ಬನ್ನೂರು: ಪಟ್ಟಣದ ಸಮೀಪದ ಮಾಕನಹಳ್ಳಿಯ ಮಕೆಹಳ್ಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಿರ್ಮಿಸಲಾದ ವಾತ್ಸಲ್ಯ ಮನೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಜಿಲ್ಲಾ ಹಿರಿಯ ನಿರ್ದೇಶಕ ವಿಜಯಕುಮಾರ್ ನಾಗನಾಳ ಚೌಡಮ್ಮ ಅವರಿಗೆ ಶುಕ್ರವಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್‌ಕುಮಾರ್, ಗ್ರಾಮೀಣ ಭಾಗದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ಕನಸನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಡುತ್ತಿದ್ದು, ಇದರಿಂದ ಲಕ್ಷಾಂತರ ಜನರು ತಮ್ಮ ಕೊನೆಗಾಲದಲ್ಲಿ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ ಎಂದು ತಿಳಿಸಿದರು.
ಜತೆಗೆ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೇಮಾವತಿ ಅಮ್ಮನವರ ಆಶಯದಂತೆ ಕೆಲಸ ನಿರ್ವಹಿಸಲಾಗದವರಿಗೆ ಮಾಸಾಶನ, ಜೀವನ ನಡೆಸಲು ಅಗತ್ಯವಾದ ವಾತ್ಸಲ್ಯ ಕಿಟ್, ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮವನ್ನು ಕೂಡ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದಾಗಿ ಅವರು ತಿಳಿಸಿದರು. ಮೈಸೂರು ಪ್ರಾದೇಶಿಕ ವ್ಯಾಪ್ತಿಯ 136ನೇ ಮನೆ ಇದಾಗಿದ್ದು, ಇದುವರೆಗೂ ರಾಜ್ಯದಲ್ಲಿ 667 ಮನೆಯನ್ನು ಫಲಾನುಭವಿಗಳಿಗೆ ಹಸ್ತಾಂತರವಾಗಿದೆ ಎಂದು ತಿಳಿಸಿದರು.
ಜನಜಾಗೃತಿ ವೇದಿಕೆಯ ಕೋಶಾಧಿಕಾರಿ ಬನ್ನೂರು ನಾರಾಯಣ್ ಮಾತನಾಡಿ, ಸಮಾಜದಲ್ಲಿ ಇಂದು ಆಸ್ತಿಗೋಸ್ಕರ ಮನೆಯನ್ನು ಭಾಗ ಮಾಡಿಕೊಳ್ಳುವ ಮನಸ್ಥಿತಿ ಇರುವಾಗ ನೊಂದವರ ಭಾವನೆಗಳಿಗೆ ಸ್ಪಂದಿಸುವವರು ಯಾರೂ ಇಲ್ಲದಾಗಿದೆ. ಅಧಿಕಾರದಲ್ಲಿರುವ ಅಧಿಕಾರಿಗಳು, ಶಾಸಕರು ಮಾಡಬೇಕಾದ ಕೆಲಸವನ್ನು ಯಾವುದೇ ಪ್ರತಿಫಲಾಪೇಕ್ಷೆ ಮಾಡದೆ ಧರ್ಮಸ್ಥಳ ಸಂಘವು ಸೇವಾ ಮನೋಭಾವದಿಂದ ಜನರಿಗೆ ಅಗತ್ಯವಿರುವ ಕೆಲಸವನ್ನು ಮಾಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಉಮಾವತಿ, ಪ್ರಾದೇಶಿಕ ಜ್ಞಾನ ವಿಕಾಸ ಯೋಜನಾಧಿಕಾರಿ ಮೂಕಾಂಬಿಕಾ, ರೈತ ಮುಖಂಡ ಎಂ.ವಿ.ಕೃಷ್ಣಪ್ಪ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಪ್ರಮೀಳಾ, ವಲಯ ಮೇಲ್ವೀಚಾರಕಿ ನಜ್ಮಾ ಸೇರಿದಂತೆ ವಲಯದ ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು, ಮಹಿಳಾ ಪ್ರತಿನಿಧಿಗಳು ಗ್ರಾಮಸ್ಥರು ಇದ್ದರು.