ನ್ಯೂಸ್

ಗುರುಕುಲ ಶಿಕ್ಷಣ ವ್ಯವಸ್ಥೆ ಪುನರುತ್ಥಾನಗೊಳ್ಳಬೇಕು; ಮಾರುತಿ ಶಿಡ್ಲಾಪುರ

ರಾಣೆಬೆನ್ನೂರ: ಗುರುವನು ನಂಬಿ ನಮಿಸಿ ಉಪದೇಶ ಸ್ವೀಕರಿಸಿ ಬಾಳು ಹಸನು ಮಾಡಿಕೊಳ್ಳುವ ಇಚ್ಛಾಶಕ್ತಿಯ ವಿದ್ಯಾರ್ಥಿ ಸಾಧಕನಾಗಿ ಶ್ರೇಷ್ಟನಾಗಬಲ್ಲನಾಗಿದ್ದು, ಗುರುಕುಲ ಶಿಕ್ಷಣ ವ್ಯವಸ್ಥೆ ಮತ್ತೆ ಪುನರುತ್ಥಾನಗೊಳ್ಳಬೇಕು ಎಂದು ಸಾಹಿತಿ ಮಾರುತಿ ಶಿಡ್ಲಾಪುರ ಹೇಳಿದರು.
ತಾಲೂಕಿನ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಧರ್ಮ, ಯೋಗ ಶಿಕ್ಷಣವೂ ಸೇರಿ ಎಲ್ಲ ರಂಗಗಳಲ್ಲಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಆದರೆ ಅನ್ನ, ಶಿಕ್ಷಣ ವ್ಯಾಪಾರದ ಸರಕಾಗಬಾರದು ಎಂಬ ನೀತಿಯ ನಡುವೆ ಬಹುದೊಡ್ಡ ವ್ಯಾಪಾರದ ಸರಕಾಗುತ್ತಿವೆ. ಈ ದೇಶದ ರೈತನನ್ನು ಉಳಿಸಿ ಬೆಳೆಸಿ ಬೆಂಬಲಿಸುವ ಅಗತ್ಯ ಈಗ ಬಹಳಷ್ಟಿದೆ ಎಂದರು.
ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಜಿತೇಂದ್ರಕುಮಾರ ಹಿಳ್ಳಿ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಆರ್.ಎಸ್.ಪೋದ್ದಾರ, ಡಾ. ವಿಲಾಸ ಕುಲಕರ್ಣಿ, ಡಾ. ಕಿರಣ ಮತ್ತಿತರರು ಉಪಸ್ಥಿತರಿದ್ದರು.
ವಚನಾ ಮತ್ತು ಪ್ರಜ್ಞಾ ಪ್ರಾರ್ಥನೆ ಹಾಡಿದರು. ಶ್ರೇಯಾ ಪರಿಚಯಿಸಿದರು. ಮಹಾದೇವಿ ಹೊನಕಡಬಿ ನಿರೂಪಿಸಿದರು. ಲಕ್ಷ್ಮಣ ಕಿತ್ತೂರ ವಂದಿಸಿದರು.