ನ್ಯೂಸ್

ಆಭರಣ ಪ್ರಿಯರಿಗೆ ಖುಷಿ, ಆರೋಗ್ಯಕ್ಕೂ ಭಾಗ್ಯ

ನವದೆಹಲಿ: ಇನ್​ಪುಟ್ ವೆಚ್ಚ ಕಡಿತಗೊಳಿಸಲು, ಮೌಲ್ಯವರ್ಧನೆ ಹೆಚ್ಚಿಸಲು, ರಫ್ತು ಸ್ಪರ್ಧಾತ್ಮಕತೆ ಉತ್ತೇಜಿಸಲು ಮತ್ತು ದೇಶೀಯ ಉತ್ಪಾದನೆಯನ್ನು ಪೋ›ತ್ಸಾಹಿಸುವ ಸಲುವಾಗಿ ಚಿನ್ನ, ಬೆಳ್ಳಿ, ಪ್ರಮುಖ ಖನಿಜಗಳು, ಮೊಬೈಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಸೀಮಾ ಸುಂಕವನ್ನು ಕೇಂದ್ರ ಕಡಿತಗೊಳಿಸಿದೆ.

ಹಣಕಾಸು ಬಜೆಟ್​ನಲ್ಲಿ ಈ ಅಂಶಗಳನ್ನು ಪ್ರಕಟಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಡಲ ಆಹಾರೋತ್ಪನ್ನಗಳಾದ ಸೀಗಡಿ ಮತ್ತು ಸೀಗಡಿ ಆಹಾರ, ಫಿಶ್ ಫೀಡ್, ಲಿಪಿಡ್ ಆಯಿಲ್, ಕ್ಯಾನ್ಸರ್ ಔಷಧ, ಬೆಳ್ಳಿ ಮತ್ತು ಪ್ಲಾಟಿನಂನಂತಹ ಇತರೆ ಅಮೂಲ್ಯ ಲೋಹಗಳು, ಜವಳಿ, ಉಕ್ಕು, ತಾಮ್ರ, ಸರಕುಗಳು, ವೈದ್ಯಕೀಯ ಉಪಕರಣಗಳು ಮತ್ತು ಚರ್ಮ ಉದ್ಯಮದ ವಸ್ತುಗಳ ಮೇಲಿನ ಸುಂಕವನ್ನು ಕಡಿತಗೊಳಿಸಲಾಗಿದೆ.

ಬೆಲೆಬಾಳುವ ಲೋಹಗಳ ನಾಣ್ಯಗಳು, ಚಿನ್ನ/ಬೆಳ್ಳಿ ಉತ್ಪನ್ನ ಮತ್ತು ಚಿನ್ನ, ಬೆಳ್ಳಿಯ ಬಾರ್​ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 15ರಿಂದ ಶೇಕಡಾ 6ಕ್ಕೆ ಇಳಿಸಲಾಗಿದೆ. ಚಿನ್ನ ಮತ್ತು ಬೆಳ್ಳಿಯ ಗಟ್ಟಿಗಳಿಗೆ ಸುಂಕವನ್ನು ಶೇ. 14.35ರಿಂದ ಶೇ. 5.35 ಕ್ಕೆ ಕಡಿತಗೊಳಿಸಲಾಗಿದೆ. ರಫ್ತು ಮತ್ತು ಉತ್ಪಾದನೆ ಹೆಚ್ಚಿಸಲು ಲೋಹಗಳ ಮೇಲಿನ ಸುಂಕ ಕಡಿತಗೊಳಿಸಬೇಕೆಂದು ರತ್ನ ಮತ್ತು ಆಭರಣ ರಫ್ತುದಾರರು ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಇದನ್ನು ಕೇಂದ್ರ ಪರಿಗಣಿಸಿದ್ದು, ಈ ಕ್ಷೇತ್ರದ ಹಿತ ಕಾಯಲು ಮುಂದಾಗಿದೆ. ಸುಮಾರು ರೂ. 60,000 ಕೋಟಿ ಗೆ ತಲುಪಿರುವ ಸಮುದ್ರಾಹಾರ ರಫ್ತುಗಳ ಉತ್ತೇಜನಕ್ಕೆ ಪಾಲಿಚೇಟ್ ಹುಳುಗಳು, ಸೀಗಡಿ ಮತ್ತು ಮೀನಿನ ಆಹಾರದ ಮೇಲೆ ಸುಂಕ ಕಡಿತವನ್ನು ಶೇಕಡಾ 5ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ ಎಂದ ಸೀತಾರಾಮನ್, ಚರ್ಮ ಮತ್ತು ಜವಳಿ ವಲಯಗಳಲ್ಲಿ ರಫ್ತುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಚಿನ್ನದ ಬೆಲೆ ಭಾರಿ ಇಳಿಕೆ

