ನ್ಯೂಸ್

ಹೈಕೋರ್ಟ್‌ ಮೆಟ್ಟಿಲೇರಿದ ಸೌತ್​ ಬ್ಯೂಟಿ ಹನ್ಸಿಕಾ ಮೋಟ್ವಾನಿ! ಕಾರಣ ಹೀಗಿದೆ | Hansika

Hansika: ಬಹುಭಾಷಾ ತಾರೆ, ನಟಿ ಹನ್ಸಿಕಾ ಮೋಟ್ವಾನಿ ಮತ್ತು ಅವರ ತಾಯಿ ಜ್ಯೋತಿ ಮೋಟ್ವಾನಿ, ಇಂದು (ಏ.03) ತಮ್ಮ ವಿರುದ್ಧ ದಾಖಲಾದ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ನಟಿಯ ಸಹೋದರನ ಪತ್ನಿ ಮುಸ್ಕಾನ್ ಜೇಮ್ಸ್ ತನ್ನ ಮತ್ತು ತಾಯಿ ವಿರುದ್ಧ ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ಸಿಕಾ ಈಗ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಾರಂಗ್ ಕೊತ್ವಾಲ್ ಮತ್ತು ನ್ಯಾಯಮೂರ್ತಿ ಮೋಡಕ್ ಅವರ ಪೀಠವು, ಹನ್ಸಿಕಾ ಮತ್ತು ಅವರ ತಾಯಿಯ ಮಾತುಗಳನ್ನು ಆಲಿಸಿತು. ಇದಾದ ನಂತರ ಹನ್ಸಿಕಾ ಸಹೋದರನ ಪತ್ನಿ ಮುಸ್ಕಾನ್ ಜೇಮ್ಸ್‌ಗೆ ನೋಟಿಸ್ ಜಾರಿಗೊಳಿಸಿತು. ಜುಲೈ 3ರಂದು ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.

ಏನು ಈ ಪ್ರಕರಣ

ಹನ್ಸಿಕಾ ಅವರ ಸಹೋದರ ಪ್ರಶಾಂತ್ ಮೋಟ್ವಾನಿ 2020ರ ಡಿಸೆಂಬರ್​ನಲ್ಲಿ ಸಿರಿಯಲ್​ ನಟಿ ಮುಸ್ಕಾನ್ ಜೇಮ್ಸ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ ಎರಡು ವರ್ಷಗಳಲ್ಲೇ ದಂಪತಿಗಳು ಒಂದಷ್ಟು ವೈಯಕ್ತಿಕ ಕಾರಣಗಳಿಂದ ದೂರ ಉಳಿಯಲು ಇಚ್ಛಿಸಿ, 2022ರಲ್ಲಿ ಬೇರ್ಪಡಲು ನಿರ್ಧರಿಸಿದರು. 2024ರಲ್ಲಿ ಮುಸ್ಕಾನ್ ಹನ್ಸಿಕಾ, ಜ್ಯೋತಿ ಮತ್ತು ಪತಿ ಪ್ರಶಾಂತ್ ವಿರುದ್ಧ ದೂರು ದಾಖಲಿಸಿದರು. ಸೆಕ್ಷನ್ 498A, 323, 504, 506ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದರು. ಇದು ವಿವಾದಕ್ಕೆ ಕಾರಣವಾಯಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರ್ಷದ ಫೆಬ್ರವರಿಯಲ್ಲಿ ಮುಂಬೈ ಸೆಷನ್ಸ್ ನ್ಯಾಯಾಲಯವು, ಹನ್ಸಿಕಾ ಮತ್ತು ಜ್ಯೋತಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು. ಜಾಮೀನಿನ ಬೆನ್ನಲ್ಲೇ ತಾಯಿ-ಮಗಳು ಇಬ್ಬರೂ ಜಂಟಿಯಾಗಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಈಗ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಹನ್ಸಿಕಾ ಹೇಳಿರುವುದೇನು?

"ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ನನ್ನ ಮತ್ತು ತಾಯಿ ವಿರುದ್ಧ ಅತ್ತಿಗೆ ಎಫ್‌ಐಆರ್ ದಾಖಲಿಸಿದ್ದಾರೆ. ಇದಕ್ಕೆ ಕಾರಣ, ನಾನು ಆಕೆಗೆ ಕೇಳಿದ ಪ್ರಶ್ನೆ. ಸಹೋದರನ ಮದುವೆಗೆ 27 ಲಕ್ಷ ರೂ. ಖರ್ಚು ಮಾಡಿದ್ದೇನೆ. ಇದನ್ನು ವಾಪಾಸ್​ ಕೊಡುವಂತೆ ನಾನು ಆಕೆಯನ್ನು ಕೇಳಿದ್ದೆ. ಇದರಿಂದ ಕುಪಿತಗೊಂಡಿದ್ದ ಆಕೆ, ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ರೀತಿ ಕೇಸ್​ ದಾಖಲಿಸಿದ್ದಾರೆ" ಎಂದು ಹನ್ಸಿಕಾ ಹೇಳಿದ್ದಾರೆ,(ಏಜೆನ್ಸೀಸ್).