ವಿಜಯಪುರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಬಿಜಿ ರಾಮ್ ಜಿ ವಿರೋಧಿಸಿ ಪ್ರತಿಭಟಿಸಿದರು. ಮುಖಂಡರಾದ ಅಬ್ದುಲ್‌ಹಮೀದ್ ಮುಶ್ರೀಫ್ ಎಸ್.ಎಂ. ಪಾಟೀಲ ಗಣಿಹಾರ, ಮಹ್ಮದ್‌ರಫೀಕ್ ಟಪಾಲ ಇತರರಿದ್ದಾರೆ. 
ನ್ಯೂಸ್

ಮನರೇಗಾ ಉಳಿವಿಗಾಗಿ `ಕೈ'ನಡಿಗೆ

ಕೇಂದ್ರ ಸರ್ಕಾರದ ವಿಬಿಜಿ ರಾಮ್ ಜಿ ಯೋಜನೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ತಲೆ ಮೇಲೆ ಪ್ಲಾಸ್ಟಿಕ್ ಬುಟ್ಟಿ ಹೊತ್ತು, ತಲೆಗೆ ಟವೆಲ್ ಸುತ್ತಿಕೊಂಡು ಪ್ರತಿಭಟಿಸಿದರು. ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಪಾದಯಾತ್ರೆ ನಡೆಸಿದರು.
ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಿಸುವ ಮೂಲಕ ಮಹತ್ತರ ಯೋಜನೆಯೊಂದು ಮಣ್ಣು ಪಾಲು ಮಾಡಲು ಹೊರಟಿದೆ. ಬಡವರಿಗೆ ಆಸರೆಯಾಗಿದ್ದ ಯೋಜನೆಯ ಸ್ವರೂಪ ಬದಲಿಸಿ ಕ್ರಮೇಣವಾಗಿ ಯೋಜನೆಯನ್ನೇ ಸ್ಥಗಿತಗೊಳಿಸುವ ಹುನ್ನಾರ ನಡೆಸಿದೆ. ಇದೊಂದು ಬಡವರ ವಿರೋಧಿ ಸರ್ಕಾರ ಎಂದು ಹರಿಹಾಯ್ದರು.
ಬಿಜೆಪಿ ಸದಾ ದ್ವೇಷದ ರಾಜಕಾರಣ ಮಾಡಿಕೊಂಡೇ ಬಂದಿದೆ. ಬಿಜೆಪಿಗೆ ಬಡವರು, ಅಲ್ಪಸಂಖ್ಯಾತರು, ದಲಿತರು, ಕಾರ್ಮಿಕರು, ಹೆಣ್ಣುಮಕ್ಕಳನ್ನು ಕಂಡರೆ ಯಾವಾಗಲೂ ಆಗಿ ಬರುವುದಿಲ್ಲ. ಬಡವರ ವಿರೋಧಿ ಸರ್ಕಾರ. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿರೋಽ ಸರ್ಕಾರ. ಮಾತ್ರವಲ್ಲ, ಬಡವರು ಮತ್ತು ಕೂಲಿ ಕಾರ್ಮಿಕರ ವಿರೋಧಿ ಸರ್ಕಾರ ಎಂದು ಹರಿಹಾಯ್ದರಲ್ಲದೇ ಪ್ರಸ್ತುತ ಮನರೇಗಾ ಯೋಜನೆಯನ್ನು ಅಳಿಸಿ ಹಾಕುತ್ತಿರುವುದೇ ಇದಕ್ಕೆಲ್ಲ ಸಾಕ್ಷಿ ಎಂದರು.
ಮಹಾತ್ಮ ಗಾಂಧಿ ಅವರನ್ನು ಕಂಡರೆ ಬಿಜೆಪಿಗೆ ದ್ವೇಷ. ಏಕೆಂದರೆ ಮಹಾತ್ಮ ಗಾಂಧಿ ಅವರು ಶಾಂತಿ, ಸತ್ಯ ಮತ್ತು ಅಹಿಂಸೆಯ ಮೂಲಕ ಈ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟರು. ಅವರೆಂದೂ ಕೋಮುವಾದವನ್ನು ಪೋಷಿಸಲಿಲ್ಲ. ಸರ್ವರನ್ನೂ ಸಮಾನರಾಗಿ ಕಂಡರು. ಈ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದರು. ಹೀಗಾಗಿ ಬಿಜೆಪಿಗೆ ಗಾಂಧಿಜಿಯವರ ಹೆಸರು ಕಂಡರೆ ದ್ವೇಷ ಎಂದರು.
