ಹನೂರು: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲೇ ಹನೂರು ಶೈಕ್ಷಣಿಕ ವಲಯ ಪ್ರಥಮ ಸ್ಥಾನ ಪಡೆಯುವುದರ ಜತೆಗೆ ರಾಜ್ಯದಲ್ಲೂ ಉತ್ತಮ ಸ್ಥಾನ ಗಳಿಸಬೇಕು. ಆದ್ದರಿಂದ ಪ್ರತಿಯೊಬ್ಬರೂ ಓದಿನ ಕಡೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.
ತಾಲೂಕಿನ ಲೊಕ್ಕನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತಾ ಸಂಬಂಧ ಬುಧವಾರ ಆಯೋಜಿಸಿದ್ದ ಭರವಸೆ ತುಂಬುದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರು, ಮೈಸೂರು ಹಾಗೂ ಇನ್ನಿತರ ಜಿಲ್ಲೆಗಳಿಗೆ ಹೋಲಿಸಿದರೆ ಚಾಮರಾಜನಗರ ಜಿಲ್ಲೆ ಅದರಲ್ಲೂ ಹನೂರು ಭಾಗವು ಹೆಚ್ಚು ನೈಸರ್ಗಿಕ ಸಂಪತ್ತಿನಿಂದ ಕೂಡಿದೆ. ಇದರಿಂದ ಮಕ್ಕಳಲ್ಲಿ ಬುದ್ಧಿಶಕ್ತಿಯು ಹೆಚ್ಚಿದ್ದು, ಈಗಾಗಲೇ ಶಿಕ್ಷಕರು ಹಾಗೂ ಪಾಲಕರ ಮಾರ್ಗದರ್ಶನದಿಂದ ಎಸ್ಸೆಸ್ಸೆಲ್ಸಿಯಲ್ಲಿ ಪಡೆದಿರುವ ಫಲಿತಾಂಶವೇ ಸಾಕ್ಷಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯನ್ನು ಹೊಂದುವುದರ ಮೂಲಕ ಓದಿನ ಕಡೆ ಹೆಚ್ಚಿನ ಗಮನಹರಿಸಿ ಉತ್ತಮ ಅಂಕ ಗಳಿಸಬೇಕು ಎಂದು ಸಲಹೆ ನೀಡಿದರು.
ಇದು ಮುಂದಿನ ಶಿಕ್ಷಣಕ್ಕೆ ಸಹಕಾರಿಯಾಗಲಿದೆ. ಜತೆಗೆ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಈ ದಿಸೆಯಲ್ಲಿ ಶಿಕ್ಷಕರು ಹಾಗೂ ಪಾಲಕರ ಮಾರ್ಗದರ್ಶನ ಪಡೆಯುವುದರ ಜತೆಗೆ ವೇಳಾಪಟ್ಟಿಯನ್ನು ತಯಾರಿಸಿಕೊಂಡು ಪರೀಕ್ಷೆಗೆ ಸಜ್ಜಾಗಬೇಕು. ಜತೆಗೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ನಿರ್ದಿಷ್ಟ ಗುರಿ ಸಾಧನೆಗೆ ಸ್ಫೂರ್ತಿದಾಯಕವಾಗಲಿದೆ. ಇದರಿಂದ ಶೈಕ್ಷಣಿಕ ವಲಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ನಿರ್ದಿಷ್ಟ ಗುರಿ ಹೊಂದಿ: ಹನೂರು ಭಾಗವು ಹೆಚ್ಚು ಕಾಡಂಚಿನಿಂದ ಕೂಡಿದ್ದು, ಇಲ್ಲಿನ ಜನರು ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ. ಜತೆಗೆ ಸರ್ಕಾರದ ಸವಲತ್ತುಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಈ ದಿಸೆಯಲ್ಲಿ ಜನರಿಗೆ ಉತ್ತಮ ಸೇವೆ ನೀಡುವುದರ ಜತೆಗೆ ಕ್ಷೇತ್ರದ ಅಭಿವೃದ್ಧಿ ಹಾಗೂ ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ನಾನು ದೃಢ ನಿರ್ಧಾರದೊಂದಿಗೆ ನಿರ್ದಿಷ್ಟ ಗುರಿಯನ್ನು ಹೊಂದಿ ಪ್ರಾಮಾಣಿಕವಾಗಿ ಶ್ರಮಿಸಿದೆ. ಇದರ ಫಲವಾಗಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದೇನೆ. ಆದ್ದರಿಂದ ಗುರಿ ಹಾಗೂ ಪ್ರಾಮಾಣಿಕವಾಗಿ ಶ್ರಮಿಸಿದರೆ ಎಂದಿಗೂ ಯಶಸ್ಸು ಲಭಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯನ್ನು ಹೊಂದಬೇಕು ಎಂದು ಶಾಸಕರು ಸಲಹೆ ನೀಡಿದರು.
ಬಿಇಒ ಎಂ.ಶಿವರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ಶಿಕ್ಷಕರಿಂದ ಆಯಾ ಭಾಷೆಯ ಪರೀಕ್ಷಾ ಕ್ರಮ, ಸ್ವಮೌಲ್ಯಮಾಪನ, ಹೆಚ್ಚು ಅಂಕ ಗಳಿಸುವ ರೀತಿ, ಓದುವ ಕ್ರಮ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಸಂಬಂಧ ಮಕ್ಕಳಿಗೆ ತಿಳಿಸಿ ಕೊಡಲಾಯಿತು. ಬಳಿಕ ಬಂಡಳ್ಳಿಯ ಶಾದಿ ಮಹಲ್‌ನಲ್ಲೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಭರವಸೆ ತುಂಬುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ, ಶಿಕ್ಷಣ ಸಂಯೋಜಕರಾದ ಕಿರಣ್‌ಕುಮಾರ್, ಚಿನ್ನಪ್ಪಯ್ಯ, ಗ್ರಾಪಂ ಅಧ್ಯಕ್ಷ ನಾಗೇಶ್, ಪಿಡಿಒ ರಘುನಾಥ್, ಪ್ರಾಂಶುಪಾಲ ಜಯಪ್ರಕಾಶ್, ಮುಖ್ಯ ಶಿಕ್ಷಕ ಚುಂಚಯ್ಯ, ಸಿಆರ್‌ಪಿ, ಬಿಆರ್‌ಪಿಗಳು ಹಾಗೂ ವಿವಿಧ ಶಾಲೆಯ ಶಿಕ್ಷಕರು ಇದ್ದರು.