Commonwealth Games: ಪಾಕ್​ ಕ್ರೀಡಾಪಟುಗಳಿಗೆ ಶೇಕ್​ಹ್ಯಾಂಡ್​ ಓಕೆ; ಉಡುಗೊರೆ ಸ್ವೀಕರಿಸುವಂತಿಲ್ಲ! 
ನ್ಯೂಸ್

Commonwealth Games: ಪಾಕ್​ ಕ್ರೀಡಾಪಟುಗಳಿಗೆ ಶೇಕ್​ಹ್ಯಾಂಡ್​ ಓಕೆ; ಉಡುಗೊರೆ ಸ್ವೀಕರಿಸುವಂತಿಲ್ಲ!

ಗ್ಲಾಸ್ಗೋ: ಕಳೆದ ವರ್ಷ ಪಹಲ್ಗಾಮ್​ನಲ್ಲಿ ಪಾಕ್​ ಉಗ್ರರ ದಾಳಿ ಬಳಿಕ ಭಾರತ ಆಪರೇಷನ್​ ಸಿಂಧೂರ್​ ಮೂಲಕ ಪ್ರತಿಕಾರ ತೀರಿಸಿಕೊಂಡಿತ್ತು. ನಂತರದಲ್ಲಿ ಕ್ರಿಕೆಟ್​ ಸೇರಿದಂತೆ ಬಹುತೇಕ ಎಲ್ಲ ಕ್ರೀಡೆಗಳಲ್ಲಿ ಭಾರತೀಯರು, ಪಾಕ್​ ಕ್ರೀಡಾಪಟುಗಳಿಗೆ ಹಸ್ತಲಾಘವ ನೀಡಲು ನಿರಾಕರಿಸಿದ್ದರು. ಆದರೆ ಹಾಲಿ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ (Commonwealth Games) ಪಾಕ್​ ಕ್ರೀಡಾಪಟುಗಳು ಎದುರಾದಾಗ ಹಸ್ತಲಾಘವ, ಹೈಫೈವ್ಸ್​​ ನೀಡಬಹುದು ಅಥವಾ ಕುಶಲೋಪರಿ ವಿಚಾರಿಸಬಹುದು ಎಂದು ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ, ಪಾಕಿಸ್ತಾನಿಯರಿಂದ ಉಡುಗೊರೆಗಳನ್ನು ಸ್ವೀಕರಿಸುವಂತಿಲ್ಲ ಎಂಬ ನಿರ್ಬಂಧವನ್ನು ಹೇರಿದೆ.

ಗ್ಲಾಸ್ಗೋದಲ್ಲಿ ಸಾಂಪ್ರದಾಯಿಕ ಕ್ರೀಡಾಗ್ರಾಮಗಳಿಗೆ ಬದಲಾಗಿ ತಂಡಗಳಿಗೆ ಹೋಟೆಲ್​ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ವಲಯ ಪದ್ಧತಿಯಲ್ಲಿ ವಸತಿ ವ್ಯವಸ್ಥೆ ಹಂಚಿಕೆ ಮಾಡಿರುವುದರಿಂದ ಭಾರತ-ಪಾಕ್​ ತಂಡಗಳು ಬಹುತೇಕ ಒಂದೇ ಹೋಟೆಲ್​ನಲ್ಲಿ ಉಳಿದುಕೊಂಡಿವೆ. ಹೀಗಾಗಿ ಗೇಮ್ಸ್​ ವೇಳೆ ಉಭಯ ದೇಶಗಳ ಕ್ರೀಡಾಪಟುಗಳು ಎದುರಾದಾಗ ಸಂಪೂರ್ಣವಾಗಿ ಕಡೆಗಣಿಸುವುದು ಕಷ್ಟವಾಗುತ್ತದೆ.

ಉಭಯ ದೇಶಗಳ ಜಾವೆಲಿನ್​ ತಾರೆಯರಾದ ನೀರಜ್​ ಚೋಪ್ರಾ ಮತ್ತು ಅರ್ಷದ್​ ನದೀಂ ಒಂದೇ ಹೋಟೆಲ್​ನಲ್ಲಿ ತಂಗಿದ್ದು, ಸ್ಪರ್ಧೆಯ ವೇಳೆಯೂ ಅವರಿಗೆ ಪರಸ್ಪರ ಬೆರೆಯದಂತೆ ನಿರ್ಬಂಧ ಹೇರಲಾಗಿಲ್ಲ. ಸದ್ಯ ಭಾರತ-ಪಾಕ್​ ದ್ವಿಪಕ್ಷೀಯ ಕ್ರೀಡಾ ಸರಣಿಗಳನ್ನು ಮಾತ್ರ ನಿಷೇಧಿಸಲಾಗಿದ್ದು, ಬಹುರಾಷ್ಟ್ರಗಳ ಕ್ರೀಡಾಕೂಟದಲ್ಲಿ ಪಾಕ್​ ತಂಡ ಅಥವಾ ಕ್ರೀಡಾಪಟುಗಳ ಎದುರು ಸ್ಪರ್ಧಿಸಲು ಅವಕಾಶವಿದೆ.