ಬಿಜೆಪಿ ಬಂಡವಾಳ ಶಾಹಿ ಪರವಾಗಿದೆ. ಬಡವರ ಪರ ಒಂದೇ ಒಂದು ಯೋಜನೆ ನೀಡಲಾಗದ ಬಿಜೆಪಿಗರಿಗೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಕಂಡರೆ ಹೊಟ್ಟೆಯುರಿ. ಬಡವರಿಗೆ ಆಹಾರ ನೀಡುವುದನ್ನು, ಉದ್ಯೋಗ ನೀಡುವುದನ್ನು, ಶೈಕ್ಷಣಿಕವಾಗಿ ಉಚಿತ ಸೌಲಭ್ಯ ನೀಡುವುದನ್ನೆಂದೂ ಈ ಬಿಜೆಪಿಗರು ಸಹಿಸಲ್ಲ. ಕೇವಲ ಬಂಡವಾಳ ಶಾಹಿಗಳ ಪರವಾಗಿಯೇ ಆಡಳಿತ ನಡೆಸುತ್ತಾ ಬಂದಿರುವ ಬಿಜೆಪಿಗರಿಗೆ ಇದೀಗ ಉದ್ಯೋಗ ಖಾತ್ರಿ ಯೋಜನೆಯ ಮೇಲೂ ಕಣ್ಣು ಬಿದ್ದಿದೆ. ಹೀಗಾಗಿ ಗ್ರಾಮೀಣ ಬದುಕಿಗೆ ಆಸರೆಯಾಗಿರುವ ಮನರೇಗಾ ಯೋಜನೆಯನ್ನು ಅಳಿಸಿ ಹಾಕಲು ಹೊರಟಿದ್ದು, ಅದಕ್ಕೆಂದೂ ಕಾಂಗ್ರೆಸ್ ಅವಕಾಶ ಕೊಡುವುದಿಲ್ಲವೆಂದರು.
ಮುಖಂಡರಾದ ಅಬ್ದುಲ್‌ಹಮೀದ್ ಮುಶ್ರೀಫ್, ಎಸ್.ಎಂ. ಪಾಟೀಲ ಗಣಿಹಾರ, ಮಹ್ಮದ್‌ರಫೀಕ್ ಟಪಾಲ, ಆರತಿ ಶಹಾಪುರ, ವೈಜನಾಥ ಕರ್ಪೂರಮಠ, ವಿಜಯಕುಮಾರ ಘಾಟಗೆ, ಹೊನ್ನಮಲ್ಲ ಸಾರವಾಡ, ಅಪ್ಪು ಪೂಜಾರಿ, ವಸಂತ ಹೊನಮೊಡೆ, ಎಂ.ಎಂ.ಮುಲ್ಲಾ, ಫಯಾಜ್ ಕಲಾದಗಿ, ಶರಣಪ್ಪ ಯಕ್ಕುಂಡಿ, ಪರಶುರಾಮ ಹೊಸಮನಿ, ವಿರೇಶ ಕಲಾಲ, ಲಾಲಸಾಬ ಕೊರಬು, ಆನಂದ ಜಾಧವ, ಬಾಬು ಯಾಳವಾರ, ಸಂತೋಷ ಬಾಲಗಾಂವಿ, ಕೃಷ್ಣಾ ಲಮಾಣಿ, ಗಂಗುಬಾಯಿ ಧುಮಾಳೆ, ಕಾಶಿಬಾಯಿ ಹಡಪದ, ಭಾರತಿ ನಾವಿ, ಕಲ್ಲಪ್ಪ ಕಲಶೆಟ್ಟಿ, ಅಶೋಕ ಬಜಂತ್ರಿ, ಅರುಣ ಗವಳಿ, ಅರುಣ ಬಜಂತ್ರಿ, ಈರಪ್ಪ ಕುಂಬಾರ ಇತರರಿದ್ದರು.