ಹತ್ಯೆಯೊ ಹನ್ಯತೆಯೊ ವಿಜಯವೋ ಪರಿಭವವೊ|
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್?||
ಕೃತ್ಯನಿರ್ಣಯ ಬಾಹ್ಯಲಾಭನಷ್ಟದಿನಲ್ಲ|
ಆತ್ಮ ಋಣವದು ಜಗಕೆ-ಮಂಕುತಿಮ್ಮ||624||
ಕೊಲ್ಲುವುದೊ, ಕೊಲ್ಲಲ್ಪಡುವುದೊ(ಹನ್ಯತೆ), ಗೆಲುವೋ, ಸೋಲೊ ಏನಾದರೂ ಸರಿ, ಕ್ಷತ್ರಿಯನು ಯುದ್ಧಾಂಗಣದಲ್ಲಿ ಸ್ವಾರ್ಥವನ್ನು ಲೆಕ್ಕ ಹಾಕುತ್ತಾನೇನು? ಹೊರಗಿನ ಲಾಭನಷ್ಟಗಳಿಂದ ತಾನು ಮಾಡುತ್ತಿರುವ ಕೃತ್ಯವು ಸರಿಯೆ ತಪ್ಪೆ ಎಂದು ನಿರ್ಣಯಿಸುವುದಲ್ಲ. ಅದು ಜಗತ್ತಿನೊಂದಿಗೆ ಇರುವ ಆತ್ಮದ ಋಣ ಎನ್ನುತ್ತದೆ ಈ ಕಗ್ಗ.
ಎರಡು ದೇಶಗಳ ನಡುವೆ ಯುದ್ಧ ನಿರ್ಣಯವಾದಾಗ ಆಯಾಯ ದೇಶದ ಸೈನಿಕರು ನಾಯಕನ ಇಚ್ಛೆಗೆ ಅನುಸಾರವಾಗಿ ಹೋರಾಟಕ್ಕೆ ಸಿದ್ಧರಾಗುತ್ತಾರೆ. ಇಲ್ಲಿ ಅವರಿಚ್ಛೆಯನ್ನು ಪ್ರಕಟಿಸುವುದಕ್ಕಾಗಲಿ, ಅದರಂತೆ ನಡೆದುಕೊಳ್ಳುವುದಕ್ಕಾಗಲಿ ಸ್ವಾತಂತ್ರ್ಯವಿಲ್ಲ. ತಮಗೆ ನಿಯೋಜಿತವಾಗಿರುವ ಕರ್ತವ್ಯವನ್ನು ಅವರು ನಿಷ್ಠೆಯಿಂದ ನಿಭಾಯಿಸಬೇಕು. ಹೀಗೆ ಕರ್ತವ್ಯ ಪಾಲನೆಯನ್ನು ಮಾಡುವಾಗ ಹಲವರನ್ನು ಕೊಲ್ಲಬೇಕಾಗಿಬರಬಹುದು ಅಥವಾ ಯಾರದೋ ಘಾತಕ್ಕೆ ಜೀವ ತೆರಬೇಕಾದೀತು. ವಿರೋಧಿಗಳನ್ನು ಕೊಂದರೆ ತನಗೇನು ಲಾಭ ಎಂದಾಗಲಿ, ವಿರೋಧಿಗಳಿಂದ ಸತ್ತರೆ ತನಗೆ ಜೀವನ ನಷ್ಟವಾಗುವದಲ್ಲ ಎಂದಾಗಲಿ ಕ್ಷಾತ್ರ ತೇಜಸ್ಸುಳ್ಳ ಸೈನಿಕನು ಯೋಚಿಸುವುದಿಲ್ಲ. ತನಗೆ ಒಪ್ಪಿಸಿದ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುವುದಷ್ಟೇ ಆತನಿಗೆ ಮುಖ್ಯವಾಗಿರುತ್ತದೆ. ತನ್ಮೂಲಕ ದೇಶದ ಋಣವು ತೀರುತ್ತದೆ.
