ಆಂಜನೇಯ ಎಂದರೆ ಕೇಳದವರಾರು? ಬಹುತೇಕ ಊರುಗಳಲ್ಲಿ ಆಂಜನೇಯ ದೇವಸ್ಥಾನ ಇದ್ದೇ ಇರುತ್ತದೆ. ಶ್ರೀರಾಮನ ಪರಮ ಭಕ್ತನಾಗಿರುವ ಹನುಮಂತನು ಚೈತ್ರಮಾಸದ ಹುಣ್ಣಿಮೆಯಂದು ಅವತಾರ ತಾಳಿದನು. ಹೀಗಾಗಿ ಈ ದಿನವನ್ನು ಭಾರತದಾದ್ಯಂತ ಶ್ರದ್ಧಾಭಕ್ತಿಯಿಂದ ಹನುಮ ಜಯಂತಿ ಎಂದು ಆಚರಿಸಲಾಗುತ್ತದೆ.
ಕೇಸರಿಯೆಂಬ ವಾನರರಾಜನ ಅರಸಿಯಾದ ಅಂಜನಾದೇವಿ ಎಂಬ ಅಪ್ಸರೆಯಲ್ಲಿ ವಾಯುವಿನ ಅಂಶದಿಂದ ಹನುಮಂತ ಜನ್ಮತಾಳಿದನೆಂದು ಪುರಾಣಗಳಲ್ಲಿ ಹೇಳಲಾಗಿದೆ. ಅಂಜನಾದೇವಿಯು ಪೂರ್ವಜನ್ಮದಲ್ಲಿ ಪುಂಜಿಕಸ್ಥಲೆ ಎಂಬ ಅಪ್ಸರೆಯಾಗಿದ್ದಳು. ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲೊಬ್ಬನಾದ ಹನುಮನಿಗೆ ವಾಯುಪುತ್ರ, ಅಂಜನಾತನಯ, ಆಂಜನೇಯ, ಹನುಮಂತ, ಮಾರುತಿ, ರಾಮಭಕ್ತ, ಕೇಸರಿನಂದನ, ವಾನರಶ್ರೇಷ್ಠ ಹೀಗೆ ನಾನಾ ಹೆಸರುಗಳಿವೆ. ಹನುಮಂತನನ್ನು ಶಿವನ ಅವತಾರ ಎಂದು ಕೂಡ ಹೇಳಲಾಗುತ್ತದೆ.
ತ್ರೇತಾಯುಗದಲ್ಲಿ ಮಹಾವಿಷ್ಣುವು ಭೂಮಿಯಲ್ಲಿ ಶ್ರೀರಾಮನಾಗಿ ಜನಿಸಿದನಷ್ಟೇ. ಆ ಬಳಿಕ, ಶಿವನು ತಾನು ರಾಮನ ಬಳಿ ಹೋಗುವುದಾಗಿ ಪಾರ್ವತಿಯ ಬಳಿ ಹೇಳಿದ. ಅದಕ್ಕೆ ಪತಿಯನ್ನು ಬಿಟ್ಟಿರಲಾಗದು ಎಂದು ಪಾರ್ವತಿದೇವಿ ಅಳಲನ್ನು ತೋಡಿಕೊಂಡಳು. ಅದಕ್ಕೆ ಶಿವನು - ಧರ್ಮಸಂಸ್ಥಾಪನೆಗಾಗಿ ಶ್ರೀರಾಮ ಅವತಾರವೆತ್ತಿದ್ದು, ಮುಂದೆ ಅವನಿಗೆ ಬಹಳ ಸಂಕಷ್ಟಗಳು ಎದುರಾಗಲಿವೆ. ಹೀಗಾಗಿ ಅವನ ಸಹಾಯಕ್ಕೆ ಇರಬೇಕು ಎಂದು ಪಾರ್ವತಿಗೆ ಸಮಾಧಾನಪಡಿಸಿ ಹನುಮನಾಗಿ ಜನ್ಮ ತಾಳಿದ.
ಹನುಮಂತನು ಮಗುವಾಗಿದ್ದಾಗ ಸೂರ್ಯನನ್ನು ಹಿಡಿದು ಬಾಯೊಳಗೆ ಅಡಗಿಸಿಕೊಂಡಿದ್ದರಿಂದ ಕತ್ತಲೆ ಉಂಟಾಯಿತು. ಇದರಿಂದ ಸಿಟ್ಟಾದ ಇಂದ್ರನು ವಜ್ರಾಯುಧದಿಂದ ಪ್ರಹಾರ ಮಾಡಿದ್ದರಿಂದ ಅವನ ಹನು (ದವಡೆ) ದೊಡ್ಡದಾಯಿತು. ಹೀಗಾಗಿ ಅವನಿಗೆ ಹನುಮಂತ ಎಂಬ ಹೆಸರು ಬಂತು.