ನವದೆಹಲಿ: ಚಿನ್ನ-ಬೆಳ್ಳಿ ಮೇಲಿನ ಸುಂಕವನ್ನು ಕೇಂದ್ರ ಬಜೆಟ್​ನಲ್ಲಿ ಶೇ. 6ಕ್ಕೆ ಇಳಿಸಿದ್ದರಿಂದ ದೇಶೀ ಮಾರುಕಟ್ಟೆಯಲ್ಲಿ ಮಂಗಳವಾರ ಚಿನ್ನದ ಬೆಲೆ 10 ಗ್ರಾಂಗೆ 3350 ರೂ.ನಷ್ಟು ಕುಸಿತ ಕಂಡು 72,300 ರೂ.ಗೆ ತಲುಪಿತು. ಸೋಮವಾರ ಇದರ ಬೆಲೆ 75,650 ರೂ. ಇತ್ತು. ಬೆಳ್ಳಿ ಬೆಲೆ ಕೂಡ ಮಂಗಳವಾರ ಕೆಜಿಗೆ 3500 ರೂ.ನಷ್ಟು ಇಳಿಕೆಯಾಗಿ 87,500 ರೂ.ಗೆ ತಲುಪಿತು. ಹಿಂದಿನ ದಿನ ಇದರ ಬೆಲೆ 91 ಸಾವಿರ ರೂ. ಇತ್ತು.