ಹೀಗೆ ವೀರಾವೇಶದಿಂದ ನಡೆಯುವ ಯುದ್ಧದಲ್ಲಿ ಯಾವುದೋ ಒಂದು ದೇಶವು ಗೆಲ್ಲುತ್ತದೆ, ಇನ್ನೊಂದು ಸೋಲುತ್ತದೆ. ಈ ಜಯ, ಅಪಜಯಗಳಿಂದ ವೈಯಕ್ತಿಕವಾಗಿ ತನಗಾಗುವ ಲಾಭ-ನಷ್ಟಗಳ ಬಗೆಗೆ ವೀರ ಯೋಧನು ಲೆಕ್ಕ ಹಾಕುವುದಿಲ್ಲ. ದೇಶದ ಮೇಲಾಗುವ ಪರಿಣಾಮದ ಬಗೆಗೆ ಯೋಚಿಸುತ್ತಾನೆ. ದೇಶದ ಉಳಿವಿನಲ್ಲಿ ತನ್ನ ಗೆಲುವನ್ನೂ, ಅಳಿವಿನಲ್ಲಿ ತನ್ನ ಸಾವನ್ನೂ ಕಾಣುತ್ತಾನೆ. ಯಾವುದೇ ಸ್ವಾರ್ಥಾಪೇಕ್ಷೆಯಿರದೆ ಕರ್ತವ್ಯ ಮುಖನಾಗುವುದು ನಿಜ ಯೋಧನ ಆದರ್ಶ. ಯುದ್ಧ ಮಾಡುವುದು ಸೈನಿಕನಿಗೆ ಸ್ವಧರ್ಮ. ತನ್ನ ನಡೆ, ನುಡಿ, ಕಾರ್ಯ, ಚಿಂತನೆಗಳೆಲ್ಲವನ್ನೂ ಸಮರ್ಪಣಾ ಭಾವದಿಂದ ಮಾಡುವುದೆ ಸ್ವಧರ್ಮ. ಅಂತರಂಗಕ್ಕೆ ಸರಿ ಎಂದು ಪ್ರೇರಿತವಾದ ಆಚರಣೆ.
ಜೀವನವೆನ್ನುವ ಹೋರಾಟದಲ್ಲಿ ಎಲ್ಲರೂ ಯೋಧರಂತೆಯೇ ಕ್ರಿಯಾಶೀಲರಾಗಬೇಕು. ವಿಷಾದ, ನಿರಾಸೆ, ಗಾಬರಿ ಮುಂತಾದ ನಕಾರಾತ್ಮಕ ಅಂಶಗಳು ಮತ್ತೆಮತ್ತೆ ಕಾಡುತ್ತವೆ. ಕಾರಣವಿಲ್ಲದೆ ಹಗೆತನ ತೋರುವವರು, ಅಪಮಾನಿಸುವವರು, ಅನ್ಯಾಯ ಮಾಡುವವರು, ನಯ ವಂಚಕರು ಎದುರಾಗುತ್ತಾರೆ. ಅಂತೆಯೇ ಬಹಳ ಆತ್ಮೀಯವಾಗಿ, ವಿಶ್ವಾಸದಿಂದ ಒಡನಾಡುವವರು ಇಲ್ಲದಿಲ್ಲ. ಪ್ರತಿಯೊಂದು ಪರಿಸ್ಥಿತಿಯೂ ಬದುಕಿಗೆ ಅಗತ್ಯವಾದುದೇನನ್ನೋ ಕಲಿಸುತ್ತದೆ. ಲೋಕ ಸಂಸಾರವು ಮಾಯಾ ಮೋಹದ ಬಲೆಯನ್ನು ಬೀಸಿ ಸೆಳೆಯುತ್ತಿರುತ್ತದೆ. ಪೂರ್ವ ಜನುಮದ ಕರ್ಮವಾಸನೆಗಳು ಕಾರಣವಾಗಿ ವ್ಯಕ್ತಿಯ ಮತಿಯು ಮಂಕಾಗುವುದು, ಚಂಚಲವಾಗು ವುದು ಸಹಜ. ಇದರಿಂದಾಗಿ ಮತ್ತೆಮತ್ತೆ ಸಮಸ್ಯೆ, ಸವಾಲುಗಳನ್ನು ಎದುರಿಸುವುದು, ನೋವು- ನಲಿವುಗಳನ್ನು ಅನುಭವಿಸುವುದು, ಮತ್ಸರ-ದ್ವೇಷಕ್ಕೆ ಸಿಲುಕಿ ಕಂಗೆಡುವುದು ಸಾಮಾನ್ಯ.
ಧರ್ಮಸಂಕಟದ ಪರಿಸ್ಥಿತಿಗಳು, ಸಂದಿಗ್ಧ, ದ್ವಂದ್ವಗಳು ವ್ಯಕ್ತಿಯ ಮನೋರಂಗದಲ್ಲಿ ಕಾದಾಡುತ್ತಿರುತ್ತವೆ. ವಿವೇಕಿಯಾದವನು ತನ್ನ ಆಂತರ್ಯಕ್ಕೆ ಸೂಕ್ತವೆನ್ನಿಸಿದ್ದನ್ನು ಅನುಸರಿಸುತ್ತಾನೆ. ಹಾಗಿಲ್ಲದೆ ಹೋದಾಗ ಮತ್ತೆಮತ್ತೆ ಬದುಕಿನ ಹೋರಾಟಕ್ಕೆ ಸಿಲುಕುವುದು, ನೋವುಣ್ಣುವುದು, ತಿದ್ದಿಕೊಂಡು ಮರಳಿ ಗೆಲುವಿಗಾಗಿ ಯತ್ನಿಸುವುದು ಬದುಕಿನ ರೀತಿಯಾಗಿದೆ. ಈ ಹೋರಾಟದಲ್ಲಿ ಲೋಕ ಋಣವೊಂದಷ್ಟು ಕಳಚಿಕೊಳ್ಳುತ್ತದೆ, ಇನ್ನೊಂದಷ್ಟು ಸೇರಿಕೊಳ್ಳಲೂಬಹುದು.
