ಬೆಂಗಳೂರು: ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮಾವನ ಕೃತ್ಯದಿಂದ ನೊಂದು ಮಹಿಳಾ ಸ್‌ಟಾವೇರ್ ಇಂಜಿನಿಯರ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಚ್‌ಎಎಲ್ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಕೆ.ಆರ್.ಪುರದ ಎಸ್‌ವಿಎಸ್ ಪ್ಯಾರಡೈಸ್ ಅಪಾರ್ಟ್‌ಮೆಂಟ್ ನಿವಾಸಿ ಸುಹಾಸಿ ಎಸ್. ಸಿಂಗ್ (24) ಮೃತೆ. ಈಕೆಗೆ ಕಿರುಕುಳ ನೀಡಿದ ಆರೋಪಿ ಆರ್. ಪ್ರವೀಣ್ ಸಿಂಗ್ (42) ಎಂಬಾತನನ್ನು ಬಂಧಿಸಲಾಗಿದೆ ಎಂದು ವೈಟ್‌ಫೀಲ್ಡ್ ವಿಭಾಗ ಡಿಸಿಪಿ ಶಿವಕುಮಾರ್ ತಿಳಿಸಿದ್ದಾರೆ.
ಸುಹಾಸಿ, ತನ್ನ ತಂದೆಯ ತಂಗಿ (ಅತ್ತೆ) ಸಂಧ್ಯಾ ಸಿಂಗ್ ಮತ್ತು ಆಕೆ ಗಂಡ, ಆರೋಪಿ ಪ್ರವೀಣ್ ಸಿಂಗ್ ಜತೆಗೆ ಕೆ.ಆರ್. ಪುರದಲ್ಲಿ 6 ವರ್ಷಗಳಿಂದ ನೆಲೆಸಿದ್ದರು. ರಜೆ ದಿನಗಳಲ್ಲಿ ಆಗಾಗ ಪ್ರವಾಸಕ್ಕೆ ಹೋಗುತ್ತಿದ್ದರು. ಪ್ರವೀಣ್ ಮತ್ತು ಸುಹಾಸಿ ನಡುವೆ ಆತ್ಮೀಯತೆ ಬೆಳೆದಿತ್ತು. ಕದ್ದು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ಪೆನ್‌ಡ್ರೈವ್‌ನಲ್ಲಿ ಸೇವ್ ಮಾಡಿಕೊಂಡಿದ್ದ. ಇತ್ತೀಚೆಗೆ ಪ್ರವೀಣ್ ಪತ್ನಿಗೆ ವಿಷಯ ತಿಳಿದಿತ್ತು. ಅಲ್ಲದೆ, ಸುಹಾಸಿ ಸಹ ಪ್ರವೀಣ್ ಅಂತರ ಕಾಯ್ದುಕೊಂಡಿದ್ದಳು.
ಆದರೂ, ಆರೋಪಿ ಪ್ರವೀಣ್, ಖಾಸಗಿ ಕ್ಷಣಕ್ಕಾಗಿ ಪೀಡಿಸುತ್ತಿದ್ದ. ಜ.12ರಂದು ಐಟಿಪಿಎಲ್ ಮುಖ್ಯ ರಸ್ತೆಯಲ್ಲಿ ಇರುವ ರಾಧಾ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿ ಬರುವಂತೆ ಸುಹಾಸಿಗೆ ಪೀಡಿಸುತ್ತಿದ್ದ. ಬಾರದೆ ಇದ್ದರೆ ತಂದೆ- ತಾಯಿಗೆ ವಿಡಿಯೋ ಕಳುಹಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ನೊಂದ ಸುಹಾಸಿ, ಸಂಜೆ 6 ಗಂಟೆಯಲ್ಲಿ ದ್ವಿಚಕ್ರ ವಾಹನದಲ್ಲಿ ಕುಂದಲಹಳ್ಳಿಯ ಮೆಟ್ರೋ ನಿಲ್ದಾಣ ಬಳಿಯ ರಾಧಾ ಹೋಟೆಲ್‌ಗೆ ಹೋಗುವಾಗ ಮಾರ್ಗಮಧ್ಯೆಯಲ್ಲಿ ಪೆಟ್ರೋಲ್ ಖರೀದಿಸಿದ್ದಳು. ಪ್ರವೀಣ್ ಬಳಿ ಈ ವಿಷಯ ಇಲ್ಲಿಗೆ ಬಿಡುವಂತೆ ಬೇಡಿಕೊಂಡಿದ್ದಳು. ಆದರೂ ಸುಮ್ಮನಾಗದ ಪ್ರವೀಣ್ ವರ್ತನೆಯಿಂದ ಬೇಸತ್ತ ಸುಹಾಸಿ, ಲಾಡ್ಜ್ ರೂಮ್‌ನಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಳು.
ಗಾಬರಿಗೊಂಡ ಪ್ರವೀಣ್, ಆಕೆಯನ್ನು ರಕ್ಷಿಸುವ ಸಲುವಾಗಿ ಸ್ನಾನದ ಕೊಠಡಿಗೆ ಎಳೆದೊಯ್ದು ಶವರ್ ಆನ್ ಮಾಡಿದ್ದ. ಆ ವೇಳೆ ಆತನ ಕೈಗೂ ಸುಟ್ಟ ಗಾಯಗಳಾಗಿದ್ದವು. ಕೊನೆಗೆ ಲಾಡ್ಜ್ ಸಿಬ್ಬಂದಿಗೆ ಗೊತ್ತಾಗಿ ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಲಿಸದೆ ಅಸುನೀಗಿದ್ದಾಳೆ. ವಿಷಯ ತಿಳಿದ ಎಚ್‌ಎಎಲ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಅಲ್ಲದೆ, ಸುಹಾಸಿ ತಾಯಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.