ಕ್ಯಾನ್ಸರ್ ಔಷಧಗಳಿಗೂ ವಿನಾಯಿತಿ: ಮೂರು ಕ್ಯಾನ್ಸರ್ ಔಷಧಗಳಿಗೆ ಕಸ್ಟಮ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಪ್ರಕಟಿಸಿದೆ. ಕ್ಯಾನ್ಸರ್ ಔಷಧಗಳಾದ ಟ್ರಾಸ್ಟುಜುಮಾಬ್ ಡೆರಕ್ಸೆ್ಟಕಾನ್, ಒಸಿಮೆರ್ಟಿನಿಬ್ ಮತ್ತು ಡುರ್ವಾಲುಮಾಬ್ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 10ರಿಂದ ಶೂನ್ಯಕ್ಕೆ ಕಡಿತಗೊಳಿಸಲಾಗುವುದು ಎಂದು ಹಣಕಾಸು ಬಜೆಟ್​ನಲ್ಲಿ ತಿಳಿಸಲಾಗಿದೆ. ಎಕ್ಸ್-ರೇ ಟ್ಯೂಬ್​ಗಳು ಮತ್ತು ಫ್ಲಾಟ್ ಪ್ಯಾನೆಲ್ ಡಿಟೆಕ್ಟರ್​ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕದಲ್ಲಿ ಬದಲಾವಣೆಗಳನ್ನು ಘೊಷಿಸಿರುವ ಸಚಿವರು, ಈ ಕ್ರಮಗಳನ್ನು ದೇಶೀಯ ಉತ್ಪಾದನೆಯನ್ನು ಬೆಂಬಲಿಸುವ ಸಲುವಾಗಿ ಮಾಡಲಾಗಿದೆ. ಮೇಲಾಗಿ ಸಾಮಾನ್ಯ ಜನರು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನೂ ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಸುಂಕ ಹೆಚ್ಚಳ: ದೇಶೀಯ ತಾಂತ್ರಿಕ ಉತ್ಪನ್ನಗಳ ಉತ್ಪಾದನೆ ಉತ್ತೇಜಿಸಲು ಕೇಂದ್ರ ಸರ್ಕಾರ ಮದರ್​ಬೋರ್ಡ್​ಗಳ ಮೇಲಿನ ಆಮದು ಸುಂಕವನ್ನು ಶೇಕಡಾ 5ರಷ್ಟು ಹೆಚ್ಚಿಸಲು ತೀರ್ವನಿಸಿದೆ. ಈ ಬಗ್ಗೆ ಬಜೆಟ್​ನಲ್ಲಿ ಪ್ರಸ್ತಾಪಿಸಿರುವ ಸಚಿವರು, ನಿರ್ದಿಷ್ಟ ಟೆಲಿಕಾಂ ಉಪಕರಣಗಳ ಮೂಲ ಕಸ್ಟಮ್ಸ್ ಸುಂಕವನ್ನು 10ರಿಂದ 15 ಪ್ರತಿಶತಕ್ಕೆ ಹೆಚ್ಚಿಸಲು ತೀರ್ವನಿಸಲಾಗಿದೆ ಎಂದು ಹೇಳಿದ್ದಾರೆ. ಪರಮಾಣು ಶಕ್ತಿ, ನವೀಕರಿಸಬಹುದಾದ ಇಂಧನ, ಬಾಹ್ಯಾಕಾಶ, ರಕ್ಷಣೆ, ದೂರಸಂಪರ್ಕ ಮತ್ತು ಹೈಟೆಕ್ ಎಲೆಕ್ಟ್ರಾನಿಕ್ಸ್​ನಂತಹ ಕ್ಷೇತ್ರಗಳಿಗೆ ಲಿಥಿಯಂ, ತಾಮ್ರ ಸೇರಿ 25 ಖನಿಜಗಳಿಗೆ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲು ಸಚಿವರು ಪ್ರಸ್ತಾಪಿಸಿದ್ದಾರೆ.

ಬಿಹಾರ, ಆಂಧ್ರಕ್ಕೆ ವಿಶೇಷ ಕೊಡುಗೆ

ನವದೆಹಲಿ: ಎನ್​ಡಿಎ ಮಿತ್ರಪಕ್ಷಗಳು ಅಧಿಕಾರದಲ್ಲಿರುವ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಬಜೆಟ್​ನಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ. ಬಿಹಾರಕ್ಕೆ 26 ಸಾವಿರ ಕೋಟಿ ರೂ. ಮತ್ತು ಆಂಧ್ರಕ್ಕೆ 15 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಬಿಹಾರದಲ್ಲಿ ವಿಮಾನ ನಿಲ್ದಾಣ, ಹೆದ್ದಾರಿ, ವಿದ್ಯುತ್, ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ಹಣ ಒದಗಿಸಲಾಗುತ್ತಿದೆ. ನೆರೆಹಾವಳಿ ಸಮಸ್ಯೆ ಪರಿಹರಿಸುವುದಕ್ಕೆ 11,500 ಕೋಟಿ ರೂ. ನೀಡಲೂ ಕೇಂದ್ರ ಮುಂದಾಗಿದೆ.ಇದೇ ವೇಳೆ, ಆಂಧ್ರದ ರಾಜಧಾನಿಯಾಗಿ ಅಮರಾವತಿಯ ಅಭಿವೃದ್ಧಿ, ಪೋಲಾವರಂ ನೀರಾವರಿ ಯೋಜನೆ ತ್ವರಿತ ಅನುಷ್ಠಾನ, ಹಿಂದುಳಿದ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ಕಾಗಿ ಆಂಧ್ರಕ್ಕೆ ಹೆಚ್ಚಿನ ಹಣವನ್ನು ಬಜೆಟ್​ನಲ್ಲಿ ಪ್ರಕಟಿಸಲಾಗಿದೆ.

