ನ್ಯೂಸ್

ಆಗಸ್ಟ್​ ಅಂತ್ಯಕ್ಕೆ ಕರೊನಾ ನಿಗ್ರಹಿಸುತ್ತಾ ಮುಂಬೈ; ಶೇ.76ಕ್ಕೆ ಏರಿದ ಚೇತರಿಕೆ; 20 ಸಾವಿರಕ್ಕಿಳಿದ ಸಕ್ರಿಯ ಪ್ರಕರಣ

ಮುಂಬೈ: ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಗಟ್ಟುವಲ್ಲಿ ಯಶಸ್ಸು ಸಾಧಿಸುತ್ತಿರುವ ಮುಂಬೈ ಇತರ ರಾಜ್ಯಗಳಿಗೆ ಮಾದರಿ ಎನಿಸುತ್ತಿದೆ. ಇದೇ ವೇಗದಲ್ಲಿ ಚೇತರಿಕೆ ಪ್ರಮಾಣ ಹಾಗೂ ಹೊಸ ಪ್ರಕರಣಗಳಿಗೆ ಕಡಿವಾಣ ಬಿದ್ದಿದ್ದೇ ಆದಲ್ಲಿ ಆಗಸ್ಟ್​ ಅಂತ್ಯಕ್ಕೆ ಕರೊನಾ ನಿಗ್ರಹದಲ್ಲಿ ಯಶಸ್ಸು ಸಾಧಿಸಲಿದೆ.

ಈವರೆಗೆ ಒಟ್ಟಾರೆ ಮಹಾರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಂಖ್ಯೆ 4.22 ಲಕ್ಷ ಆಗಿದೆ. ಆರಂಭದಲ್ಲಿ ಮುಂಬೈನಲ್ಲಿ ರಾಜ್ಯದ ಶೇ.50ಕ್ಕೂ ಹೆಚ್ಚು ಕೋವಿಡ್​ ರೋಗಿಗಳಿದ್ದರು. ಆದರೆ, ಸದ್ಯ ಇಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 20,561 ಆಗಿದೆ.

ವಾಣಿಜ್ಯ ರಾಜಧಾನಿಯಲ್ಲಿ ಕೋವಿಡ್​ ರೋಗಿಗಳ ಚೇತರಿಕೆ ಪ್ರಮಾಣ ಶೇ.76. ಆಗಿದೆ. ಒಟ್ಟಾರೆ 87,074 ಜನರು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ 689 ಜನರು ಗುಣವಾಗಿದ್ದಾರೆ. ಇನ್ನು, ಭಾರಿ ಆತಂಕ ಮೂಡಿಸಿದ್ದ ಧಾರಾವಿ ಕೊಳೆಗೇರಿಯಲ್ಲಿ ಜುಲೈ 1ರಂದು 535 ಸಕ್ರಿಯ ಪ್ರಕರಣಗಳಿದ್ದವು. ಜುಲೈ 31ರಂದು ಈ ಸಂಖ್ಯೆ 77ಕ್ಕೆ ಇಳಿದಿದೆ.

ಕಳೆದ ಒಂದು ವಾರದಲ್ಲಿ ಹೊಸ ಸೋಂಕಿತರ ಏರಿಕೆ ಪ್ರಮಾಣ ಶೇ.0.92ಕ್ಕೆ ಕುಸಿದಿದೆ. ರೋಗಿಗಳ ಸಂಖ್ಯೆ ದ್ವಿಗುಣಗೊಳ್ಳುವ ಅವಧಿ 76 ದಿನಕ್ಕೆ ಏರಿಕೆಯಾಗಿದೆ. ಇದೇ ಅಂಕಿ-ಸಂಖ್ಯೆಗಳನ್ನು ಕಾಯ್ದುಕೊಂಡಿದ್ದೇ ಆದಲ್ಲಿ ಆಗಸ್ಟ್​ ಅಂತ್ಯಕ್ಕೆ ಕರೊನಾ ಮೇಲೆ ಮುಂಬೈ ಹಿಡಿತ ಸಾಧಿಸಲಿದೆ ಎಂದು ತಜ್ಞರು ಹೇಳಿದ್ದಾರೆ.

ಈ ಅಂಕಿ-ಸಂಖ್ಯೆಗಳನ್ನು ಬೆಂಗಳೂರಿಗೆ ಹೋಲಿಸಿ ನೋಡುವುದಾದರೆ ಆಗಸ್ಟ್​1ರಂದು ರಾಜಧಾನಿಯಲ್ಲಿ 37,760 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಡಿಸ್ಚಾರ್ಜ್​ ಆದವರ ಸಂಖ್ಯೆ 18,579. ಒಟ್ಟು ಸೋಂಕಿತರು 57,396.

ಆರಂಭದಲ್ಲಿ ಕರೊನಾದಿಂದಾಗಿ ದೇಶದಲ್ಲಿಯೇ ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿದ್ದ ಮುಂಬೈನಲ್ಲಿ ಸೋಂಕು ತೀವ್ರವಾಗಿ ಕಡಿಮೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ, ಲಸಿಕೆ ಬರುವವರೆಗೆ ಎಚ್ಚರಿಕೆಯಿಂದಲೇ ಇರಬೇಕು ಎನ್ನುತ್ತಾರೆ ಮುಂಬೈ ಪಾಲಿಕೆ ಅಧಿಕಾರಿಗಳು.