ಕೋಲಾರ ನಗರದ ನಾರಾಯಣಿ ಕಲ್ಯಾಣ ಂಂಟಪದಲ್ಲಿ ಗುರುವಾರ ನಡೆದ ದಲಿತ ಸಂಘಟನೆಗಳ ಸ್ವಾಭಿಮಾನ ಸಮಾವೇಶವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಆರ್.ಅಶೋಕ, ಎಸ್.ಮುನಿಸ್ವಾಮಿ, ಇಂಚರ ಗೋವಿಂದರಾಜು, ಚಂದ್ರಾರೆಡ್ಡಿ ಇದ್ದರು. 
ನ್ಯೂಸ್

ಪಾಕ್‌ಪರ ಘೋಷಣೆ ಕೂಗಿದವರಿಗೆ ಕೈ ರಕ್ಷಣೆ

ಕೋಲಾರ: ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದವರಿಗೆ ಸಿದ್ದರಾಮಯ್ಯ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.

ನಗರದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ದಲಿತ ಸಂಘಟನೆಗಳಿಂದ ಗುರುವಾರ ಆಯೋಜಿಸಿದ್ದ ದಲಿತ ಸಂಘಟನೆಗಳ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿ, ಪಾಕಿಸ್ತಾನ ಅನೇಕ ಬಾರಿ ದೇಶದ ಮೇಲೆ ದಾಳಿ ಮಾಡಿದೆ. ಆದರೆ, ಇತ್ತೀಚೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್‌ನವರೇ ಕರೆದುಕೊಂಡು ಬಂದವರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು. ಇಂತಹವರಿಗೆ ಶಿಕ್ಷೆ ನೀಡದೆ ಕಾಂಗ್ರೆಸ್ ಸರ್ಕಾರ ಸುಮ್ಮನಿದೆ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಾಗ ಅನ್ನಭಾಗ್ಯ ಎಂದು ಹೇಳುತ್ತಾರೆ. ಆದರೆ ಅದು ನಿಜವಾಗಿಯೂ ಮೋದಿ ಭಾಗ್ಯವಾಗಿದೆ. ಸಿದ್ದರಾಮಯ್ಯ ಅವರದ್ದು ಕನ್ನ ಭಾಗ್ಯವಾಗಿದೆ ಎಂದು ಕಿಡಿಕಾರಿದರು.
ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಈಗ ಕಾಂಗ್ರೆಸ್ ನಾಯಕರು ಮಾತಾಡುತ್ತಾರೆ. ಆದರೆ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದೇ ಕಾಂಗ್ರೆಸ್. ಅಂಬೇಡ್ಕರರು ತೀರಿಕೊಂಡಾಗ ಸ್ಮಾರಕ ನಿರ್ಮಿಸಲು ಕಾಂಗ್ರೆಸ್ ಜಾಗ ಕೊಡಲಿಲ್ಲ. ಇಷ್ಟೆಲ್ಲ ಅನ್ಯಾಯ ಮಾಡಿದ ಕಾಂಗ್ರೆಸ್‌ಗೆ ದಲಿತರು ಮತ ನೀಡಬೇಕೇ ಎಂದು ಆಲೋಚಿಸಬೇಕು. ಪ್ರಧಾನಿ ಮೋದಿ ಅಂಬೇಡ್ಕರರ ಐದು ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಹಾಗಾಗಿ ಅವರಿಗೆ ದಲಿತರು ಮತ ನೀಡಬೇಕು ಎಂದು ಕೋರಿದರು.

ದಲಿತರಿಗೆ ಸಹಾಯ
ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಅವರ ತಂದೆ ಐಎಎಸ್ ಅಧಿಕಾರಿಯಾಗಿ ದಲಿತರಿಗೆ ಸಹಾಯ ಮಾಡಿದ್ದಾರೆ. ವಿದ್ಯಾವಂತ ಯುವಕ ಮಲ್ಲೇಶ್ ಅವರಿಗೆ ಎಲ್ಲರೂ ಬೆಂಬಲಿಸಬೇಕು. ಹಿಂದಿನ ಸಂಸದ ಮುನಿಸ್ವಾಮಿ ಅವರ ಹೆಸರನ್ನು ಹಿಂದೆ ನಾನೇ ಶಿಫಾರಸು ಮಾಡಿದ್ದೆ. ಆಗಲೂ ಎಲ್ಲರೂ ಅಪಾರ ಬೆಂಬಲ ನೀಡಿದ್ದರು. ಈಗಲೂ ಅದೇ ರೀತಿ ಬೆಂಬಲ ನೀಡಬೇಕು ಎಂದು ಆರ್.ಅಶೋಕ್ ಮನವಿ ಮಾಡಿದರು.

  • ಎಸ್ಸಿ, ಎಸ್ಟಿ ಸಮಾವೇಶಕ್ಕಿಲ್ಲ ಆಹ್ವಾನ
    ದಲಿತ ಸಂಘಟನೆಗಳ ಸ್ವಾಭಿಮಾನಿ ಸಮಾವೇಶಕ್ಕೆ ಜಿಲ್ಲೆಯ ಪ್ರಮುಖ ಮುಖಂಡರನ್ನು ಆಹ್ವಾನಿಸಿಲ್ಲ ಎಂದು ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಕೆಲ ನಾಯಕರ ಏಕಪಕ್ಷೀಯ ನಿರ್ಧಾರಗಳಿಂದ ಪಕ್ಷದ ಸಂಘಟನೆ ಹಾಗೂ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದರು. ಜಿಲ್ಲೆಯಲ್ಲಿ ನನಗೂ ಸೇರಿ ಮಾಜಿ ಶಾಸಕ ಬಿ.ಪಿ.ಮುನಿವೆಂಕಟಪ್ಪ, ಮಹೇಶ್ ಹಾಗೂ ಇತರ ಕ್ಷೇತ್ರಗಳಲ್ಲಿನ ಪ್ರಮುಖರನ್ನು ಸಮಾವೇಶಕ್ಕೆ ಕರೆದಿಲ್ಲ. ಏಕಪಕ್ಷೀಯ ನಿರ್ಧಾರಗಳನ್ನು ಕೈ ಬಿಟ್ಟು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಸಮನ್ವಯದಿಂದ ಗೌರವ ಕಾಪಾಡಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಅವರಿಗೆ ಪರೋಕ್ಷವಾಗಿ ಕಿವಿಮಾತು ಹೇಳಿದರು.