ಹುಟ್ಟಿದವರೆಲ್ಲ ಒಂದಲ್ಲ ಒಂದು ದಿನ ಸಾಯಲೇಬೇಕು. ಆದರೆ ಸಾಯದೆ ಚಿರಂಜೀವಿಗಳಾಗಿರುವ ಏಳು ಜನರಲ್ಲಿ ಹನುಂತನೂ ಒಬ್ಬ. ಸೀತೆಯನ್ನು ಹುಡುಕುತ್ತ ಲಂಕೆಗೆ ಹೋದ ಹನುಮನು ಎಷ್ಟು ಹುಡುಕಾಡಿದರೂ ಆಕೆ ಕಾಣದಿದ್ದಾಗ ಸಾವಿಗೀಡಾಗಿರಬಹುದೆಂದು ಭಾವಿಸಿದ. ಆದರೆ ಶ್ರೀರಾಮನನ್ನು ಸ್ಮರಿಸಿಕೊಂಡು ಮತ್ತೆ ಹುಡುಕಿದಾದ ಸೀತೆ ಅಶೋಕವನದಲ್ಲಿ ಕಾಣಿಸಿದಳು. ರಾಮದೂತನಾಗಿ ಬಂದ ಅವನನ್ನು ಕಂಡು ಸಂತೋಷಗೊಂಡ ಸೀತೆ ಅಮರತ್ವದ ವರವನ್ನು ನೀಡಿದಳು.
ಶ್ರೀರಾಮ ತನ್ನ ಅವತಾರ ಮುಗಿಸುವ ಮಾತನಾಡಿದಾಗ ಹನುಮಂತ ಸೀತೆಯ ಬಳಿ, ‘ರಾಮನಿಲ್ಲದ ಕಡೆ ನಾನು ಹೇಗಿರಲಿ? ಅಮರತ್ವದ ವರವನ್ನು ಹಿಂದಕ್ಕೆ ಪಡೆದುಕೊ’ ಎಂದು ಪ್ರಾರ್ಥಿಸಿದ್ದ. ಆದರೆ ಅದಕ್ಕೊಪ್ಪದ ಸೀತೆ, ‘ನೀನು ಸ್ಮರಿಸಿದಾಗ ರಾಮ ನಿನ್ನ ಮುಂದಿರುತ್ತಾನೆ’ ಎಂಬ ವರ ನೀಡಿದಳು. ‘ಕಲಿಯುಗದಲ್ಲಿ ಭಕ್ತರನ್ನು ಕಾಪಾಡಲು ನಿನ್ನ ಆವಶ್ಯಕತೆ ಇದೆ. ಹೀಗಾಗಿಯೇ ನಿನಗೆ ಅಮರತ್ವದ ವರ ನೀಡಲಾಗಿದೆ’ ಎಂದು ಶ್ರೀರಾಮನೂ ಹೇಳಿದ. ಹೀಗಾಗಿ ಹನುಮಂತ ರಾಮನಾಮ ಸ್ಮರಿಸುತ್ತ ಭಕ್ತರ ಉದ್ಧಾರ ಮಾಡುತ್ತ ಭೂಮಿಯಲ್ಲೇ ಇದ್ದಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಈ ದಿನ ಸುಂದರಕಾಂಡ, ಹನುಮಾನ್ ಚಾಲೀಸಾ ಪಾರಾಯಣ ಮಾಡುತ್ತಾರೆ. ಈ ದಿನ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡುವುದು ಉತ್ತಮ. ಶನಿಗ್ರಹದ ದೋಷ ಹೆಚ್ಚಾಗಿ ಇರುವವರು ಹನುಮನನ್ನು ಪೂಜಿಸಲು ಇದು ಒಳ್ಳೆಯ ದಿನ. ಆಂಜನೇಯನ ದೇವಸ್ಥಾನದಲ್ಲಿ ಎಳ್ಳೆಣ್ಣೆಯ ದೀಪ ಹಚ್ಚಿದರೆ ಅವರ ಕಷ್ಟಗಳು ಮತ್ತು ದೋಷಗಳು ದೂರವಾಗುತ್ತವೆ.