ಮೊಬೈಲ್, ಬಿಡಿಭಾಗಗಳಿಗೂ ಅನ್ವಯ: ಕೇಂದ್ರ ಬಜೆಟ್​ನಲ್ಲಿ ಮೊಬೈಲ್ ಫೋನ್, ಚಾರ್ಜರ್ ಮತ್ತು ಹ್ಯಾಂಡ್​ಸೆಟ್​ಗಳ ತಯಾರಿಕೆಗೆ ಬಳಸುವ ಕೆಲವು ಉತ್ಪನ್ನಗಳ ಮೇಲಿನ ಆಮದು ಸುಂಕ ಕಡಿತಗೊಳಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಕಳೆದ ಆರು ವರ್ಷಗಳಲ್ಲಿ ದೇಶೀಯ ಉತ್ಪಾದನೆಯಲ್ಲಿ ಮೂರು ಪಟ್ಟು ಹೆಚ್ಚಳ ಮತ್ತು ಮೊಬೈಲ್ ಫೋನ್​ಗಳ ರಫ್ತಿನಲ್ಲಿ ಸುಮಾರು 100ಪಟ್ಟು ಹೆಚ್ಚಳದೊಂದಿಗೆ ಭಾರತೀಯ ಮೊಬೈಲ್ ಫೋನ್ ಉದ್ಯಮ ಪ್ರಗತಿಪಥದಲ್ಲಿದೆ ಎಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗ್ರಾಹಕರ ಹಿತಾಸಕ್ತಿಯಿಂದ, ನಾನು ಮೊಬೈಲ್ ಫೋನ್, ಮೊಬೈಲ್ ಪಿಸಿಬಿಎ ಮತ್ತು ಮೊಬೈಲ್ ಚಾರ್ಜರ್​ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕ ಶೇಕಡಾ 15ಕ್ಕೆ ಇಳಿಸಲಾಗುವುದು ಎಂದು ತಿಳಿಸಿದ್ದಾರೆ.
ಮಹತ್ವಾಕಾಂಕ್ಷಿ ಸೂರ್ಯಘರ್ ಯೋಜನೆ: ಈ ವರ್ಷಾರಂಭದಿಂದ ಜಾರಿಗೆ ಬಂದಿರುವ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಕುರಿತು ಮಾಹಿತಿ ನೀಡಿರುವ ಸಚಿವೆ, ಈ ಯೋಜನೆಗೆ 1.28 ಕೋಟಿಗೂ ಹೆಚ್ಚು ನೋಂದಣಿಗಳು ಮತ್ತು 14 ಲಕ್ಷ ಅರ್ಜಿಗಳು ಬರುವ ಮೂಲಕ ಜನರಿಂದ ಭಾರೀ ಸ್ಪಂದನೆ ಸಿಕ್ಕಿದೆ. ಇದನ್ನು ಮತ್ತಷ್ಟು ಪೋ›ತ್ಸಾಹಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಹೆಚ್ಚಿನ ದಕ್ಷತೆಯೊಂದಿಗೆ ಸುಧಾರಿತ ಅಲ್ಟ್ರಾ ಸೂಪರ್ ಕ್ರಿಟಿಕಲ್ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸ್ಥಳೀಯ ತಂತ್ರಜ್ಞಾನದ ಅಭಿವೃದ್ಧಿ ಪೂರ್ಣಗೊಂಡಿದೆ. ನ್ಯಾಷನಲ್ ಥರ್ಮಲ್ ಪವರ್ ಕಾರ್ಪೆರೇಷನ್ (ಎನ್​ಟಿಪಿಸಿ) ಮತ್ತು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್​ಇಎಲ್) ಮೂಲಕ ಪೂರ್ಣ ಪ್ರಮಾಣದ 800 ಮೆಗಾವ್ಯಾಟ್ ವಾಣಿಜ್ಯ ಸ್ಥಾವರ ಸ್ಥಾಪಿಸಲಾಗುವುದು. ಇದಕ್ಕೆ ಸರ್ಕಾರ ಅಗತ್ಯ ಹಣಕಾಸಿನ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ.