ್ಲವೇಕೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ.