???????????????????????????????????? 
ನ್ಯೂಸ್

ಕೀಳರಿಮೆ ತೊರೆದು ಸಾಧನೆಗೆ ಮುಂದಾಗಿ

ಎ. ಆರ್. ರಘುರಾಮ

ಹುಣಸೂರು : ವಿಕಲತೆ ಎಂಬ ಕೀಳರಿಮೆ ತೊರೆದು ಸಾಧಿಸಬಲ್ಲೆ ಎನ್ನುವ ದೃಢಸಂಕಲ್ಪ ರೂಢಸಿಕೊಳ್ಳಬೇಕು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಿಕಲಚೇತನರು ಆತ್ಮವಿಶ್ವಾಸದೊಂದಿಗೆ ಬದುಕಬೇಕು. ಸಮಾಜದ ಕನಿಕರ ಗಳಿಸುವುದಕ್ಕಿಂತ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದರು. ತಾಲೂಕಿನಲ್ಲಿ 5 ಸಾವಿರ ಅಂಗವಿಕಲರು ಇದ್ದಾರೆ. ಶೇ. 45 ಕ್ಕಿಂತ ಹೆಚ್ಚು ವಿಕಲತೆ ಇದ್ದವರಿಗೆ ಸರ್ಕಾರ ಸೌಲಭ್ಯಗಳನ್ನು ನೀಡುತ್ತಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಸರ್ಕಾರಿಂದ ನೀಡುವ ಉಚಿತ ಬಸ್ ಪಾಸ್ ಸೌಲಭ್ಯ ತಾಲೂಕಿನ ಅಂಗ ವಿಕಲರಿಗೆ ಸಿಕ್ಕಿಲ್ಲ ಎಂಬ ಮಾಹಿತಿ ಬಂದಿದೆ. ಹುಣಸೂರು ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿ ಸವಲತ್ತು ಕಲ್ಪಿಸುವಂತೆ ವ್ಯವಸ್ಥೆ ಮಾಡುವೆ ಎಂಬ ಭರವಸೆ ನೀಡಿದರು.
ಸ್ವಾಮಿ ವಿವೇಕಾನಂದ ಯೂತ್ ಮೊಮೆಂಟ್ ಸಂಸ್ಥೆ ಮುಖ್ಯಸ್ಥ ರಮೇಶ್ ಮಾತನಾಡಿ, ಅಂಗವಿಕಲರಿಗೆ ಅಡೆತಡೆ ಇಲ್ಲದ ಶೌಚಗೃಹವನ್ನು ಪ್ರತಿ ಮನೆಯಲ್ಲೂ ನಿರ್ಮಿಸಿಕೊಳ್ಳಲು ಸರ್ಕಾರ ಆರ್ಥಿಕ ಸಹಾಯ ನೀಡುವಂತಾಗಬೇಕು ಎಂದರು.
ಅಂಗವಿಕಲರಿಗೆ ಗುರುತಿನ ಚೀಟಿ ವಿತರಿಸುವಲ್ಲಿ ಸಹಕರಿಸಿದ 41 ಜನ ನೌಕರರಿಗೆ ಗೌರವಿಸಲಾಯಿತು. ತಹಸೀಲ್ದಾರ್ ಮಂಜುನಾಥ್, ನಗರಸಭೆ ಸದಸ್ಯ ದೇವರಾಜ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ ಮಾತನಾಡಿದರು. ಉಪ ತಹಸೀಲ್ದಾರ್ ಅರುಣ್ ಕುಮಾರ್, ಸವಿತಾ, ಶ್ರೀಧರ ಹರವೆ, ಶ್ರೀನಿವಾಸ, ದಿನೇಶ್, ತ್ರಿನೇತ್ರ, ಪ್ರಭಾಕರ್ ಇದ್ದರು.