ಜೀವನ ಗತಿಯನ್ನು ಯಾರೂ ನಿರ್ಧರಿಸುವುದಕ್ಕೆ ಸಾಧ್ಯವಿಲ್ಲ, ನಿಯಂತ್ರಿಸುವುದಕ್ಕಾಗುವುದಿಲ್ಲ. ಋಣದ ಎಳೆಯನ್ನು, ಕರ್ಮಶೇಷದ ಹೊರೆಯನ್ನು ಹೊತ್ತು ಬರುವ ಆತ್ಮಕ್ಕೆ ಜೀವದಶೆಯಲ್ಲಿ ಜವಾಬ್ದಾರಿ, ಪಾಪ-ಪುಣ್ಯ, ಧರ್ವಧರ್ಮಗಳಿವೆ.
ತನೊಗೊಪ್ಪಿಸಿದ ಕರ್ಮವನ್ನು ಮಾಡಿದಾಗ ನಾನು ಮಾಡಿದೆನೆಂಬ ಜಂಭವಾಗಲಿ, ನನ್ನಿಂದ ಹೀಗಾಯಿತು ಎಂಬ ಪಶ್ಚಾತ್ತಾಪವಾಗಲಿ ಇರಕೂಡದು. ಮಾಡುವ ಕೆಲಸ, ನಿರ್ವಹಿಸುವ ಹೊಣೆಗಾರಿಕೆಗಳು ದೇವರಿಗಾಗಿ, ಆತನೆ ಮಾಡಿಸುತ್ತಿದ್ದಾನೆ ಎಂಬ ಸರ್ವಸಮರ್ಪಣಾ ಭಾವವಿದ್ದರೆ ಬದುಕಿನ ಹೋರಾಟವು ಆಟವೆಂಬಂತೆ ಭಾಸವಾಗುತ್ತದೆ. ಸಂಪರ್ಕಕ್ಕೆ ಬರುವ ಎಲ್ಲಾ ಜೀವಗಳು ಕೂಡ ಋಣಾನುಬಂಧದ ಕಾರಣದಿಂದ ಜೋಡಿಸಿಕೊಳ್ಳುತ್ತವೆ ಎನ್ನುವುದು ಅರ್ಥವಾದಾಗ ನೋಯಿಸಿದವರನ್ನು ಕ್ಷಮಿಸಲು ಸಾಧ್ಯವಾಗುತ್ತದೆ. ಆಗ ಯಾವ ಋಣವೂ ಉಳಿಯುವುದಿಲ್ಲ, ಪಾಪಭೀತಿಯೂ ಕಾಡುವುದಿಲ್ಲ.
ಹೀಗೆ ಜೀವಿತದಲ್ಲಿ ಲಭ್ಯವಾಗುವ ಸುಖ-ಸಂತೋಷದ ಸಂದರ್ಭಗಳೆಲ್ಲವೂ ಈಶ್ವರಾನುಗ್ರಹ, ದುಃಖ, ಕಷ್ಟಗಳ ಸನ್ನಿವೇಶಗಳು ಜೀವ ಶಿಕ್ಷಣ ಎನ್ನುವುದನ್ನು ಮನಗಾಣಬೇಕು. ಜಗದೊಂದಿಗೆ ಬೆಸೆದುಕೊಂಡಿರುವ ಋಣದ ಎಳೆಗಳಿಂದ ಬಿಡಿಸಿಕೊಂಡು, ವ್ಯಾಮೋಹದ ಮುಸುಕನ್ನು ಕೊಡವಿಕೊಂಡು ಔನ್ನತ್ಯಕ್ಕೇರುವುದಕ್ಕೆ ಲೋಕಜೀವಿತವು ಸದವಕಾಶವನ್ನು ನೀಡುತ್ತದೆ. ಈ ಅರಿವು ಸ್ಪಷ್ಟವಾದರೆ ಬದುಕಿನ ಹೋರಾಟವು ಮೇಲೇರುವ ಮೆಟ್ಟಿಲಾಗುತ್ತದೆ.
(ಲೇಖಕರು ಉಪನ್ಯಾಸಕರು, ಕವಯಿತ್ರಿ, ಪ್ರತಿಕ್ರಿಯಿಸಿ: vvsudina@gmail.com, kaviadoor@gmail.com)